ನವದೆಹಲಿ : ‘ಪ್ರಸ್ತಾವಿತ ಮುಕ್ತ ವ್ಯಾಪಾರ ಒಪ್ಪಂದ ಕುರಿತ ಮಾತುಕತೆಗಳು ನಿಧಾನಗತಿಯಲ್ಲಿ ಸಾಗುತ್ತಿವೆ. ಈ ಬಗ್ಗೆ ಬಿಮ್ಸ್ಟೆಕ್ ಗುಂಪಿನ ಸದಸ್ಯ ರಾಷ್ಟ್ರಗಳು ಮರುಪರಿಶೀಲನೆ ನಡೆಸಬೇಕಿದೆ’ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಬುಧವಾರ ಸಲಹೆ ನೀಡಿದ್ದಾರೆ.
ಪೂರ್ಣ ಪ್ರಮಾಣದ ಮುಕ್ತ ವ್ಯಾಪಾರ ಒಪ್ಪಂದದ ಬದಲು ಆದ್ಯತೆಯ ವ್ಯಾಪಾರ ಒಪ್ಪಂದ ಕುರಿತು ಆಲೋಚಿಸುವಂತೆ ಸಿಐಐ ಆಯೋಜಿಸಿದ್ದ ಬಿಮ್ಸ್ಟೆಕ್ ಬ್ಯುಸಿನೆಸ್ ಶೃಂಗಸಭೆ 2024ರಲ್ಲಿ ಅವರು, ಸದಸ್ಯ ರಾಷ್ಟ್ರಗಳಿಗೆ ಸಲಹೆ ನೀಡಿದರು.
2004ರಿಂದ ಗುಂಪು ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆ ನಡೆಸುತ್ತಿದೆ. ಈ ಒಪ್ಪಂದಕ್ಕಾಗಿ ಇದುವರೆಗೆ 22 ಸುತ್ತಿನ ಮಾತುಕತೆ ನಡೆದಿದ್ದು, 6 ವರ್ಷದ ಹಿಂದೆ ನಡೆದ ಕೊನೆಯ ಚರ್ಚೆ ನಡೆದಿತ್ತು. ಇದನ್ನು ಸ್ಥಗಿತಗೊಳಿಸುವ ಇಲ್ಲವೇ, ಪುನರ್ ಪರಿಶೀಲನೆ ಅಗತ್ಯವಿದೆಯೇ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ. ನಾವು ಎಲ್ಲಿ ನಿಂತಿದ್ದೇವೆ ಮತ್ತು ಈ ಎಫ್‌ಟಿಎಯನ್ನು ವಾಸ್ತವಿಕಗೊಳಿಸುವ ಸಾಧ್ಯತೆಗಳೇನು ಎಂಬುದರ ಕುರಿತು ಆಲೋಚಿಸಬೇಕಿದೆ ಎಂದು ಗೋಯಲ್ ಹೇಳಿದರು.
ಸುಂಕ ರಹಿತ ಅಥವಾ ವ್ಯಾಪಾರ ಅಡೆತಡೆ ತೆಗೆದುಹಾಕುವ ಅಗತ್ಯವಿದೆ. ವ್ಯಾಪಾರ ಸುಗಮಗೊಳಿಸುವಿಕೆ, ಇ-ವಾಣಿಜ್ಯ ಮತ್ತು ಸಂಪರ್ಕದ ಮೇಲೆ ಅಂತರರಾಷ್ಟ್ರೀಯ ಮಾನದಂಡಗಳನ್ನು ಅಳವಡಿಸಿಕೊಳ್ಳಬೇಕಿದೆ ಎಂದು ಸಚಿವರು ಹೇಳಿದರು.
2023-24ರಲ್ಲಿ ಬಿಮ್ಸ್ಟೆಕ್ ದೇಶಗಳೊಂದಿಗೆ ಭಾರತದ ಒಟ್ಟು ವ್ಯಾಪಾರವು ₹3.72 ಲಕ್ಷ ಕೋಟಿಯಷ್ಟಿತ್ತು.
ಬಿಮ್ಸ್ಟೆಕ್, ಬಂಗಾಳ ಕೊಲ್ಲಿಯಲ್ಲಿ ಬಹು–ವಲಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರಕ್ಕಾಗಿ ಸ್ಥಾಪಿಸಲ್ಪಟ್ಟಿದೆ. ಬಾಂಗ್ಲಾದೇಶ, ಭೂತಾನ್, ನೇಪಾಳ್, ಭಾರತ, ಶ್ರೀಲಂಕಾ, ಮಯನ್ಮಾರ್ ಮತ್ತು ಥೈಲ್ಯಾಂಡ್ ಸದಸ್ಯ ರಾಷ್ಟ್ರಗಳಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.