ADVERTISEMENT

ಜಿಎಸ್‌ಟಿ ಸಂಗ್ರಹ ದಾಖಲೆ: ಅಕ್ಟೋಬರ್‌ನಲ್ಲಿ ₹1.87 ಲಕ್ಷ ಕೋಟಿ ವರಮಾನ

ಪಿಟಿಐ
Published 1 ನವೆಂಬರ್ 2024, 15:44 IST
Last Updated 1 ನವೆಂಬರ್ 2024, 15:44 IST
ಜಿಎಸ್‌ಟಿ ಸಂಗ್ರಹ ಏರಿಕೆ
ಜಿಎಸ್‌ಟಿ ಸಂಗ್ರಹ ಏರಿಕೆ   

ನವದೆಹಲಿ: ಅಕ್ಟೋಬರ್‌ನಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮೂಲಕ ₹1.87 ಲಕ್ಷ ಕೋಟಿ ವರಮಾನ ಸಂಗ್ರಹವಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 9ರಷ್ಟು ಏರಿಕೆಯಾಗಿದ್ದು, ದಾಖಲೆಯಾಗಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ತಿಳಿಸಿದೆ.

ಪ್ರಸಕ್ತ ವರ್ಷದ ಏಪ್ರಿಲ್‌ನಲ್ಲಿ ₹2.10 ಲಕ್ಷ ಕೋಟಿ ಜಿಎಸ್‌ಟಿ ವರಮಾನ ಸಂಗ್ರಹವಾಗಿ ಹೊಸ ಮೈಲಿಗಲ್ಲು ಸ್ಥಾಪನೆಯಾಗಿತ್ತು. ಆ ಬಳಿಕ ಅತಿಹೆಚ್ಚು ವರಮಾನ ಸಂಗ್ರಹವಾಗಿರುವ ಎರಡನೇ ತಿಂಗಳು ಇದಾಗಿದೆ.

ಕೇಂದ್ರ ಜಿಎಸ್‌ಟಿ ₹33,821 ಕೋಟಿ, ರಾಜ್ಯ ಜಿಎಸ್‌ಟಿ ₹41,864 ಕೋಟಿ, ಸಮಗ್ರ ಜಿಎಸ್‌ಟಿ ₹99,111 ಕೋಟಿ ಹಾಗೂ ₹12,550 ಕೋಟಿ ಸೆಸ್ ಸಂಗ್ರಹವಾಗಿದೆ. ದೇಶೀಯ ಮಟ್ಟದಲ್ಲಿ ಮಾರಾಟದಲ್ಲಿನ ಏರಿಕೆಯು ವರಮಾನ ಹೆಚ್ಚಳಕ್ಕೆ ನೆರವಾಗಿದೆ.

ADVERTISEMENT

ದೇಶೀಯ ವಹಿವಾಟು ಮೇಲಿನ ಜಿಎಸ್‌ಟಿ ಸಂಗ್ರಹದಲ್ಲಿ ಶೇ 10.6ರಷ್ಟು ಹೆಚ್ಚಳವಾಗಿದ್ದು, ₹1.42 ಲಕ್ಷ ಕೋಟಿ ಆಗಿದೆ. ಆಮದು ಮೇಲಿನ ತೆರಿಗೆ ಸಂಗ್ರಹದಲ್ಲಿ ಶೇ 4ರಷ್ಟು ಏರಿಕೆಯಾಗಿದ್ದು, ₹45,096 ಕೋಟಿ ಆಗಿದೆ. 

ಒಟ್ಟು ₹19,306 ಕೋಟಿ ಮರುಪಾವತಿ ಮಾಡಲಾಗಿದೆ. ಮರುಪಾವತಿ ಬಳಿಕ ಒಟ್ಟು ವರಮಾನ ಸಂಗ್ರಹ ₹1.68 ಲಕ್ಷ ಕೋಟಿ ಆಗಿದೆ.

ಕಳೆದ ವರ್ಷದ ಅಕ್ಟೋಬರ್‌ನಲ್ಲಿ ₹1.72 ಲಕ್ಷ ಕೋಟಿ ವರಮಾನ ಸಂಗ್ರಹವಾಗಿತ್ತು. 

‘ತೆರಿಗೆ ಸುಧಾರಣೆಗೆ ಕೈಗೊಂಡಿರುವ ಕ್ರಮಗಳು ಮತ್ತು ಹಬ್ಬದ ಋತುವಿನಿಂದಾಗಿ ವರಮಾನ ಸಂಗ್ರಹದಲ್ಲಿ ಏರಿಕೆಯಾಗಿದೆ’ ಎಂದು ಡೆಲಾಯ್ಟ್‌ ಇಂಡಿಯಾ ಪಾಲುದಾರ ಎಂ.ಎಸ್. ಮಣಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.