ADVERTISEMENT

ಹಿರಿಯರ ಆರೋಗ್ಯ ವಿಮೆಗೆ ತೆರಿಗೆ ಇಲ್ಲ; ನೀರು ಅಗ್ಗ; ಕೂದಲ ಬಣ್ಣ, ಮೇಕಪ್‌ ದುಬಾರಿ!

ಪಿಟಿಐ
Published 19 ಅಕ್ಟೋಬರ್ 2024, 13:56 IST
Last Updated 19 ಅಕ್ಟೋಬರ್ 2024, 13:56 IST
   

ನವದೆಹಲಿ: ಜನಸಾಮಾನ್ಯರ ಮೇಲಿನ ತೆರಿಗೆ ಭಾರ ತಗ್ಗಿಸುವ ನಿಟ್ಟಿನಲ್ಲಿ ಕೆಲವು ಸರಕುಗಳ ಮೇಲೆ ವಿಧಿಸುತ್ತಿರುವ ಶೇ 12 ಮತ್ತು ಶೇ 18ರಷ್ಟು ಜಿಎಸ್‌ಟಿಯನ್ನು ಶೇ 5ಕ್ಕೆ ತಗ್ಗಿಸುವ ಬಗ್ಗೆ ಸರಕು ಮತ್ತು ಸೇವಾ ತೆರಿಗೆ ಸರಳೀಕರಣಕ್ಕೆ ಸಂಬಂಧಿಸಿದಂತೆ ರಚಿಸಿರುವ ಸಚಿವರ ಸಮಿತಿಯು ಶನಿವಾರ ಚರ್ಚಿಸಿದೆ.

ಇದರಲ್ಲಿ ಪ್ರಮುಖವಾಗಿ ಹಿರಿಯರ ಆರೋಗ್ಯ ವಿಮೆಯಲ್ಲಿ ₹5 ಲಕ್ಷದವರೆಗೂ ತೆರಿಗೆ ವಿನಾಯ್ತಿ ನೀಡಲು ಶಿಫಾರಸಿಗೆ ನಿರ್ಧರಿಸಿದೆ. 

ಅಲ್ಲದೆ, ಕೆಲವು ದುಬಾರಿ ಸರಕುಗಳಿಗೆ ಮತ್ತಷ್ಟು ತೆರಿಗೆ ಹೇರಲು ತೀರ್ಮಾನಿಸಿದೆ. ಈ ಬಗ್ಗೆ ಜಿಎಸ್‌ಟಿ ಮಂಡಳಿಗೆ ವರದಿ ಸಲ್ಲಿಸಲಿದೆ. ನವೆಂಬರ್‌ನಲ್ಲಿ ನಡೆಯಲಿರುವ ಮಂಡಳಿಯ ಸಭೆಯಲ್ಲಿ ಸಮಿತಿಯ ಶಿಫಾರಸುಗಳ ಕುರಿತು ಚರ್ಚಿಸಲಾಗುತ್ತದೆ. ಇದಕ್ಕೆ ಒಪ್ಪಿಗೆ ನೀಡಿದ ಬಳಿಕ ಅನುಷ್ಠಾನಕ್ಕೆ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

‘ಜಿಎಸ್‌ಟಿ ಪರಿಷ್ಕರಣೆ ಮೂಲಕ ₹20 ಸಾವಿರ ಕೋಟಿ ವರಮಾನ ಹೆಚ್ಚಳಕ್ಕೆ ಬಿಹಾರದ ಉಪ ಮುಖ್ಯಮಂತ್ರಿ ಸಾಮ್ರಾಟ್‌ ಚೌಧರಿ ಅಧ್ಯಕ್ಷತೆಯ ಆರು ಸಚಿವರ ಸಮಿತಿಯು ಮುಂದಾಗಿದೆ’ ಎಂದು ಹೇಳಿದ್ದಾರೆ.

ಶೇ 5 ಹಾಗೂ ಶೇ 12ರ ಸ್ಲ್ಯಾಬ್‌ನಲ್ಲಿ ಇರುವ ಜವಳಿ, ಕೈಮಗ್ಗ, ಕೃಷಿ ಉತ್ಪನ್ನ, ರಸಗೊಬ್ಬರ ಸೇರಿ 100ಕ್ಕೂ ಹೆಚ್ಚು ವಸ್ತುಗಳ ಮೇಲಿನ ತೆರಿಗೆ ಪರಿಷ್ಕರಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ.  

