ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮೂಲಕ ಸೆಪ್ಟೆಂಬರ್ ತಿಂಗಳಲ್ಲಿ ವರಮಾನ ಸಂಗ್ರಹದಲ್ಲಿ ಶೇ 6.5ರಷ್ಟು ಏರಿಕೆಯಾಗಿದೆ. ಒಟ್ಟು ₹1.73 ಲಕ್ಷ ಕೋಟಿ ಸಂಗ್ರಹವಾಗಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ತಿಳಿಸಿದೆ.
ಮರುಪಾವತಿ ಬಳಿಕ ₹1.53 ಲಕ್ಷ ಕೋಟಿ ಆಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 3.39ರಷ್ಟು ಏರಿಕೆಯಾಗಿದೆ.
ಆಗಸ್ಟ್‌ನಲ್ಲಿ ₹1.75 ಲಕ್ಷ ಕೋಟಿ ವರಮಾನ ಸಂಗ್ರಹವಾಗಿತ್ತು. 2023ರ ಸೆಪ್ಟೆಂಬರ್‌ನಲ್ಲಿ ₹1.63 ಲಕ್ಷ ಕೋಟಿ ಸಂಗ್ರಹವಾಗಿತ್ತು. ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್‌ನಲ್ಲಿ ₹2.10 ಲಕ್ಷ ಕೋಟಿ ಸಂಗ್ರಹವಾಗಿದ್ದು, ಇದುವರೆಗಿನ ದಾಖಲೆಯಾಗಿದೆ.
ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ಒಟ್ಟು ₹10.87 ಲಕ್ಷ ಕೋಟಿ ವರಮಾನ ಸಂಗ್ರಹವಾಗಿದೆ. ಕಳೆದ ಆರ್ಥಿಕ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 9.5ರಷ್ಟು ಹೆಚ್ಚಳವಾಗಿದೆ ಎಂದು ಸರ್ಕಾರ ತಿಳಿಸಿದೆ.
ಕೆಲವು ಪ್ರಮುಖ ರಾಜ್ಯಗಳಲ್ಲಿ ಜಿಎಸ್‌ಟಿ ವರಮಾನ ಸಂಗ್ರಹದಲ್ಲಿ ಕಡಿಮೆಯಾಗಿದೆ. ದೇಶದ ಜಿಎಸ್‌ಟಿಗೆ ಅತಿಹೆಚ್ಚು ಕೊಡುಗೆ ನೀಡುವ ಮಹಾರಾಷ್ಟ್ರದಲ್ಲಿ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ವರಮಾನ ಸಂಗ್ರಹದಲ್ಲಿ ಶೇ 5ರಷ್ಟು ಇಳಿಕೆಯಾಗಿದೆ.
ಕರ್ನಾಟಕದಲ್ಲಿ ಶೇ 8ರಷ್ಟು ಏರಿಕೆಯಾಗಿದ್ದು, ₹12,642 ಕೋಟಿ ಸಂಗ್ರಹವಾಗಿದೆ. ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ₹11,693 ಕೋಟಿ ಸಂಗ್ರಹವಾಗಿತ್ತು.
ಗುಜರಾತ್‌ನಲ್ಲಿ ವರಮಾನ ಸಂಗ್ರಹ ಸ್ಥಿರವಾಗಿದೆ. ಒಟ್ಟು ₹10,153 ಕೋಟಿ ಸಂಗ್ರಹವಾಗಿದೆ. ತಮಿಳುನಾಡು ಮತ್ತು ಕೇರಳದಲ್ಲಿ ಕ್ರಮವಾಗಿ ಶೇ 5ರಷ್ಟು ಹಾಗೂ ಶೇ 7ರಷ್ಟು ಏರಿಕೆಯಾಗಿದೆ. ಹರಿಯಾಣದಲ್ಲಿ ಶೇ 24ರಷ್ಟು ಹಾಗೂ ದೆಹಲಿಯಲ್ಲಿ ಶೇ 20ರಷ್ಟು ಹೆಚ್ಚಳವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.