ನವದೆಹಲಿ: ರಾಜ್ಯಗಳಿಗೆ ತೆರಿಗೆ ವರಮಾನದ ಕೊರತೆ ತುಂಬಿಕೊಡುವ ಕುರಿತು ಚರ್ಚಿಸಲು ಜಿಎಸ್‌ಟಿ ಮಂಡಳಿಯು ಸೋಮವಾರ ಸಭೆ ಸೇರಲಿದೆ.
ರಾಜ್ಯಗಳಿಗೆ ಪರಿಹಾರ ನೀಡುವ ಸಂಬಂಧ ಎದುರಾಗಿರುವ ಸಮಸ್ಯೆಗಳನ್ನು ಬಗೆಹರಿಸಲು ಸಚಿವರ ತಂಡ ರಚಿಸಬೇಕು ಎಂದು ಬಿಜೆಪಿಯೇತರ ಪಕ್ಷಗಳ ಆಡಳಿತ ಇರುವ ರಾಜ್ಯಗಳು ಕಳೆದ ವಾರ ನಡೆದ ಸಭೆಯಲ್ಲಿ ಒತ್ತಾಯಿಸಿದ್ದವು. ಈ ಕುರಿತಾಗಿಯೂ ಸೋಮವಾರ ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ಬಿಜೆಪಿ ಆಡಳಿತವಿರುವ ಕೆಲವು ರಾಜ್ಯಗಳುಕೇಂದ್ರ ಸರ್ಕಾರ ನೀಡಿರುವ ಸಾಲದ ಆಯ್ಕೆಗಳಲ್ಲಿ ಒಂದನ್ನು ಒಪ್ಪಿಕೊಂಡಿವೆ. ಹೀಗಾಗಿ ತಮಗೆ ಬಂಡವಾಳ ಸಂಗ್ರಹಿಸಲು ಒಪ್ಪಿಗೆ ನೀಡುವಂತೆ ಆ ರಾಜ್ಯಗಳು ಕೇಳುತ್ತಿವೆ.
ಜಿಎಸ್‌ಟಿ ಜಾರಿಗೊಳಿಸಿದ್ದರಿಂದ ರಾಜ್ಯಗಳಿಗೆ ಈ ವರ್ಷದ ಆದಾಯದಲ್ಲಿ₹ 97 ಸಾವಿರ ಕೋಟಿ ಕೊರತೆ ಆಗಿದೆ ಎಂದು ಕೇಂದ್ರ ಅಂದಾಜು ಮಾಡಿದೆ. ಕೋವಿಡ್–19 ಕಾರಣದಿಂದ ರಾಜ್ಯಗಳಿಗೆ ಆಗಿರುವ ಕೊರತೆ ₹ 1.38 ಲಕ್ಷ ಕೋಟಿ. ಒಟ್ಟಾರೆ ಕೊರತೆ ₹ 2.35 ಲಕ್ಷ ಕೋಟಿ.
ಈ ಕೊರತೆ ನೀಗಿಸಿಕೊಳ್ಳಲು ಕೇಂದ್ರ ಸರ್ಕಾರವು ರಾಜ್ಯಗಳಿಗೆ ಎರಡು ಆಯ್ಕೆಗಳನ್ನು ನೀಡಿದೆ. ಮೊದಲನೆಯದು, ರಾಜ್ಯಗಳು ₹ 97 ಸಾವಿರ ಕೋಟಿಯನ್ನು ಆರ್‌ಬಿಐನಿಂದ ಸಾಲವಾಗಿ ಪಡೆಯಬಹುದು. ಆದರೆ, ಕೆಲವು ರಾಜ್ಯಗಳ ಬೇಡಿಕೆಯ ಮೇರೆಗೆ ಮೊತ್ತವನ್ನು ₹ 1.10 ಲಕ್ಷ ಕೋಟಿಗೆ ಹೆಚ್ಚಿಸಲಾಗಿದೆ. ಎರಡನೆಯದು, ರಾಜ್ಯಗಳು ಒಟ್ಟು ₹ 2.35 ಲಕ್ಷ ಕೋಟಿಯನ್ನು ಮಾರುಕಟ್ಟೆಯಿಂದ ಸಾಲವಾಗಿ ಪಡೆಯಬಹುದು.
ಕೇಂದ್ರ ಸರ್ಕಾರವು ಪ್ರಸಕ್ತ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ ರಾಜ್ಯಗಳಿಗೆ ಪರಿಹಾರವಾಗಿ ₹ 20 ಸಾವಿರ ಕೋಟಿ ಬಿಡುಗಡೆ ಮಾಡಿದೆ.
ಕಳೆದ ವಾರ ನಡೆದ ಸಭೆಯಲ್ಲಿ, ಐಷಾರಾಮಿ ಸರಕುಗಳಾದ ಕಾರು ಮತ್ತು ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆಗೆ ಸರ್ಚಾರ್ಜ್ ವಿಧಿಸುವುದನ್ನು 2022ರ ಜೂನ್‌ವರೆಗೂ ಮುಂದುವರಿಸಲು ನಿರ್ಧರಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.