ಕಲಬುರಗಿ: ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯು ಭೌಗೋಳಿಕ ಸೂಚಕ (ಜಿಐ ಟ್ಯಾಗ್) ಮಾನ್ಯತೆಯ ‘ಭೀಮಾ ಪಲ್ಸಸ್’ ಬ್ರ್ಯಾಂಡ್‌ನ ‘ಪ್ರೀಮಿಯಂ’ ಹಾಗೂ ‘ಸ್ಪೆಷಲ್’ ತೊಗರಿ ಬೇಳೆ ಪ್ಯಾಕೆಟ್‌ಗಳನ್ನು ಆನ್‌ಲೈನ್ ಮೂಲಕ ಮಾರಾಟ ಆರಂಭಿಸಿದೆ.
ಗ್ರಾಹಕರ ಮನೆಗಳಿಗೆ ತ್ವರಿತವಾಗಿ ತಲುಪಿಸಲು ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ಮತ್ತು ಕರ್ನಾಟಕ ಅಂಚೆ ವೃತ್ತದ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದೆ.
ಬೆಂಗಳೂರಿನಲ್ಲಿ ಈಚೆಗೆ ಉಭಯ ಪಾಲುದಾರರು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಕಲಬುರಗಿಯ ಗುಣಮಟ್ಟದ ತೊಗರಿ ಬೇಳೆಯ ರುಚಿ ಸವಿಯಲು ಬಯಸುವವರು ದೇಶದ ಯಾವುದೇ ಭಾಗದಿಂದ ಖರೀದಿಸಿದರೂ ಅದನ್ನು ಅವರ ಮನೆ ಬಾಗಿಲಿಗೆ ಅಂಚೆ ಇಲಾಖೆ ತಲುಪಿಸಲಿದೆ.
ತಲಾ ಒಂದು ಕೆ.ಜಿ.ಯ ‘ಪ್ರೀಮಿಯಂ’ ಹಾಗೂ ‘ಸ್ಪೆಷಲ್’ ತೊಗರಿ ಬೇಳೆ ಕೆಲವು ತಿಂಗಳಿಂದ ಇ–ಕಾಮರ್ಸ್‌ಗಳಲ್ಲಿ ಲಭ್ಯವಿದ್ದು, ಗ್ರಾಹಕರ ಮೆಚ್ಚುಗೆ ಗಳಿಸುತ್ತಿದೆ.
ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯು ಪ್ರಸ್ತುತ ತನ್ನ ವೆಬ್‌ಸೈಟ್ bhimapulses.comನಲ್ಲಿ ‘ಕ್ಯಾಶ್ ಆನ್ ಡೆಲಿವರಿ’ ಮೂಲಕ ಮಾರಾಟ ಮಾಡುತ್ತಿದೆ. ಇದನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಅಂಚೆ ಇಲಾಖೆಯ ಜತೆಗೆ ಒಪ್ಪಂದ ಮಾಡಿಕೊಂಡಿದ್ದು, ಕ್ಯಾಶ್ ಆನ್ ಡೆಲಿವರಿ ಜತೆಗೆ ಆನ್‌ಲೈನ್ ಪಾವತಿ ಆಯ್ಕೆಯನ್ನು ಗ್ರಾಹಕರಿಗೆ ಒದಗಿಸಲಿದೆ.
‘ಭೀಮಾ ಪಲ್ಸಸ್ ತೊಗರಿ ಬೇಳೆಗೆ ಅಮೆಜಾನ್, ಫ್ಲಿಪ್‌ಕಾರ್ಟ್, ರಿಲಯನ್ಸ್‌ಗಳಿಂದ ಸಾಕಷ್ಟು ಬೇಡಿಕೆ ಬರುತ್ತಿದೆ. ಬೆಂಗಳೂರಿನ ಹಲವು ರಿಲಯನ್ಸ್ ಸ್ಟೋರ್‌ಗಳಲ್ಲಿ ಭೀಮಾ ಪಲ್ಸಸ್ ಬೇಳೆ ಮಾರಾಟ ಆಗುತ್ತಿದೆ. ಎರಡು ತಿಂಗಳ ಅವಧಿಯಲ್ಲಿ ಸುಮಾರು 7 ಟನ್ ಬೇಳೆ ಮಾರಾಟ ಆಗಿದೆ’ ಎಂದು ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಆಂಥೋನಿ ಮಾರಿಯಾ ಇಮ್ಯಾನುಯೆಲ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ದೇಶದ ಬೇರೆಯ ಭಾಗದ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲು ಅಂಚೆ ಇಲಾಖೆಯ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಗ್ರಾಹಕರು ತಮ್ಮ ವಿಳಾಸ ನಮೂದಿಸಿ ಖರೀದಿಸಿದರೆ ಅಂಚೆ ಇಲಾಖೆಯು ತೂಕ, ಕಿ.ಮೀ. ಅನ್ವಯ ಡೆಲಿವರಿ ಶುಲ್ಕ ವಿಧಿಸುತ್ತದೆ. ಅದನ್ನು ಗ್ರಾಹಕರೇ ಪಾವತಿಸಬೇಕಾಗುತ್ತದೆ’ ಎಂದರು.