ಹೇರ್‌ ಡ್ರೈಯರ್‌, ಹೇರ್‌ ಕರ್ಲರ್‌ ಸೇರಿ ಪ್ರಸಾಧನ ಪರಿಕರಗಳು ಸದ್ಯ ಶೇ 18ರ ಸ್ಲ್ಬಾಬ್‌ನಲ್ಲಿವೆ. ಈ ವಸ್ತುಗಳನ್ನು ಮತ್ತೆ ಶೇ 28ರ ತೆರಿಗೆ ಸ್ಲ್ಯಾಬ್‌ಗೆ ಸೇರಿಸುವ ಬಗ್ಗೆ ಸಮಿತಿಯು ಶಿಫಾರಸು ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಸಮಿತಿಯಲ್ಲಿ ಉತ್ತರ ಪ್ರದೇಶದ ಹಣಕಾಸು ಸಚಿವ ಸುರೇಶ್‌ಕುಮಾರ್ ಖನ್ನಾ, ರಾಜಸ್ಥಾನದ ಆರೋಗ್ಯ ಸಚಿವ ಗಜೇಂದ್ರ ಸಿಂಗ್‌, ಕರ್ನಾಟಕದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮತ್ತು ಕೇರಳದ ಹಣಕಾಸು ಸಚಿವ ಕೆ.ಎನ್‌. ಬಾಲಗೋಪಾಲ್‌ ಇದ್ದಾರೆ.

ಸಚಿವರ ಸಭೆಯಲ್ಲಿ ಉತ್ತರ ಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ, ಕರ್ನಾಟಕ, ಕೇರಳ, ಆಂಧ್ರ ಪ್ರದೇಶ, ಗೋವಾ, ಗುಜರಾತ್, ಮೇಘಾಲಯ, ಪಂಜಾಬ್, ತಮಿಳುನಾಡು, ತೆಲಂಗಾಣದ ಸಚಿವರು ಇದ್ದಾರೆ. ಸಮಿತಿಯು ತನ್ನ ಶಿಫಾರಸುಗಳನ್ನು ಜಿಎಸ್‌ಟಿ ಸಮಿತಿಗೆ ಅಕ್ಟೋಬರ್ ಕೊನೆಯ ವಾರದಲ್ಲಿ ಸಲ್ಲಿಸಲಿದೆ.

ತೆರಿಗೆ ಏರಿಕೆ ಹಾಗೂ ಇಳಿಕೆಯ ವಿವರ

  • ₹10 ಸಾವಿರಕ್ಕಿಂತ ಕಡಿಮೆ ಬೆಲೆಯ ಬೈಸಿಕಲ್ ಮೇಲಿನ ತೆರಿಗೆಯನ್ನು ಶೇ 12ರಿಂದ ಶೇ 5ಕ್ಕೆ ತಗ್ಗಿಸಲಾಗಿದೆ.

  • 20 ಲೀಟರ್‌ ಕ್ಯಾನ್‌ ನೀರಿನ ಮೇಲಿನ ತೆರಿಗೆಯನ್ನು ಶೇ 18ರಿಂದ ಶೇ 5ಕ್ಕೆ ಇಳಿಸಲಾಗಿದೆ.

  • ನೋಟ್‌ ಪುಸಕ್ತದ ತೆರಿಗೆ ಶೇ 12ರಿಂದ ಶೇ 5

  • ₹15 ಸಾವಿರ ಬೆಲೆಯ ಪಾದರಕ್ಷೆಗಳ ಮೇಲಿನ ತೆರಿಗೆಯನ್ನು ಶೇ 18ರಿಂದ 28ಕ್ಕೆ ಹೆಚ್ಚಿಸಲಾಗಿದೆ

  • ₹25 ಸಾವಿರಕ್ಕೂ ಅಧಿಕ ಬೆಲೆಯ ವಾಚುಗಳ ಮೇಲಿನ ತೆರಿಗೆಯನ್ನು ಶೇ 18ರಿಂದ 28ಕ್ಕೆ ಹೆಚ್ಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.