ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮೂಲಕ ಆಗಸ್ಟ್ ತಿಂಗಳಿನಲ್ಲಿ ₹1.75 ಲಕ್ಷ ಕೋಟಿ ವರಮಾನ ಸಂಗ್ರಹವಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಸಂಗ್ರಹದಲ್ಲಿ ಶೇ 10ರಷ್ಟು ಏರಿಕೆಯಾಗಿದೆ.
ಕರ್ನಾಟಕ, ಮಹಾರಾಷ್ಟ್ರ, ದೆಹಲಿ, ಉತ್ತರ ಪ್ರದೇಶ ಹಾಗೂ ಹರಿಯಾಣದಲ್ಲಿ ತೆರಿಗೆ ಸಂಗ್ರಹದಲ್ಲಿ ಏರಿಕೆಯಾಗಿದ್ದು, ಒಟ್ಟಾರೆ ವರಮಾನ ಹೆಚ್ಚಳಕ್ಕೆ ಈ ರಾಜ್ಯಗಳು ಅತಿಹೆಚ್ಚು ಪಾಲು ನೀಡಿವೆ ಎಂದು ಕೇಂದ್ರ ಸರ್ಕಾರ ಭಾನುವಾರ ತಿಳಿಸಿದೆ.
ಜುಲೈನಲ್ಲಿ ₹1.82 ಲಕ್ಷ ಕೋಟಿ ಸಂಗ್ರಹವಾಗಿತ್ತು. ಕಳೆದ ವರ್ಷದ ಆಗಸ್ಟ್‌ನಲ್ಲಿ ₹1.59 ಲಕ್ಷ ಕೋಟಿ ವರಮಾನ ಸಂಗ್ರಹವಾಗಿತ್ತು.
ಏಪ್ರಿಲ್‌ನಿಂದ ಆಗಸ್ಟ್‌ವರೆಗೆ ₹9.13 ಲಕ್ಷ ಕೋಟಿ ವರಮಾನ ಸಂಗ್ರಹವಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ₹8.29 ಲಕ್ಷ ಕೋಟಿ ಸಂಗ್ರಹವಾಗಿತ್ತು. ಅದಕ್ಕೆ ಹೋಲಿಸಿದರೆ ಶೇ 10.1ರಷ್ಟು ಹೆಚ್ಚಳವಾಗಿದೆ.
‘ಜಿಎಸ್‌ಟಿ ಸಂಗ್ರಹ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸರ್ಕಾರ ಕೈಗೊಂಡಿರುವ ಸುಧಾರಣಾ ಕ್ರಮಗಳಿಂದಾಗಿ ಈ ಪ್ರಗತಿ ಸಾಧ್ಯವಾಗಿದೆ’ ಎಂದು ಡೆಲಾಯ್ಟ್ ಇಂಡಿಯಾದ ನೇರ ತೆರಿಗೆ ವಿಭಾಗದ ಪಾಲುದಾರ ಮತ್ತು ಮುಖ್ಯಸ್ಥ ಮಹೇಶ್ ಜೈಸಿಂಗ್ ತಿಳಿಸಿದ್ದಾರೆ.
‘ಆಮದು ಸೇವೆ ಮೇಲಿನ ಜಿಎಸ್‌ಟಿ ಸಂಗ್ರಹದಲ್ಲಿ ಏರಿಕೆಯಾಗಿದೆ. ದೇಶೀಯ ಮಟ್ಟದಲ್ಲಿ ವರಮಾನ ಸಂಗ್ರಹದಲ್ಲಿನ ಹೆಚ್ಚಳವು ಆರ್ಥಿಕತೆಯ ವೇಗಕ್ಕೆ ಕನ್ನಡಿ ಹಿಡಿದಿದೆ’ ಎಂದು ಹೇಳಿದ್ದಾರೆ.
