ನವದೆಹಲಿ: ದೇಶದಲ್ಲಿ ಸತತ ಎರಡು ವರ್ಷಗಳಿಂದ ಕುಸಿದಿರುವ ಜವಳಿ ರಫ್ತಿಗೆ ಕೇಂದ್ರ ಸರ್ಕಾರವು ಉತ್ತೇಜನ ನೀಡಲು ಮುಂದಾಗಿದೆ ಎಂದು ಕೇಂದ್ರ ಜವಳಿ ಸಚಿವಾಲಯದ ಕಾರ್ಯದರ್ಶಿ ರಚನಾ ಶಾ ಹೇಳಿದ್ದಾರೆ.
2030ರ ವೇಳೆಗೆ ದೇಶದ ಜವಳಿ ಉದ್ಯಮದ ರಫ್ತು ಮೌಲ್ಯವನ್ನು ₹8.35 ಲಕ್ಷ ಕೋಟಿಗೆ ತಲುಪುವ ಗುರಿ ಹೊಂದಲಾಗಿದೆ ಎಂದು ಹೇಳಿದ್ದಾರೆ.
2021–22ನೇ ಆರ್ಥಿಕ ವರ್ಷದಲ್ಲಿ ರಫ್ತಿನ ಮೌಲ್ಯವು ₹3.42 ಲಕ್ಷ ಕೋಟಿ ಇತ್ತು. 2022–23ರಲ್ಲಿ ₹2.96 ಲಕ್ಷ ಕೋಟಿಗೆ ಇಳಿಕೆಯಾಗಿತ್ತು. 2023–24ನೇ ಹಣಕಾಸು ವರ್ಷದಲ್ಲಿ ಶೇ 3.24ರಷ್ಟು ಕಡಿಮೆಯಾಗಿದ್ದು, ಒಟ್ಟು ರಫ್ತು ಮೌಲ್ಯ ₹2.87 ಲಕ್ಷ ಕೋಟಿ ಆಗಿದೆ ಎಂದು ತಿಳಿಸಿದ್ದಾರೆ.
‘ಜವಳಿ ರಫ್ತು ಪ್ರಮಾಣ ಕುಸಿಯಲು ಕೆಂಪು ಸಮುದ್ರದ ಬಿಕ್ಕಟ್ಟು ಪ್ರಮುಖ ಕಾರಣವಾಗಿದೆ’ ಎಂದು ಹೇಳಿದ್ದಾರೆ.
ಜಾಗತಿಕ ಬಿಕ್ಕಟ್ಟು ಇನ್ನೂ ಶಮನಗೊಂಡಿಲ್ಲ. ಇದರ ನಡುವೆಯೂ ಮೊದಲ ತ್ರೈಮಾಸಿಕದಲ್ಲಿ ಕೆಲವು ರಫ್ತುದಾರರು ಹೊಸ ಆರ್ಡರ್‌ಗಳನ್ನು ಪಡೆದಿದ್ದಾರೆ. ಮುಂಬರುವ ದಿನಗಳಲ್ಲಿ ವಹಿವಾಟು ಸುಧಾರಿಸುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
‘ರಫ್ತು ಮಾಡುವ ಉತ್ಪನ್ನಗಳಿಗೆ ಉತ್ಪಾದನಾ ಆಧಾರಿತ ಉತ್ತೇಜನೆ ಯೋಜನೆಯಡಿ (ಪಿಎಲ್‌ಐ) ಪ್ರೋತ್ಸಾಹ ನೀಡಲು ಗಮನಹರಿಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.
ಬಾಂಗ್ಲಾದೇಶ ಮತ್ತು ವಿಯೆಟ್ನಾಂನಲ್ಲಿ ಕಾರ್ಮಿಕ ವೆಚ್ಚ ಕಡಿಮೆಯಿದೆ. ಹಾಗಾಗಿ, ಅಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜವಳಿ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಆ ದೇಶಗಳು ಮುಕ್ತ ವ್ಯಾಪಾರ ಒಪ್ಪಂದಗಳ ಪ್ರಯೋಜನ ಪಡೆಯುತ್ತಿವೆ. ಇದರಿಂದ ಜಾಗತಿಕ ಮಟ್ಟದಲ್ಲಿ ಭಾರತವು ಉಡುಪುಗಳ ವ್ಯಾಪಾರದಲ್ಲಿ ತನ್ನ ನೆಲೆ ಕಳೆದುಕೊಳ್ಳುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.