ನವದೆಹಲಿ: 25 ಕೆ.ಜಿ.ಗಿಂತ ಹೆಚ್ಚಿನ ತೂಕದ, ಪ್ಯಾಕ್ ಮಾಡಿರುವ ಮತ್ತು ಲೇಬಲ್ ಇರುವ ಬೇಳೆಕಾಳು, ಏಕದಳಧಾನ್ಯ ಮತ್ತು ಹಿಟ್ಟು ಖರೀದಿಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಇರುವುದಿಲ್ಲ. ಅಂತೆಯೇ, 25 ಲೀಟರ್‌ಗಿಂತ ಹೆಚ್ಚಿನ ಪರಿಮಾಣದ, ಪ್ಯಾಕ್ ಮಾಡಿರುವ, ಲೇಬಲ್ ಇರುವ ಮೊಸರು, ಮಜ್ಜಿಗೆ, ಲಸ್ಸಿಯನ್ನು ಖರೀದಿಸಿದರೆ ಜಿಎಸ್‌ಟಿ ಅನ್ವಯವಾಗುವುದಿಲ್ಲ.
25 ಕೆ.ಜಿ.ಗಿಂತ ಕಡಿಮೆ ತೂಕದ ಆಹಾರ ಧಾನ್ಯಗಳು, ಬೇಳೆಕಾಳು, 25 ಲೀಟರ್‌ಗಿಂತ ಕಡಿಮೆ ಪರಿಮಾಣದ ಮೊಸರು, ಮಜ್ಜಿಗೆ, ಲಸ್ಸಿಗೆ ಮಾತ್ರ ಜಿಎಸ್‌ಟಿ ಅನ್ವಯವಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಸೋಮವಾರ ಸ್ಪಷ್ಟಪಡಿಸಿದೆ.
ಆಹಾರ ಧಾನ್ಯಗಳು, ಮೊಸರಿಗೆ ಅನ್ವಯವಾಗುವ ಜಿಎಸ್‌ಟಿ ಕುರಿತ ಕೆಲವು ಪ್ರಶ್ನೆಗಳಿಗೆ ಸಚಿವಾಲಯವು ಒಂದಿಷ್ಟು ವಿವರಗಳನ್ನು ನೀಡಿದೆ.
ಸೋಮವಾರಕ್ಕೂ ಮೊದಲು, ಬ್ರ್ಯಾಂಡ್ ಇರುವ ಆಹಾರ ಧಾನ್ಯಗಳಿಗೆ ಮಾತ್ರವೇ ಜಿಎಸ್‌ಟಿ ಅನ್ವಯ ಆಗುತ್ತಿತ್ತು. ಸೋಮವಾರದಿಂದ (ಜುಲೈ 18) ಪ್ಯಾಕ್ ಆಗಿರುವ ಮತ್ತು ಲೇಬಲ್ ಇರುವ ಆಹಾರ ಧಾನ್ಯಗಳಿಗೂ ತೆರಿಗೆ ಪಾವತಿಸಬೇಕಾಗುತ್ತದೆ.
ಮೊಸರು, ಲಸ್ಸಿ, ಮಜ್ಜಿಗೆ, ಮಂಡಕ್ಕಿಗೆ ಈ ಮೊದಲು ತೆರಿಗೆ ಇರಲಿಲ್ಲ. ಪ್ಯಾಕ್ ಮಾಡಿರುವ, ಲೇಬಲ್ ಇರುವ ಈ ಉತ್ಪನ್ನಗಳು ಸೋಮವಾರದಿಂದ ಶೇ 5ರ ತೆರಿಗೆ ವ್ಯಾಪ್ತಿಗೆ ಹೊಸದಾಗಿ ಸೇರಿವೆ.
ತಲಾ 10 ಕೆ.ಜಿ ತೂಕದ 10 ಪ್ಯಾಕ್ ಆಹಾರ ಧಾನ್ಯಗಳನ್ನು ಖರೀದಿಸುವುದಾದರೆ ಅದಕ್ಕೆ ಜಿಎಸ್‌ಟಿ ಕೊಡಬೇಕು. ಆದರೆ, 50 ಕೆ.ಜಿ. ತೂಕದ ಒಂದು ಪ್ಯಾಕ್ ಆಹಾರ ಧಾನ್ಯ ಅಥವಾ ಆಹಾರ ಉತ್ಪನ್ನ ಖರೀದಿಸುವುದಾದಲ್ಲಿ ಅದಕ್ಕೆ ತೆರಿಗೆ ಅನ್ವಯಿಸುವುದಿಲ್ಲ ಎಂದು ಸಚಿವಾಲಯವು ಸ್ಪಷ್ಟಪಡಿಸಿದೆ.
