ನವದೆಹಲಿ: ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಹೆಚ್ಚಳವಾಗಿದೆ. ಇದನ್ನು ನಿಯಂತ್ರಿಸಲು 840 ಟನ್ ಈರುಳ್ಳಿ ಹೊತ್ತ ಎರಡನೇ ರೈಲು ಬುಧವಾರ ದೆಹಲಿಗೆ ತಲುಪಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಅಕ್ಟೋಬರ್ 20ರಂದು 1,600 ಟನ್ ಈರುಳ್ಳಿ ಹೊತ್ತ ಕಾಂದಾ ಎಕ್ಸ್‌ಪ್ರೆಸ್ ರೈಲು ದೆಹಲಿಗೆ ತಲುಪಿತ್ತು.
ನಾಫೆಡ್ ಮೂಲಕ ದೆಹಲಿಯ ಆಜಾದ್‌ಪುರ್ ಮಂಡಿಯಲ್ಲಿ ರಿಯಾಯಿತಿ ದರದಡಿ ಈರುಳ್ಳಿಯನ್ನು ಪ್ರತಿ ಕೆ.ಜಿಗೆ ₹35ರಂತೆ ಮಾರಾಟ ಮಾಡಲಾಗುವುದು. ಪ್ರಸ್ತುತ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿಗೆ ₹60ರಿಂದ ₹80 ದರ ಇದೆ. ಸಮಯ ಮತ್ತು ವೆಚ್ಚದ ಪ್ರಮಾಣ ತಗ್ಗಿಸಲು ರೈಲಿನ ಮೂಲಕ ಈರುಳ್ಳಿ ಸಾಗಣೆಗೆ ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದೆ.
ಅಕ್ಟೋಬರ್ 26ರಂದು 840 ಟನ್ ಈರುಳ್ಳಿಯನ್ನು ರೈಲಿನ ಮೂಲಕ ಚೆನ್ನೈಗೆ ಸಾಗಣೆ ಮಾಡಲಾಗಿದೆ. ಇಷ್ಟೇ ಪ್ರಮಾಣದ ಈರುಳ್ಳಿಯನ್ನು ನಾಸಿಕ್‌ನಿಂದ ಗುವಾಹಟಿಗೆ ಸಾಗಣೆ ಮಾಡಲಾಗಿದೆ.
ರಾಷ್ಟ್ರೀಯ ಸಹಕಾರ ಗ್ರಾಹಕರ ಮಹಾಮಂಡಳವು (ಎನ್‌ಸಿಸಿಎಫ್) ದೇಶದ 22 ರಾಜ್ಯಗಳ 104 ಸ್ಥಳಗಳಲ್ಲಿ ರಿಯಾಯಿತಿ ದರದಲ್ಲಿ ಈರುಳ್ಳಿ ಮಾರಾಟ ಮಾಡುತ್ತಿದೆ. ನಾಫೆಡ್ 16 ರಾಜ್ಯಗಳ 52 ಸ್ಥಳಗಳಲ್ಲಿ ಮಾರಾಟ ಮಾಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.