ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮೂಲಕ ಜುಲೈ ತಿಂಗಳಿನಲ್ಲಿ ₹1.82 ಲಕ್ಷ ಕೋಟಿ ವರಮಾನ ಸಂಗ್ರಹವಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ವರಮಾನ ಸಂಗ್ರಹದಲ್ಲಿ ಶೇ 10.3ರಷ್ಟು ಏರಿಕೆಯಾಗಿದೆ.
ಜಿಎಸ್‌ಟಿ ಜಾರಿಗೆ ಬಂದ ಏಳು ವರ್ಷಗಳ ಅವಧಿಯಲ್ಲಿ ಅತಿಹೆಚ್ಚು ವರಮಾನ ಸಂಗ್ರಹವಾಗಿರುವ ಮೂರನೇ ತಿಂಗಳು ಇದಾಗಿದೆ.
ಪ್ರಸಕ್ತ ವರ್ಷದ ಏಪ್ರಿಲ್‌ನಲ್ಲಿ ವರಮಾನ ಸಂಗ್ರಹವು ₹2.10 ಲಕ್ಷ ಕೋಟಿ ದಾಟುವ ಮೂಲಕ ಹೊಸ ದಾಖಲೆ ಬರೆದಿತ್ತು. ಕಳೆದ ವರ್ಷದ ಏಪ್ರಿಲ್‌ನಲ್ಲಿ ₹1.87 ಲಕ್ಷ ಕೋಟಿ ಸಂಗ್ರಹವಾಗಿತ್ತು. ಜುಲೈನಲ್ಲಿನ ಸಂಗ್ರಹವು ದಾಖಲೆಯಾಗಿದೆ.
ಒಟ್ಟು ಮರುಪಾವತಿ ₹16,283 ಕೋಟಿ ಆಗಿದೆ. ಈ ರೀಫಂಡ್ ಬಳಿಕ ನಿವ್ವಳ ಜಿಎಸ್‌ಟಿ ಸಂಗ್ರಹವು ₹1.66 ಲಕ್ಷ ಕೋಟಿ ಆಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 14.4ರಷ್ಟು ಹೆಚ್ಚಳವಾಗಿದೆ ಎಂದು ಗುರುವಾರ ಬಿಡುಗಡೆಯಾಗಿರುವ ಕೇಂದ್ರ ಸರ್ಕಾರದ ಅಂಕಿಅಂಶ ತಿಳಿಸಿವೆ.
ದೇಶೀಯ ವಹಿವಾಟು ಶೇ 8.9ರಷ್ಟು ಹೆಚ್ಚಳವಾಗಿದ್ದು, ಒಟ್ಟು ₹1.34 ಲಕ್ಷ ಕೋಟಿ ಸಂಗ್ರಹವಾಗಿದೆ. ರಫ್ತು ಪ್ರಮಾಣದಲ್ಲಿ ಶೇ 14.2ರಷ್ಟು ಏರಿಕೆಯಿಂದಾಗಿ ₹48,039 ಕೋಟಿ ಸಂಗ್ರಹವಾಗಿದೆ ಎಂದು ವಿವರಿಸಿದೆ.
ಒಟ್ಟು ಜಿಎಸ್‌ಟಿಯಲ್ಲಿ ಕೇಂದ್ರ ಜಿಎಸ್‌ಟಿ ₹32,386 ಕೋಟಿ, ರಾಜ್ಯ ಜಿಎಸ್‌ಟಿ ₹40,289 ಕೋಟಿ, ಸಮಗ್ರ ಜಿಎಸ್‌ಟಿ ₹96,447 ಕೋಟಿ ಹಾಗೂ ಪರಿಹಾರ ಸೆಸ್ ₹12,953 ಕೋಟಿ ಸಂಗ್ರಹವಾಗಿದೆ.
ಏಪ್ರಿಲ್‌ನಿಂದ ಜುಲೈವರೆಗೆ ₹7.39 ಲಕ್ಷ ಕೋಟಿ ವರಮಾನ ಸಂಗ್ರಹವಾಗಿದೆ.
‘ದೇಶೀಯಮಟ್ಟದ ಪೂರೈಕೆಗಿಂತಲೂ ಆಮದು ಮೇಲೆ ವಿಧಿಸುವ ಜಿಎಸ್‌ಟಿಯಿಂದಾಗಿ ವರಮಾನವು ಹೆಚ್ಚಿದೆ’ ಎಂದು ಡೆಲಾಯ್ಟ್ ಇಂಡಿಯಾದ ಪಾಲುದಾರ ಎಂ.ಎಸ್. ಮಣಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.