ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯು ಆನ್‌ಲೈನ್ ಆಟಗಳನ್ನು ಒದಗಿಸುವ ಕಂಪನಿಗಳಿಗೆ, ಕುದುರೆ ರೇಸ್‌ಗೆ ಹಾಗೂ ಕ್ಯಾಸಿನೊಗೆ ಅವುಗಳ ಒಟ್ಟು ವಹಿವಾಟಿನ ಮೊತ್ತದ ಮೇಲೆ ಶೇಕಡ 28ರಷ್ಟು ತೆರಿಗೆ ವಿಧಿಸಲು ಮಂಗಳವಾರ ತೀರ್ಮಾನಿಸಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದ ಸಮಿತಿಯು ಸಚಿವರ ಗುಂಪಿನ ಶಿಫಾರಸು ಆಧರಿಸಿ, ಈ ಪ್ರಮಾಣದ ತೆರಿಗೆ ವಿಧಿಸಲು ತೀರ್ಮಾನ ಕೈಗೊಂಡಿದೆ. ಜಿಎಸ್‌ಟಿ ಮಂಡಳಿಯಲ್ಲಿ ಎಲ್ಲ ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು ಇರುತ್ತಾರೆ.
ಸಿನಿಮಾ ಮಂದಿರಗಳಲ್ಲಿ ಮಾರಾಟ ಮಾಡುವ ಆಹಾರ ಮತ್ತು ಪಾನೀಯಗಳಿಗೆ ಶೇಕಡ 5ರಷ್ಟು ತೆರಿಗೆ ನಿಗದಿ ಮಾಡಲು ಮಂಡಳಿ ನಿರ್ಧರಿಸಿದೆ. ಇದು ರೆಸ್ಟಾರೆಂಟ್‌ಗಳಲ್ಲಿ ವಿಧಿಸುವ ತೆರಿಗೆ ಪ್ರಮಾಣಕ್ಕೆ ಸಮ. ಸಿನಿಮಾ ಮಂದಿರಗಳಲ್ಲಿ ಈಗ ಶೇ 18ರಷ್ಟು ತೆರಿಗೆ ವಿಧಿಸಲಾಗುತ್ತಿದೆ.
ಆನ್‌ಲೈನ್ ಆಟಗಳ ಇಡೀ ಮೊತ್ತಕ್ಕೆ ತೆರಿಗೆ ವಿಧಿಸುವುದು ಇಡೀ ಆನ್‌ಲೈನ್ ಆಟ ಉದ್ಯಮವನ್ನು ಕೊಲ್ಲುವುದಕ್ಕೆ ಸಮ ಎಂದು ಉದ್ಯಮದ ಪ್ರತಿನಿಧಿಗಳು ಹೇಳಿರುವ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ, ‘ನಾವು ಯಾವುದೇ ಉದ್ಯಮವನ್ನು ಕೊಲ್ಲುವ ಕೆಲಸ ಮಾಡುತ್ತಿಲ್ಲ’ ಎಂದು ನಿರ್ಮಲಾ ಉತ್ತರಿಸಿದರು. ಅಲ್ಲದೆ, ಆಟ ಹಾಗೂ ಜೂಜಿಗೆ ಇತರ ಅವಶ್ಯಕ ಉದ್ಯಮ ವಲಯಕ್ಕೆ ನೀಡಿದಂತಹ ಪ್ರಾಧಾನ್ಯ ನೀಡಲಾಗದು ಎಂದರು.
‘ಹೀಗಾಗಿ, ಮಂಡಳಿಯ ಸಭೆಯಲ್ಲಿ ನೈತಿಕ ಪ್ರಶ್ನೆಗಳ ಬಗ್ಗೆಯೂ ಚರ್ಚೆಯಾಗಿದೆ’ ಎಂದು ಹೇಳಿದರು.
ಆನ್‌ಲೈನ್ ಆಟವು ಕೌಶಲವನ್ನು ಆಧರಿಸಿದೆಯೋ ಅಥವಾ ಅದು ಅದೃಷ್ಟದ ಬಲದ ಮೇಲೆ ನಡೆಯುವಂಥದ್ದೋ ಎಂಬ ವ್ಯತ್ಯಾಸ ನೋಡದೆ ಈ ಪ್ರಮಾಣದ ತೆರಿಗೆ ವಿಧಿಸಲು ಮಂಡಳಿಯು ನಿರ್ಧರಿಸಿದೆ.
ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಲು ಬಳಸುವ ಔಷಧ ಹಾಗೂ ಅತ್ಯಂತ ಅಪರೂಪದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸುವ ಕೆಲವು ಔಷಧಗಳನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿಡಲು ಮಂಗಳವಾರದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ನಿರ್ಮಲಾ ಅವರು ಹೇಳಿದರು.
ಖಾಸಗಿ ಕಂಪನಿಗಳು ಉಪಗ್ರಹ ಉಡಾವಣೆ ಸೇವೆ ನೀಡಿದಾಗ ಅದಕ್ಕೆ ಜಿಎಸ್‌ಟಿಯಿಂದ ವಿನಾಯಿತಿ ನೀಡಲು ತೀರ್ಮಾನಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.