ನವದೆಹಲಿ: ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯ (ಪಿಎಂಜಿಕೆಎವೈ) ಫಲಾನುಭವಿಗಳಿಗೆ ಅನುಕೂಲ ಕಲ್ಪಿಸಲು ಅಕ್ಟೋಬರ್‌ನಿಂದ ಈ ಯೋಜನೆಯಡಿ ಗೋಧಿ ಹಂಚಿಕೆಯನ್ನು ಏರಿಕೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಬುಧವಾರ ತಿಳಿಸಿದೆ.
2022ರ ಮೇ ತಿಂಗಳಿನಿಂದ ಯೋಜನೆಗೆ ನಿಗದಿಯಾಗಿದ್ದ 1.82 ಕೋಟಿ ಟನ್ ಗೋಧಿಯನ್ನು 71 ಲಕ್ಷ ಟನ್‌ಗೆ ಮಿತಿಗೊಳಿಸಲಾಗಿತ್ತು. ದೇಶೀಯ ಮಟ್ಟದಲ್ಲಿ ಉತ್ಪಾದನೆ ಕಡಿಮೆಯಾಗಿದ್ದರಿಂದ ಸರ್ಕಾರವು ಈ ಕ್ರಮ ಕೈಗೊಂಡಿತ್ತು.
‘ಸರ್ಕಾರವು 100 ದಿನಗಳನ್ನು ಪೂರೈಸಿದೆ. ಹಾಗಾಗಿ, ಸರ್ಕಾರವು ಯೋಜನೆಗೆ ಹೆಚ್ಚುವರಿಯಾಗಿ 35 ಲಕ್ಷ ಟನ್ ಗೋಧಿ ಹಂಚಿಕೆಗೆ ಒಪ್ಪಿಗೆ ನೀಡಿದೆ’ ಎಂದು ಕೇಂದ್ರ ಆಹಾರ ಸಚಿವಾಲಯದ ಕಾರ್ಯದರ್ಶಿ ಸಂಜೀವ್ ಚೋಪ್ರಾ ತಿಳಿಸಿದ್ದಾರೆ.
ಮತ್ತೆ ಫಲಾನುಭವಿಗಳಿಗೆ ಗೋಧಿ ಮತ್ತು ಅಕ್ಕಿಯನ್ನು ಸಮ ಪ್ರಮಾಣದಲ್ಲಿ ವಿತರಣೆಗೆ ಸರ್ಕಾರ ಮುಂದಾಗಿದೆ. ಹಾಗಾಗಿ, ಮುಂದಿನ ವರ್ಷದ ಮಾರ್ಚ್‌ವರೆಗೂ ಈ ಹಂಚಿಕೆ ಮುಂದುವರಿಯಲಿದೆ ಎಂದು ಹೇಳಿದ್ದಾರೆ.
ದೇಶದಲ್ಲಿ 2023–24ನೇ ಆರ್ಥಿಕ ವರ್ಷದಲ್ಲಿ 11.29 ಕೋಟಿ ಟನ್ ಗೋಧಿ ಉತ್ಪಾದನೆಯಾಗಿದೆ. ಹಾಗಾಗಿ, ಗೋಧಿ ದಾಸ್ತಾನು ಸಾಕಷ್ಟಿದೆ ಎಂದು ವಿವರಿಸಿದ್ದಾರೆ.
ಶೀಘ್ರದಲ್ಲಿಯೇ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿ (ಒಎಂಎಸ್‌ಎಸ್) ಗೋಧಿ ಮಾರಾಟ ಮಾಡುವ ಉದ್ದೇಶ ಹೊಂದಿಲ್ಲ. ಗೋಧಿ ಬೆಲೆ ಸ್ಥಿರತೆಗೆ ಆದ್ಯತೆ ನೀಡಲಾಗುವುದು ಎಂದರು.
ಪಿಎಂಜಿಕೆಎವೈ ಯೋಜನೆಯಡಿ ದೇಶದ 80 ಕೋಟಿ ಬಡವರಿಗೆ ಉಚಿತವಾಗಿ 5 ಕೆ.ಜಿ ಆಹಾರ ಧಾನ್ಯ ವಿತರಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.