ನವದೆಹಲಿ:ಜಿಎಸ್‌ಟಿ ಮಂಡಳಿಯು ಶನಿವಾರದ ಸಭೆಯಲ್ಲಿ ಟೈರ್ ಮೇಲಿನ ಜಿಎಸ್‌ಟಿ ದರವನ್ನು ಶೇ 28 ರಿಂದ ಶೇ 18ಕ್ಕೆ ತಗ್ಗಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
‘ಜನಸಾಮಾನ್ಯರ ಮೇಲಿನ ತೆರಿಗೆ ಹೊರೆ ತಗ್ಗಿಸಲು ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಹೆಚ್ಚಿನ ಗಮನ ನೀಡಲಿದೆ’ ಎಂದೂ ತಿಳಿಸಿದ್ದಾರೆ.
ತೆರಿಗೆ ದರಗಳನ್ನು ಸರಳಗೊಳಿಸುವ ಭಾಗವಾಗಿ ಶೇ 28ರಲ್ಲಿ ಇರುವ ಸರಕುಗಳಲ್ಲಿ ಕೆಲವು ಸರಕುಗಳ ತೆರಿಗೆ ದರ ತಗ್ಗಿಸಲು ಜಿಎಸ್‌ಟಿ ಮಂಡಳಿ ಮುಂದಾಗಿದೆ.
ಸದ್ಯ 34 ಸರಕುಗಳು ಶೇ 28ರ ತೆರಿಗೆ ವ್ಯಾಪ್ತಿಯಲ್ಲಿವೆ. ಇದರಲ್ಲಿ ವಾಹನಗಳ ಟೈರ್, ಡಿಜಿಟಲ್ ಕ್ಯಾಮೆರಾ, ಏರ್ ಕಂಡೀಷನರ್, ವಾಷಿಂಗ್ ಮಷಿನ್, ಸೆಟ್ ಆಫ್ ಬಾಕ್ಸ್, ಮಾನಿಟರ್ ಮತ್ತು ಪ್ರೊಜೆಕ್ಟರ್, ಸಿಮೆಂಟ್ ಗರಿಷ್ಠ ತೆರಿಗೆ ವ್ಯಾಪ್ತಿಯಲ್ಲಿವೆ.
ಸಿಮೆಂಟ್ ಮೇಲಿನ ತೆರಿಗೆಯನ್ನು ಶೇ 18ಕ್ಕೆ ತಗ್ಗಿಸಿದರೆ, ಅದರಿಂದ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕವಾಗಿ ₹ 20 ಸಾವಿರ ಕೋಟಿ ನಷ್ಟವಾಗಲಿದೆ. ಹೀಗಿದ್ದರೂ ಮಂಡಳಿ ತೆರಿಗೆ ದರ ಕಡಿಮೆ ಮಾಡುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಸಿಮೆಂಟ್ ಖರೀದಿಸುವಲ್ಲಿ ಅತಿ ಹೆಚ್ಚಿನ ತೆರಿಗೆ ವಂಚನೆ ನಡೆಯುತ್ತಿದೆ. ತೆರಿಗೆ ದರ ತಗ್ಗಿಸಿದಲ್ಲಿ, ವಂಚನೆಯೂ ಕಡಿಮೆಯಾಗಲಿದ್ದು, ವಸತಿ ವಲಯದ ಬೆಳವಣಿಗೆಗೂ ನೆರವಾಗಲಿದೆ ಎಂದಿದ್ದಾರೆ.
‘ಯಾವೆಲ್ಲಾ ಸರಕುಗಳ ತೆರಿಗೆ ದರ ತಗ್ಗಲಿದೆ ಎಂದುಉದ್ಯಮ ವಲಯ ಮತ್ತು ಗ್ರಾಹಕರು ಕುತೂಹಲಭರಿತರಾಗಿದ್ದಾರೆ. ವರಮಾನ ಸಂಗ್ರಹದ ಮೇಲೆ ಪರಿಣಾಮ ಬೀರದಂತೆ ಜಿಎಸ್‌ಟಿ ಮಂಡಳಿ ನಿರ್ಧಾರ ತೆಗೆದುಕೊಳ್ಳಬೇಕಿದೆ’ ಎಂದು ಅರ್ನ್ಸ್ಟ್ ಆ್ಯಂಡ್ ಯಂಗ್ ಸಂಸ್ಥೆಯ ತೆರಿಗೆ ಪಾಲುದಾರರೊಬ್ಬರು ಹೇಳಿದ್ದಾರೆ.
ಶೇ 28ರಲ್ಲಿರುವ ಸರಕುಗಳು: ಸಿಗರೇಟ್, ಬೀಡಿ, ತಂಬಾಕು ಉತ್ಪನ್ನಗಳು, ಪಾನ್ ಮಸಾಲಾ, ಸಿಗಾರ್ ಪೈಪ್, ವಾಹನ, ವಿಮಾನ, ವಿಹಾರ ದೋಣಿ, ರಿವಾಲ್ವರ್, ಪಿಸ್ತೂಲ್ ಮತ್ತು ಲಾಟರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.