ADVERTISEMENT

ಜಿಎಸ್‌ಟಿ ಮಂಡಳಿ ಸದಸ್ಯರಾಗಿ ಕೃಷ್ಣ ಬೈರೇಗೌಡ ನೇಮಕ

​ಪ್ರಜಾವಾಣಿ ವಾರ್ತೆ
Published 21 ಜೂನ್ 2024, 15:18 IST
Last Updated 21 ಜೂನ್ 2024, 15:18 IST
ಕೃಷ್ಣ ಬೈರೇಗೌಡ
ಕೃಷ್ಣ ಬೈರೇಗೌಡ   

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಡಿ ತೆರಿಗೆ ಪ್ರಮಾಣ ಸರಳಗೊಳಿಸಲು ರಚಿಸಿರುವ ಏಳು ಸಚಿವರನ್ನು ಒಳಗೊಂಡ ಸಮಿತಿಯನ್ನು ಪುನರ್‌ ರಚಿಸಲಾಗಿದೆ.

ಬಿಹಾರದ ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಈ ಸಮಿತಿಯ ಸಂಚಾಲಕರಾಗಿ ನೇಮಕವಾಗಿದ್ದಾರೆ. ಕರ್ನಾಟಕದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರನ್ನು ಸಮಿತಿಯ ಸದಸ್ಯರನ್ನಾಗಿ ನೇಮಿಸಲಾಗಿದೆ. ಮಂಡಳಿಯ ವೆಬ್‌ಸೈಟ್‌ನಲ್ಲಿ ಈ ಕುರಿತು ಅಧಿಕೃತವಾಗಿ ಪ್ರಕಟಿಸಲಾಗಿದೆ.

ಉತ್ತರಪ್ರದೇಶದ ಹಣಕಾಸು ಸಚಿವ ಸುರೇಶ್‌ ಕುಮಾರ್‌ ಖನ್ನಾ, ಗೋವಾದ ಸಾರಿಗೆ ಸಚಿವ ಮೌವಿನ್ ಗೊಡಿನ್ಹೋ, ರಾಜಸ್ಥಾನದ ವೈದ್ಯಕೀಯ ಮತ್ತು ಆರೋಗ್ಯ ಸೇವಾ ಸಚಿವ ಗಜೇಂದ್ರ ಸಿಂಗ್‌, ಪಶ್ಚಿಮ ಬಂಗಾಳದ ಹಣಕಾಸು ಸಚಿವರಾದ ಚಂದ್ರಿಮಾ ಭಟ್ಟಾಚಾರ್ಯ ಮತ್ತು ಕೇರಳದ ಹಣಕಾಸು ಸಚಿವ ಕೆ.ಎನ್‌. ಬಾಲಗೋಪಾಲ್‌ ಈ ಸಮಿತಿಯ ಉಳಿದ ಸದಸ್ಯರಾಗಿದ್ದಾರೆ.

ADVERTISEMENT

ಜಿಎಸ್‌ಟಿ ದರ ಸರಳೀಕರಣ, ಯಾವ ವಿಭಾಗಕ್ಕೆ ವಿನಾಯಿತಿ ಸೌಲಭ್ಯ ನೀಡಬೇಕು ಮತ್ತು ಜಿಎಸ್‌ಟಿ ವರಮಾನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಅಧ್ಯಯನ ನಡೆಸಿ ವರದಿ ಸಲ್ಲಿಸುವುದು ಈ ಸಮಿತಿಯ ಜವಾಬ್ದಾರಿಯಾಗಿದೆ. ಸದ್ಯ ಜಿಎಸ್‌ಟಿ ಅಡಿಯಲ್ಲಿ ನಾಲ್ಕು ಹಂತದಲ್ಲಿ ತೆರಿಗೆ ನಿಗದಿಪಡಿಸಲಾಗಿದೆ.

ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ 2021ರಲ್ಲಿ ಈ ಸಮಿತಿ ರಚಿಸಲಾಗಿತ್ತು. ಈ ಸಮಿತಿಯು 2022ರ ಜೂನ್‌ನಲ್ಲಿ ಮಧ್ಯಂತರ ವರದಿ ಸಲ್ಲಿಸಿದೆ. 

ಕಳೆದ ವರ್ಷದ ಅಕ್ಟೋಬರ್‌ನಲ್ಲಿ ‍ಪುನರ್ ರಚನೆಗೊಂಡಿದ್ದ ಸಮಿತಿಯ ಸಂಚಾಲಕರಾಗಿ ಸುರೇಶ್‌ ಕುಮಾರ್‌ ಖನ್ನಾ ನೇಮಕವಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.