ನವದೆಹಲಿ: ಜಿಎಸ್‌ಟಿ ಜಾಲತಾಣದ ತಾಂತ್ರಿಕ ದೋಷಗಳನ್ನು ನಿವಾರಿಸುವ ಪರಿಹಾರ ಮಾರ್ಗಗಳನ್ನು 15 ದಿನದೊಳಗಾಗಿ ಸಲ್ಲಿಸುವಂತೆ ಹಣಕಾಸು ಸಚಿವಾಲಯವು ಇನ್ಫೊಸಿಸ್‌ಗೆ ಕೇಳಿದೆ.
ಇನ್ಫೊಸಿಸ್ ಅಧ್ಯಕ್ಷ ನಂದನ್ ನಿಲೇಕಣಿ ಅವರು ಈ ಕುರಿತು ಸಚಿವಾಲಯಕ್ಕೆ ಮಾಹಿತಿ ನೀಡಲಿದ್ದಾರೆ.
ರಿಟರ್ನ್ಸ್ ಸಲ್ಲಿಸುವಾಗ ಎದುರಾಗುತ್ತಿರುವ ಸಮಸ್ಯೆಗಳು ಎರಡು ವರ್ಷಗಳು ಕಳೆದರೂ ಬಗೆಹರಿಯುತ್ತಿಲ್ಲ. ಹೀಗಾಗಿ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿರುವ ಇನ್ಫೊಸಿಸ್‌ಗೆ ಪರಿಹಾರ ಸೂಚಿಸುವಂತೆ ಕೇಳಲಾಗಿದೆ.ರೆವಿನ್ಯೂ ಕಾರ್ಯದರ್ಶಿ ಶನಿವಾರ ಇನ್ಫೊಸಿಸ್‌ನ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಬಳಿಕ ಈ ಮಾಹಿತಿ ಕೇಳಲು ನಿರ್ಧರಿಸಲಾಗಿದೆ.
ಮಾರ್ಚ್ 5ರಂದು ಇನ್ಫೊಸಿಸ್‌ಗೆ ಪತ್ರ ಬರೆದಿರುವ ಸಚಿವಾಲಯವು, 2018ರ ಆರಂಭದಲ್ಲಿ ಕಂಡುಬಂದಿದ್ದ ತಾಂತ್ರಿಕ ಸಮಸ್ಯೆಗಳು ಇಂದಿಗೂ ಬಗೆಹರಿದಿಲ್ಲ. ರಿಟರ್ನ್ಸ್ ಸಲ್ಲಿಕೆಯಲ್ಲಿನ ವೈಫಲ್ಯಗಳು ತಿಂಗಳಿನಿಂದ ತಿಂಗಳಿಗೆ ಹೆಚ್ಚಾಗುತ್ತಲೇ ಇವೆ. ಇದರಿಂದಾಗಿ ಪ್ರಾಮಾಣಿಕ ತೆರಿಗೆ ಪಾವತಿದಾರರಿಗೆ ಸಮಸ್ಯೆಯಾಗುತ್ತಿದೆ.
ಬಾಕಿ ಉಳಿದಿರುವ ಸಮಸ್ಯೆಗಳನ್ನು ಇತ್ಯರ್ಥಪಡಿಸುವ ಜತೆಗೆ ದೈನಂದಿನ ಕಾರ್ಯಗಳಿಗೆ ಅಡ್ಡಿಯಾಗದಂತೆ ಜಾಲತಾಣವನ್ನು ಸಿದ್ಧಪಡಿಸುವುದು ಹಾಗೂ ಭವಿಷ್ಯದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಉದ್ಭವಿಸದಂತೆ ಯೋಜನೆ ರೂಪಿಸುವ ಕುರಿತಾಗಿ 15 ದಿನದೊಳಗೆ ತ್ವರಿತವಾದ ಕಾರ್ಯಸೂಚಿಯನ್ನು ಸಿದ್ಧಪಡಿಸಿ. ಕಂಪನಿಯು ತನ್ನ ಕಾರ್ಯದಕ್ಷತೆಯನ್ನು ಜಿಎಸ್‌ಟಿ ಯೋಜನೆಯಲ್ಲಿಯೂ ತೋರಿಸಲಿದೆ ಎನ್ನುವ ನಿರೀಕ್ಷೆ ಇದೆ’ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ಇನ್ಫೊಸಿಸ್ ನಿರಾಕರಿಸಿದೆ.
30 ತಿಂಗಳುಗಳಿಂದ ಜಿಎಸ್‌ಟಿ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದೆ. ತಿಂಗಳ ಗಡುವು ಮುಗಿಯಲು ಎರಡು ದಿನ ಇದ್ದಾಗ ರಿಟರ್ನ್ಸ್ ಸಲ್ಲಿಕೆಗೆ ಬಹಳಷ್ಟು ತೊಂದರೆ ಆಗುತ್ತಿದೆ ಎಂದು ತೆರಿಗೆದಾರರು ದೂರು ನೀಡಿದ್ದಾರೆ. ಈ ಬಗ್ಗೆ ಸಕಾಲಕ್ಕೆ ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸುವಂತೆ ಹಾಗೂ ಅದರ ಮೂಲ ಕಾರಣವನ್ನು ಪತ್ತೆ ಮಾಡಿ ಮತ್ತೊಮ್ಮೆ ಅಂತಹ ಸಮಸ್ಯೆ ಬರದೇ ಇರುವಂತೆ ಮಾಡಲು ಇನ್ಫೊಸಿಸ್‌ಗೆ ಪದೇ ಪದೇ ಕೇಳಲಾಗುತ್ತಿದೆ. ಹೀಗಿದ್ದರೂ ಸಮಸ್ಯೆ ಇನ್ನೂ ಬಗೆಹರಿದಿಲ್ಲ.
ಈ ರೀತಿಯ ಸಮಸ್ಯೆಗಳಿಂದಾಗಿ ರಿಟರ್ನ್ಸ್ ಸಲ್ಲಿಸಲು ಸಾಧ್ಯವಾಗದೇ ತೆರಿಗೆದಾರರು ವಿಳಂಬ ಪಾವತಿ ಶುಲ್ಕ, ಬಡ್ಡಿದರ ಕಟ್ಟುವಂತಾಗಿದೆ. ಇದು ಆರೋಗ್ಯಕರ ಬೆಳವಣಿಗೆ ಅಲ್ಲ ಎಂದೂ ಸಚಿವಾಲಯ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.