ADVERTISEMENT

ಹೊಸಬರಿಂದಲೇ ಜಿಎಸ್‌ಟಿ ವಂಚನೆ: ಐಜಿಎಸ್‌ಟಿ ಸಮಿತಿ ಸಂಚಾಲಕ ಸುಶೀಲ್‌ ಕುಮಾರ್

ಐಜಿಎಸ್‌ಟಿ ಸಚಿವರ ಸಮಿತಿ ಸಂಚಾಲಕ ಸುಶೀಲ್‌ ಕುಮಾರ್ ಮೋದಿ ಮಾಹಿತಿ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2019, 1:55 IST
Last Updated 24 ಡಿಸೆಂಬರ್ 2019, 1:55 IST
ಸುಶೀಲ್‌ ಕುಮಾರ್‌ ಮೋದಿ
ಸುಶೀಲ್‌ ಕುಮಾರ್‌ ಮೋದಿ   

ಬೆಂಗಳೂರು: ‘ಜಿಎಸ್‌ಟಿ ವ್ಯವಸ್ಥೆಯಲ್ಲಿ ಹೊಸದಾಗಿ ನೋಂದಣಿ ಆಗಿರುವ ತೆರಿಗೆ ಪಾವತಿದಾರರಿಂದಲೇ ವಂಚನೆ ಹೆಚ್ಚಾಗಿ ನಡೆಯುತ್ತಿದೆ' ಎಂದು ಐಜಿಎಸ್‌ಟಿ ಸಚಿವರ ಸಮಿತಿ ಸಂಚಾಲಕ ಸುಶೀಲ್‌ ಕುಮಾರ್ ಮೋದಿ ಮಾಹಿತಿ ನೀಡಿದರು.

‘ವಂಚಕ ಕಂಪನಿಗಳು, ನಕಲಿ ನೋಂದಣಿ ಮತ್ತು ರಿಟರ್ನ್ಸ್‌ ಸಲ್ಲಿಸದೇ ಇರುವವರ ಪ್ರಮಾಣವೇ ಅಧಿಕವಾಗಿದೆ. ಹೀಗಾಗಿ ಇದುವರೆಗೆ 24.86 ಲಕ್ಷ ನೋಂದಣಿ ರದ್ದುಪಡಿಸಲಾಗಿದೆ’ ಎಂದು ಅವರು ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಪ್ರತಿ ತಿಂಗಳೂ ಸಂಗ್ರಹವಾಗುವ ಒಟ್ಟಾರೆ ತೆರಿಗೆಯಲ್ಲಿಹೊಸದಾಗಿ ನೋಂದಣಿ ಆಗಿರುವವರಿಂದ ಶೇ 15ರಷ್ಟು ಮಾತ್ರವೇ ಬರುತ್ತಿದೆ. ಹೀಗಾಗಿ ಇಂತಹ ತೆರಿಗೆದಾರರ ಮೇಲೆ ಹೆಚ್ಚಿನ ನಿಗಾ ಇಡಲು ಆರಂಭಿಸಲಾಗಿದೆ. ಈ ಕಾರಣಕ್ಕಾಗಿಯೇ2020ರ ಜನವರಿ 1ರಿಂದ ಜಿಎಸ್‌ಟಿಗೆ ನೋಂದಣಿ ಆಗುವವರಿಗೆ ಆಧಾರ್‌ ದೃಢೀಕರಣ ಅಥವಾ ಭೌತಿಕ ದೃಢೀಕರಣ ಕಡ್ಡಾಯಗೊಳಿಸಲಾಗುತ್ತಿದೆ’ ಎಂದರು.

ADVERTISEMENT

‘ತೆಲಂಗಾಣ, ಆಂಧ್ರಪ್ರದೇಶ, ಬಿಹಾರವನ್ನೂ ಒಳಗೊಂಡು ಕೆಲವು ರಾಜ್ಯಗಳಲ್ಲಿ ಜಿಎಸ್‌ಟಿಯ ಹೊಸ ನೋಂದಣಿಯ ಸ್ಥಳ ದೃಢೀಕರಣ ನಡೆಸಲಾಗುತ್ತಿದೆ.