ಕಳೆದ ವರ್ಷದ ಆಗಸ್ಟ್‌ಗೆ ಹೋಲಿಸಿದರೆ ದೇಶೀಯ ವರಮಾನ ಸಂಗ್ರಹದಲ್ಲಿ ಶೇ 9.2ರಷ್ಟು ಏರಿಕೆಯಾಗಿದೆ. ಒಟ್ಟಾರೆ ₹1.25 ಲಕ್ಷ ಕೋಟಿ ಸಂಗ್ರಹವಾಗಿದೆ. ಆಮದು ಸರಕುಗಳ ಮೇಲಿನ ಜಿಎಸ್‌ಟಿ ₹49,976 ಕೋಟಿ ಸಂಗ್ರಹವಾಗಿದೆ. ಒಟ್ಟಾರೆ ಶೇ 12.1ರಷ್ಟು ಏರಿಕೆಯಾಗಿದೆ.
ಕೇಂದ್ರ ಜಿಎಸ್‌ಟಿ ₹30,862 ಕೋಟಿ, ರಾಜ್ಯ ಜಿಎಸ್‌ಟಿ ₹38,411 ಕೋಟಿ ಹಾಗೂ ಸಮಗ್ರ ಜಿಎಸ್‌ಟಿ ₹93,621 ಕೋಟಿ ಸಂಗ್ರಹವಾಗಿದೆ. ಒಟ್ಟು ₹24,460 ಕೋಟಿ ಮರುಪಾವತಿ ಮಾಡಲಾಗಿದೆ.
‘ಹಬ್ಬದ ಋತುವಿನಲ್ಲಿ ಜನರ ದಿನಬಳಕೆಯ ಸರಕು ಮತ್ತು ಸೇವೆಯಲ್ಲಿನ ವೆಚ್ಚದಲ್ಲಿ ಹೆಚ್ಚಳವಾಗಿದೆ. ಇದರಿಂದ ವರಮಾನ ಸಂಗ್ರಹದಲ್ಲಿ ಏರಿಕೆಯಾಗಿದೆ. ಮುಂಬರುವ ತಿಂಗಳುಗಳಲ್ಲೂ ಜಿಎಸ್‌ಟಿ ಸಂಗ್ರಹದಲ್ಲಿ ಹೆಚ್ಚಳವಾಗುವ ನಿರೀಕ್ಷೆಯಿದೆ’ ಎಂದು ಡೆಲಾಯ್ಟ್ ಇಂಡಿಯಾದ ಪಾಲುದಾರ ಎಂ.ಎಸ್. ಮಣಿ ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಜಿಎಸ್‌ಟಿ ವರಮಾನ ಸಂಗ್ರಹದಲ್ಲಿ ಶೇ 13ರಷ್ಟು ಏರಿಕೆಯಾಗಿದ್ದು ಒಟ್ಟು ₹26367 ಕೋಟಿ ಸಂಗ್ರಹವಾಗಿದೆ. ದೇಶದ ಪರೋಕ್ಷ ತೆರಿಗೆ ಸಂಗ್ರಹಕ್ಕೆ ಅತಿಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳ ಪೈಕಿ ಕರ್ನಾಟಕವು ಎರಡನೇ ಅತಿದೊಡ್ಡ ರಾಜ್ಯವಾಗಿದೆ.
ಶೇ 11ರಷ್ಟು ಏರಿಕೆಯಾಗಿದ್ದು ಒಟ್ಟು ₹12344 ಕೋಟಿ ಸಂಗ್ರಹವಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಆಂಧ್ರಪ್ರದೇಶದಲ್ಲಿ ವರಮಾನ ಸಂಗ್ರಹದಲ್ಲಿ ಶೇ 5ರಷ್ಟು ಹಾಗೂ ಛತ್ತೀಸಗಢದಲ್ಲಿ ಶೇ 10ರಷ್ಟು ಇಳಿಕೆಯಾಗಿದೆ. ರಾಷ್ಟ್ರೀಯ ಸರಾಸರಿ ಸಂಗ್ರಹಕ್ಕೆ ಹೋಲಿಸಿದರೆ ಗುಜರಾತ್ ತಮಿಳುನಾಡು ತೆಲಂಗಾಣ ಬಿಹಾರ ಮತ್ತು ರಾಜಸ್ಥಾನದಲ್ಲಿ ಕಡಿಮೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.