ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮೂಲಕ 2021ರ ಡಿಸೆಂಬರ್‌ನಲ್ಲಿ ₹ 1.29 ಲಕ್ಷ ಕೋಟಿ ವರಮಾನ ಸಂಗ್ರಹ ಆಗಿದೆ.
2020ರ ಡಿಸೆಂಬರ್‌ನಲ್ಲಿ ಆಗಿದ್ದ ತೆರಿಗೆ ವರಮಾನ ಸಂಗ್ರಹಕ್ಕೆ ಹೋಲಿಸಿದರೆ ಶೇ 13ರಷ್ಟು ಏರಿಕೆ ಕಂಡುಬಂದಿದೆ. 2019ರ ಡಿಸೆಂಬರ್‌ಗೆ ಹೋಲಿಸಿದರೆ ಶೇ 26ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಶನಿವಾರ ತಿಳಿಸಿದೆ.
2021ರ ನವೆಂಬರ್‌ನಲ್ಲಿ ₹ 1.31 ಲಕ್ಷ ಕೋಟಿಗಳಷ್ಟು ಜಿಎಸ್‌ಟಿ ವರಮಾನ ಸಂಗ್ರಹ ಆಗಿತ್ತು. ಇದಕ್ಕೆ ಹೋಲಿಸಿದರೆ ಡಿಸೆಂಬರ್‌ನಲ್ಲಿ ಅಗಿರುವ ಸಂಗ್ರಹವು ಕಡಿಮೆ ಇದೆ. ಸತತ ಆರನೇ ತಿಂಗಳಿನಲ್ಲಿಯೂ ತೆರಿಗೆ ಸಂಗ್ರಹವು ₹ 1 ಲಕ್ಷ ಕೋಟಿಯನ್ನು ದಾಟಿದಂತಾಗಿದೆ.
2021ರ ಡಿಸೆಂಬರ್‌ನಲ್ಲಿ ಸರಾಸರಿ ತೆರಿಗೆ ಸಂಗ್ರಹವು ₹ 1,29,780 ಕೋಟಿಗಳಷ್ಟಾಗಿದೆ. ಇದರಲ್ಲಿ ಸಿಜಿಎಸ್‌ಟಿ ₹ 22,578 ಕೋಟಿ, ಎಸ್‌ಜಿಎಸ್‌ಟಿ ₹ 28,658 ಕೋಟಿ, ಐಜಿಎಸ್‌ಟಿ ₹ 69,155 ಕೋಟಿ ಹಾಗೂ ಸೆಸ್ ₹ 9,389 ಕೋಟಿಗಳಷ್ಟಿದೆ ಎಂದು ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಆರ್ಥಿಕ ಚೇತರಿಕೆಯ ಜೊತೆಗೆ ತೆರಿಗೆ ವಂಚನೆ ತಡೆಯಲು ಕೈಗೊಂಡಿರುವ ಕ್ರಮಗಳಿಂದಾಗಿ ವರಮಾನ ಸಂಗ್ರಹವು ಸುಧಾರಿಸುತ್ತಿದೆ ಎಂದು ಸಚಿವಾಲಯ ತಿಳಿಸಿದೆ.
2021ರ ಅಕ್ಟೋಬರ್‌ಗೆ ಹೋಲಿಸಿದರೆ ನವೆಂಬರ್‌ನಲ್ಲಿ ಸೃಷ್ಟಿಯಾಗಿರುವ ಇ–ವೇ ಬಿಲ್‌ಗಳ ಪ್ರಮಾಣವು ಶೇ 17 ರಷ್ಟು ಕಡಿಮೆ ಆಗಿದೆ. ಅಕ್ಟೋಬರ್‌ನಲ್ಲಿ 7.4 ಕೋಟಿ ಇ–ವೇ ಬಿಲ್ ಸೃಷ್ಟಿಯಾಗಿತ್ತು. ನವೆಂಬರ್‌ನಲ್ಲಿ 6.1 ಕೋಟಿಗೆ ಇಳಿಕೆ ಆಗಿದೆ. ಇ–ವೇ ಬಿಲ್ ಸೃಷ್ಟಿಯಲ್ಲಿ ಇಳಿಕೆ ಆಗಿದ್ದರು ಸಹ ಹೆಚ್ಚು ತೆರಿಗೆ ಸಂಗ್ರಹ ಆಗಿದೆ ಎಂದು ಡೆಲಾಯ್ಟ್ ಇಂಡಿಯಾದ ಪಾಲುದಾರ ಎಂ.ಎಸ್. ಮಣಿ ತಿಳಿಸಿದ್ದಾರೆ. ತೆರಿಗೆ ವಂಚನೆ ತಡೆಯಲು ತಂತ್ರಜ್ಞಾನ ಆಧಾರಿತ ವ್ಯವಸ್ಥೆ ಜಾರಿಗೊಳಿಸಲು ಗಮನ ಹರಿಸಿದ್ದರಿಂದಾಗಿ ಸೇವಾ ವಲಯದಿಂದ ಹೆಚ್ಚು ತೆರಿಗೆ ಸಂಗ್ರಹ ಆಗಿರುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.