‘ಪ್ರಸ್ತುತ, ಮಂಡಳಿಯು ಬೇಳೆ ಸಂಸ್ಕರಣಾ ಘಟಕದಿಂದ ಭೀಮಾ ಪಲ್ಸಸ್ ತೊಗರಿ ಬೇಳೆಯ ಪ್ಯಾಕಿಂಗ್ ಮಾಡುತ್ತಿಲ್ಲ. ಜಿಐ ನೋಂದಾಯಿತ ರೈತರಿಂದ ತೊಗರಿ ಖರೀದಿಸಿ, ಅದನ್ನು ನಾಲ್ಕು ಖಾಸಗಿ ದಾಲ್ ಮಿಲ್‌ಗಳಲ್ಲಿ ಸಂಸ್ಕರಣೆ ಮಾಡಲಾಗುತ್ತಿದೆ. ಈ ಮಿಲ್‌ಗಳು ಸಹ ಜಿಐ ನೋಂದಣಿಯಾಗಿವೆ. ಕಲಬುರಗಿ ನಗರದ ಮೂರು ಹಾಗೂ ಶಹಾಬಾದ್‌ನ ಒಂದು ಖಾಸಗಿ ದಾಲ್ ಮಿಲ್ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.
ಜಿಐ ನೋಂದಣಿಗೆ ಮನವಿ
‘ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯು ಭೀಮಾ ಪಲ್ಸಸ್ ಬ್ರ್ಯಾಂಡ್‌ಗೆ ಸಾಕಷ್ಟು ಪ್ರಚಾರ ಮಾಡುತ್ತಿದೆ. ತೊಗರಿ ಬೆಳೆಗಾರರು ಹಾಗೂ ದಾಲ್ ಮಿಲ್‌ಗಳು ಜಿಐ ನೋಂದಣಿ ಮಾಡಿಸಿಕೊಂಡರೆ ಉತ್ತಮ ಬೆಲೆ ಸಿಗಲಿದೆ’ ಎಂದು ಆಂಥೋನಿ ಮಾರಿಯಾ ಇಮ್ಯಾನುಯೆಲ್ ಹೇಳಿದರು.
‘ಕೃಷಿ ಮೇಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಗಳಲ್ಲಿ ಭೀಮಾ ಪಲ್ಸಸ್ ಉತ್ಪನ್ನಗಳನ್ನು ಇಟ್ಟು ಗ್ರಾಹಕರನ್ನು ಸೆಳೆಯಲಾಗುತ್ತಿದೆ. ನೋಂದಾಯಿತ ರೈತರು ನೋಂದಾಯಿತ ದಾಲ್ ಮಿಲ್‌ಗಳಿಗೆ ತೊಗರಿಯನ್ನು ಮಾರಬಹುದು. ಮಿಲ್‌ಗಳು ತೊಗರಿ ಸಂಸ್ಕರಣೆ ಮಾಡಿ ತಮ್ಮ ಬೇಳೆಯನ್ನು ಭೀಮಾ ಪಲ್ಸಸ್ ಅಡಿ ರಾಷ್ಟ್ರ ಮಟ್ಟದಲ್ಲಿ ಮಾರಾಟಕ್ಕೆ ಅವಕಾಶ ಮಾಡಿಕೊಡಲಿದೆ’ ಎಂದರು. ಒಂದು ಕೆ.ಜಿ. ಬೇಳೆ ‘ಪ್ರೀಮಿಯಂ’ಗೆ ₹210 ಹಾಗೂ ‘ಸ್ಪೆಷಲ್’ಗೆ ₹185 ದರ ನಿಗದಿಪಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.