ADVERTISEMENT

ಜಿಎಸ್‌ಟಿಆರ್‌–3ಬಿ ವಿಳಂಬಕ್ಕೆ ಶುಲ್ಕ ಇಲ್ಲ

ಪಿಟಿಐ
Published 2 ಮೇ 2021, 17:24 IST
Last Updated 2 ಮೇ 2021, 17:24 IST

ನವದೆಹಲಿ:ಮಾರ್ಚ್‌ ಮತ್ತು ಏಪ್ರಿಲ್‌ಗೆ ಸಂಬಂಧಿಸಿದಂತೆ ಜಿಎಸ್‌ಟಿಆರ್‌–3ಬಿ ಸಲ್ಲಿಕೆ ಹಾಗೂ ತೆರಿಗೆ ಪಾವತಿಯಲ್ಲಿನ ವಿಳಂಬಕ್ಕೆ ತೆರಬೇಕಾದ ಶುಲ್ಕವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಿದೆ. ಅಲ್ಲದೆ ವಿಳಂಬ ಪಾವತಿಗೆ ವಿಧಿಸುತ್ತಿದ್ದ ಬಡ್ಡಿ ದರವನ್ನೂ ಕಡಿತ ಮಾಡಿದೆ.

ಕೋವಿಡ್‌–19 ಸಾಂಕ್ರಾಮಿಕದ ಎರಡನೇ ಅಲೆಯ ಸಂದರ್ಭದಲ್ಲಿ ತೆರಿಗೆ ಪಾವತಿದಾರು ಜಿಎಸ್‌ಟಿ ನಿಯಮಗಳನ್ನು ಪಾಲಿಸುವಲ್ಲಿ ಎದುರಿಸುತ್ತಿರುವ ಸವಾಲುಗಳನ್ನು ಗಮನದಲ್ಲಿ ಇಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ಪ್ರಕಟಣೆ ತಿಳಿಸಿದೆ.

ವಾರ್ಷಿಕ ₹ 5 ಕೋಟಿಗಿಂತಲೂ ಅಧಿಕ ಮೊತ್ತದ ವಹಿವಾಟು ನಡೆಸುವವರಿಗೆ ಜಿಎಸ್‌ಟಿಆರ್‌–3ಬಿ ಸಲ್ಲಿಸಲು 15 ದಿನಗಳ ಹೆಚ್ಚುವರಿ ಕಾಲಾವಕಾಶ ನೀಡಲಾಗಿದೆ. ವಿಳಂಬ ಶುಲ್ಕ ಇಲ್ಲದೆಯೇ ತೆರಿಗೆ ಪಾವತಿಸಲು ಅವಕಾಶ ನೀಡಲಾಗಿದೆ.

ADVERTISEMENT

ವಾರ್ಷಿಕ ₹ 5 ಕೋಟಿಯವರೆಗಿನ ವಹಿವಾಟು ನಡೆಸುವವರಿಗೆ ಜಿಎಸ್‌ಟಿಆರ್–3ಬಿ ಸಲ್ಲಿಸಲು 30 ದಿನಗಳ ಹೆಚ್ಚುವರಿ ಕಾಲಾವಕಾಶ ಸಿಗಲಿದೆ. ವಿಳಂಬ ಶುಲ್ಕ ಇರುವುದಿಲ್ಲ ಎಂದು ಹೇಳಿದೆ.

ತಡವಾಗಿ ರಿಟರ್ನ್ಸ್‌ ಸಲ್ಲಿಸುವವರಿಗೆ ಬಡ್ಡಿ ದರ ಇಳಿಕೆ ಮಾಡಲಾಗಿದೆ. 15 ದಿನಗಳ ಹೆಚ್ಚುವರಿ ಅವಧಿಗೆ ಶೇಕಡ 9ರ ಬಡ್ಡಿದರ ಅನ್ವಯವಾಗಲಿದ್ದು, ಆ ಬಳಿಕ ಶೇ 18ರಷ್ಟು ಬಡ್ಡಿದರ ತೆರಬೇಕಾಗುತ್ತದೆ.

ಜಿಎಸ್‌ಟಿಆರ್‌–1 ಸಲ್ಲಿಕೆ ಅವಧಿಯನ್ನು ಮೇ 11ರಿಂದ ಮೇ 26ರವರೆಗೆ ವಿಸ್ತರಿಸಲಾಗಿದೆ. ಕಂಪೋಸಿಷನ್‌ ಸ್ಕೀಮ್‌ ಆಯ್ಕೆ ಮಾಡಿಕೊಂಡಿರುವವರಿಗೆ ಜಿಎಸ್‌ಟಿಆರ್–4 ಸಲ್ಲಿಸಲು ಮೇ 31ರವರೆಗೆ ಅವಕಾಶ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.