ಕಿರಾಣಿ ಅಂಗಡಿಯ ಮಾಲೀಕರು, ತಯಾರಕರು ಅಥವಾ ವಿತರಕರಿಂದ 25 ಕೆ.ಜಿ. ತೂಕದ ಅಕ್ಕಿ ಪ್ಯಾಕ್ ಖರೀದಿಸಿ, ಅದನ್ನು ಗ್ರಾಹಕರಿಗೆ ಕೆ.ಜಿ.ಯ ಲೆಕ್ಕದಲ್ಲಿ ಅಥವಾ ಗ್ರಾಂ ಲೆಕ್ಕದಲ್ಲಿ ಬಿಡಿ ಬಿಡಿಯಾಗಿ ಮಾರಾಟ ಮಾಡುವಾಗ, ಗ್ರಾಹಕರಿಂದ ತೆರಿಗೆ ವಸೂಲು ಮಾಡುವಂತಿಲ್ಲ.
ಆಹಾರ ಉತ್ಪನ್ನದ ಒಂದು ಪ್ಯಾಕ್‌ನ ಪ್ರಮಾಣವು 25 ಕೆ.ಜಿ ಅಥವಾ 25 ಲೀಟರ್‌ಗಿಂತ ಹೆಚ್ಚು ಇದ್ದರೆ ಅದಕ್ಕೆ ಜಿಎಸ್‌ಟಿ ಅನ್ವಯಿಸುವುದಿಲ್ಲ ಎಂದು ತಿಳಿಸಿದೆ.
ಪ್ಯಾಕ್ ಮಾಡಿರುವ ಉತ್ಪನ್ನ ಎಂದರೇನು?
ನಿರ್ದಿಷ್ಟ ಆಹಾರ ಧಾನ್ಯವನ್ನು, ಆಹಾರ ಪದಾರ್ಥವನ್ನು ಪೂರ್ವ ನಿರ್ಧರಿತ ಪ್ರಮಾಣದಲ್ಲಿ ಗ್ರಾಹಕ ಬರುವುದಕ್ಕೂ ಮೊದಲೇ ಪ್ಯಾಕ್ ಮಾಡಿ ಇಟ್ಟಿದ್ದರೆ ಅದನ್ನು ಜಿಎಸ್‌ಟಿ ಪರಿಭಾಷೆಯಲ್ಲಿ ‘ಪ್ಯಾಕ್ ಮಾಡಿರುವ’ ಎಂದು ಕರೆಯಲಾಗುತ್ತದೆ. ಆ ಪ್ಯಾಕ್ ಸೀಲ್ ಆಗಿರಲೇಬೇಕು ಎಂದೇನೂ ಇಲ್ಲ. ಇಂತಹ ಉತ್ಪನ್ನಗಳಿಗೆ ತೆರಿಗೆ ಅನ್ವಯ ಆಗುತ್ತದೆ. ಗ್ರಾಹಕರ ಸಮ್ಮುಖದಲ್ಲಿಯೇ ಆಹಾರ ಪದಾರ್ಥವನ್ನು ಪ್ಯಾಕ್ ಮಾಡಿದರೆ ಅದಕ್ಕೆ ತೆರಿಗೆ ಅನ್ವಯಿಸುವುದಿಲ್ಲ.
‘ಜಿಎಸ್‌ಟಿ ವಿಧಿಸಿರುವುದರಿಂದ ಅಕ್ಕಿ ಮತ್ತು ಏಕದಳ ಧಾನ್ಯಗಳಂತಹ ಆಹಾರ ಉತ್ಪನ್ನಗಳ ಬೆಲೆ ಹೆಚ್ಚಳಕ್ಕೆ ಕಾರಣವಾಗಲಿದೆ’ ಎಂದು ಎಎಂಆರ್‌ಜಿ ಆ್ಯಂಡ್ ಅಸೋಸಿಯೇಟ್ಸ್‌ನ ಹಿರಿಯ ಪಾಲುದಾರ ರಜತ್ ಮೋಹನ್ ಹೇಳಿದ್ದಾರೆ.
***
ಒಂದೆಡೆ ನಿರುದ್ಯೋಗ, ಮತ್ತೊಂದೆಡೆ ತೆರಿಗೆ ಹೆಚ್ಚಳ, ಅತ್ಯಂತ ವೇಗ ವಾಗಿ ಬೆಳೆಯುತ್ತಿದ್ದ ಆರ್ಥಿಕತೆಯನ್ನು ನಾಶ ಮಾಡುವುದು ಹೇಗೆ ಎಂಬುದಕ್ಕೆ ಬಿಜೆಪಿ ನಿಲುವೇ ನಿದರ್ಶನ
-ರಾಹುಲ್ ಗಾಂಧಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.