ನವದೆಹಲಿ: ಭಾರತೀಯರ ದೇಹಕ್ಕೆ ಹೆಚ್ಚು ಸೂಕ್ತವಾಗಿ ಹೊಂದಿಕೆಯಾಗುವ, ಸಿದ್ಧ ಉಡುಪುಗಳ ತಯಾರಿಕೆಯಲ್ಲಿ ಬಳಕೆ ಮಾಡಬೇಕಿರುವ ‘ಇಂಡಿಯಾಸೈಜ್’ ಅಳತೆಗೋಲನ್ನು ಶೀಘ್ರದಲ್ಲಿಯೇ ಚಾಲ್ತಿಗೆ ತರಲಾಗುವುದು ಎಂದು ಕೇಂದ್ರ ಜವಳಿ ಸಚಿವ ಗಿರಿರಾಜ್ ಸಿಂಗ್ ಗುರುವಾರ ಹೇಳಿದ್ದಾರೆ.
ಈಗ ದೇಶದಲ್ಲಿ ಸಿದ್ಧ ಉಡುಪುಗಳನ್ನು ಮಾರಾಟ ಮಾಡುವ ದೇಶಿ ಹಾಗೂ ಅಂತರರಾಷ್ಟ್ರೀಯ ಬ್ರ್ಯಾಂಡ್‌ಗಳು ಅಮೆರಿಕ ಹಾಗೂ ಬ್ರಿಟನ್ನಿನ ಅಳತೆಗೋಲು ಆಧರಿಸಿ, ‘ಸ್ಮಾಲ್’, ‘ಮೀಡಿಯಂ’ ಮತ್ತು ‘ಲಾರ್ಜ್’ ಗಾತ್ರದ ಬಟ್ಟೆಗಳನ್ನು ಮಾರುಕಟ್ಟೆಗೆ ತರುತ್ತಿವೆ.
ಆದರೆ ಪಾಶ್ಚಿಮಾತ್ಯರ ದೇಹಕ್ಕೂ, ಭಾರತೀಯರ ದೇಹಕ್ಕೂ ವ್ಯತ್ಯಾಸವಿದೆ. ಹೀಗಾಗಿ, ಈಗಿನ ಕೆಲವು ಬ್ರ್ಯಾಂಡ್‌ಗಳ ಬಟ್ಟೆಗಳು ಭಾರತೀಯರಿಗೆ ಸರಿಹೊಂದುತ್ತಿಲ್ಲ. ಅದಕ್ಕಾಗಿ ‘ಇಂಡಿಯಾಸೈಜ್ ವ್ಯವಸ್ಥೆಯನ್ನು ಶೀಘ್ರದಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟಿಸಲು ಯೋಜಿಸಿದ್ದೇವೆ’ ಎಂದು ಹೇಳಿದ್ದಾರೆ.
ಜವಳಿ ಸಚಿವಾಲಯವು ‘ಇಂಡಿಯಾಸೈಜ್’ ಯೋಜನೆಗೆ ಈಗಾಗಲೇ ಅನುಮೋದನೆ ನೀಡಿದೆ. ಭಾರತೀಯ ಸಿದ್ಧ ಉಡುಪು ಉದ್ಯಮವು ಭಾರತೀಯರ ದೇಹಕ್ಕೆ ಸರಿಹೊಂದುವ ಸಿದ್ಧ ಉಡುಪು ತಯಾರಿಸಲು ನೆರವಾಗುವ ಉದ್ದೇಶವನ್ನು ಇದು ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.