ವ್ಯಾಜ್ಯ ಇತ್ಯರ್ಥ ಸಮಿತಿ: ‘ಪ್ರತಿಯೊಂದು ರಾಜ್ಯದಲ್ಲಿಯೂ ಜಿಎಸ್‌ಟಿ ವ್ಯಾಜ್ಯ ಇತ್ಯರ್ಥ ಸಮಿತಿ ರಚಿಸಲು ನಿರ್ಧರಿಸಲಾಗಿದೆ. ಇದರಲ್ಲಿ 12 ಸದಸ್ಯರು ಇರಲಿದ್ದಾರೆ. ಪ್ರಾಮಾಣಿಕ ತೆರಿಗೆ ಪಾವತಿದಾರರ ಸಮಸ್ಯೆಗಳು, ವ್ಯಾಜ್ಯಗಳನ್ನು ಇದು ಬಗೆಹರಿಸಲಿದೆ’ ಎಂದರು.

ಪ್ರಮುಖ ನಿರ್ಧಾರಗಳು: ‘ಎರಡು ತಿಂಗಳವರೆಗೆ 3ಬಿ ರಿಟರ್ನ್ಸ್‌ ಸಲ್ಲಿಸದೇ ಇದ್ದರೆ ಅವರ ಇ–ವೇ ಬಿಲ್‌ ಸ್ಥಗಿತಗೊಳಿಸಲಾಗುವುದು. ಇದುವರೆಗೆ 3.47 ಲಕ್ಷ ವಿತರಕರ ಇ–ವೇ ಬಿಲ್‌ ಬ್ಲಾಕ್‌ ಮಾಡಲಾಗಿದೆ. ಜಿಎಸ್‌ಟಿಆರ್‌–1 ವಿಳಂಬ ಸಲ್ಲಿಕೆಗೆ ಇದ್ದ ಶುಲ್ಕವನ್ನು ಕೈಬಿಡಲಾಗಿದೆ. ಆದರೆ ಎರಡು ತಿಂಗಳವರೆಗೆ ರಿಟರ್ನ್ಸ್‌ ಸಲ್ಲಿಸದೇ ಇದ್ದರೆ ಅವರ ಇ–ವೇ ಬಿಲ್‌ ಸಹ ಬ್ಲಾಕ್‌ ಆಗಲಿದೆ’ ಎಂದು ತಿಳಿಸಿದರು.

‘ಸಮಸ್ಯೆಗಳಿವೆ, ಬಗೆಹರಿಯುತ್ತಿವೆ’

ಜಿಎಸ್‌ಟಿ ಜಾಲತಾಣದಲ್ಲಿನ (ಜಿಎಸ್‌ಟಿಎನ್‌) ಸಮಸ್ಯೆಗಳ ಕುರಿತು ಕೇಳಿದ ಪ್ರಶ್ನೆಗೆ ಮೋದಿ ಅವರು ಅಸಮಾಧಾನ ವ್ಯಕ್ತಪಡಿಸಿದರು. ‘ಅತಿದೊಡ್ಡ ತೆರಿಗೆ ವ್ಯವಸ್ಥೆ ಇದಾಗಿದೆ. ಸಮಸ್ಯೆಗಳಿವೆ, ಬಗೆಹರಿಸಲಾಗುತ್ತಿದೆ’ ಎಂದರು.ಜಿಎಸ್‌ಟಿ ಜಾರಿಗೊಳಿಸಿದ 13 ತಿಂಗಳಿನಲ್ಲಿಯೇ ಬಹಳ ದೊಡ್ಡ ಮಟ್ಟದ ಸ್ಥಿರತೆ ಸಾಧಿಸಿದ್ದೇವೆ. ಸ್ವಾತಂತ್ರ್ಯ ದೊರೆತ ನಂತರ ಇದೊಂದು ಮಹತ್ವದ ಸಾಧನೆಯಾಗಿದೆ’ ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.