ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ಜೂನ್ 22ರಂದು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯ 53ನೇ ಸಭೆ ನಡೆಯಲಿದೆ.
ಎಂಟು ತಿಂಗಳ ಬಳಿಕ ನಡೆಯುತ್ತಿರುವ ಈ ಸಭೆಯಲ್ಲಿ ಆನ್‌ಲೈನ್ ಗೇಮಿಂಗ್ ವಲಯದ ಮೇಲೆ ವಿಧಿಸಿರುವ ಶೇ 28ರಷ್ಟು ಜಿಎಸ್‌ಟಿ ಕುರಿತಂತೆ ಪರಾಮರ್ಶೆ ನಡೆಸುವ ಸಾಧ್ಯತೆಯಿದೆ.
‘ನವದೆಹಲಿಯಲ್ಲಿ ಸಭೆ ಆಯೋಜಿಸಲಾಗಿದ್ದು, ಸಭೆಯ ಕಾರ್ಯಸೂಚಿಗೆ ಸಂಬಂಧಿಸಿದಂತೆ ಮಂಡಳಿಯ ಸದಸ್ಯರಿಗೆ ಇನ್ನೂ ಸಂದೇಶ ರವಾನಿಸಿಲ್ಲ’ ಎಂದು ಮಂಡಳಿಯು ಗುರುವಾರ ‘ಎಕ್ಸ್’ನಲ್ಲಿ ತಿಳಿಸಿದೆ.
ಲೋಕಸಭಾ ಚುನಾವಣೆ ಬಳಿಕ ನಡೆಯುತ್ತಿರುವ ಮೊದಲ ಸಭೆ ಇದಾಗಿದೆ. ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶದ ಹಣಕಾಸು ಸಚಿವರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕಳೆದ ವರ್ಷದ ಅಕ್ಟೋಬರ್ 7ರಂದು ಮಂಡಳಿಯ 52ನೇ ಸಭೆ ನಡೆದಿತ್ತು.
ಪರಾಮರ್ಶೆ ಸಾಧ್ಯತೆ:
ಜಿಎಸ್‌ಟಿ ಕಾಯ್ದೆಗೆ ತಂದಿರುವ ತಿದ್ದುಪಡಿ ಅನ್ವಯ ಆನ್‌ಲೈನ್ ಆಟಗಳು ಹಾಗೂ ಕ್ಯಾಸಿನೊಗಳಲ್ಲಿ ಪೂರ್ಣ ಬೆಟ್ಟಿಂಗ್ ಮೊತ್ತದ ಮೇಲೆ ಜಿಎಸ್‌ಟಿ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ, ಕಳೆದ ವರ್ಷದ ಅಕ್ಟೋಬರ್ 1ರಿಂದ ಕ್ಯಾಸಿನೊ, ಕುದುರೆ ರೇಸ್ ಮತ್ತು ಆನ್‌ಲೈನ್ ಆಟಗಳಿಗೆ ಶೇ 28ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ.
ಈ ಬಗ್ಗೆ ಆರು ತಿಂಗಳ ಬಳಿಕ ಪರಾಮರ್ಶೆ ನಡೆಸಲಾಗುವುದು ಎಂದು ಜಿಎಸ್‌ಟಿ ಜಾರಿಯ ವೇಳೆ ಮಂಡಳಿಯು ಹೇಳಿತ್ತು. ಮಂಡಳಿಯು ಕೈಗೊಂಡಿದ್ದ ನಿರ್ಣಯದ ಪ್ರಕಾರ ಏಪ್ರಿಲ್‌ನಲ್ಲಿ ಪರಾಮರ್ಶೆ ನಡೆಸಬೇಕಿತ್ತು. ಆದರೆ, ಸಭೆ ನಡೆದಿರಲಿಲ್ಲ. ಹಾಗಾಗಿ, ಸಭೆಯಲ್ಲಿ ಇದರ ಬಗ್ಗೆ ಪರಿಶೀಲನೆ ನಡೆಸುವ ನಿರೀಕ್ಷೆಯಿದೆ.
ಸಮಿತಿಗೆ ಗಡುವು ನಿರೀಕ್ಷೆ:
ಜಿಎಸ್‌ಟಿ ವ್ಯವಸ್ಥೆ ಅಡಿಯಲ್ಲಿ ತೆರಿಗೆ ಪ್ರಮಾಣವನ್ನು ಸರಳಗೊಳಿಸುವ ಸಂಬಂಧ ಪರಿಶೀಲನೆ ನಡೆಸಲು 2021ರ ಸೆಪ್ಟೆಂಬರ್‌ನಲ್ಲಿ ಸಚಿವರ ಸಮಿತಿ ರಚಿಸಲಾಗಿದೆ. ಉತ್ತರ ಪ್ರದೇಶದ ಹಣಕಾಸು ಸಚಿವ ಸುರೇಶ್ ಕುಮಾರ್ ಖನ್ನಾ ಇದರ ಸಂಚಾಲಕರಾಗಿದ್ದಾರೆ.
ಈ ಸಮಿತಿಯು 2022ರ ಜೂನ್‌ನಲ್ಲಿ ನಡೆದ ಸಭೆಯಲ್ಲಿ ಮಧ್ಯಂತರ ವರದಿ ಸಲ್ಲಿಸಿದೆ. ತ್ವರಿತಗತಿಯಲ್ಲಿ ಅಧ್ಯಯನ ಪೂರ್ಣಗೊಳಿಸಿ ಅಂತಿಮ ವರದಿ ಸಲ್ಲಿಸುವಂತೆ ಸಮಿತಿಗೆ ಸಭೆಯಲ್ಲಿ ಗಡುವು ನೀಡುವ ನಿರೀಕ್ಷೆಯಿದೆ.
ಜಿಎಸ್‌ಟಿ ದರ ಸುಧಾರಣೆ, ವಿನಾಯಿತಿ ಸೌಲಭ್ಯ ಹಾಗೂ ಜಿಎಸ್‌ಟಿ ವರಮಾನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸಮಿತಿಯು ವರದಿ ಸಲ್ಲಿಸಲಿದೆ. ಸದ್ಯ ಜಿಎಸ್‌ಟಿ ಅಡಿಯಲ್ಲಿ ಶೇ 5, ಶೇ 12, ಶೇ 18, ಶೇ 28 ಹೀಗೆ ನಾಲ್ಕು ಹಂತದ ತೆರಿಗೆ ದರ ನಿಗದಿಪಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.