ಬೆಂಗಳೂರು:ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯನ್ನು ಇನ್ನಷ್ಟು ಸರಳಗೊಳಿಸಲು ಸಣ್ಣ ಮತ್ತು ಮಧ್ಯಮ ವರ್ತಕರಿಗೆ ಲೆಕ್ಕಪತ್ರ ಸಲ್ಲಿಕೆಯ (ರಿಟರ್ನ್) ಪ್ರತ್ಯೇಕ ಸಾಫ್ಟ್‌ವೇರ್ ಒದಗಿಸಲು ಕೇಂದ್ರ ಸರ್ಕಾರ ಆಲೋಚಿಸುತ್ತಿದೆ.
‘ತೆರಿಗೆ ವ್ಯವಸ್ಥೆಯ ಬೆನ್ನೆಲುಬು ಆಗಿರುವ ‘ಜಿಎಸ್‌ಟಿಎನ್’ನಲ್ಲಿನ ಹಲವಾರು ತಾಂತ್ರಿಕ ದೋಷಗಳನ್ನು ನಿವಾರಿಸಿಕೊಳ್ಳಲು ಈ ಹೊಸ ಸಾಫ್ಟ್‌ವೇರ್ ನೆರವಾಗಲಿದೆ’ ಎಂದು ಸಚಿವರ ತಂಡದ ಮುಖ್ಯಸ್ಥ ಸುಶೀಲ್ ಕುಮಾರ್ ಮೋದಿ ತಿಳಿಸಿದ್ದಾರೆ.
‘ಈ ಸಾಫ್ಟ್‌ವೇರ್ ಸಣ್ಣ ಮತ್ತು ಮಧ್ಯಮ ವಹಿವಾಟುದಾರರಿಗೆ ಮಾತ್ರ ಸೀಮಿತವಾಗಿರುತ್ತದೆ. ನೋಂದಾಯಿತ 1.14 ಕೋಟಿ ತೆರಿಗೆದಾರರಲ್ಲಿ ಶೇ 92ರಷ್ಟು (1.04 ಕೋಟಿ) ತೆರಿಗೆದಾರರು ಸಣ್ಣ ಮತ್ತು ಮಧ್ಯಮ ವಹಿವಾಟುದಾರರಾಗಿದ್ದಾರೆ. ಇವರಿಗೆಲ್ಲ ಉಚಿತವಾಗಿ ಸಾಫ್ಟ್‌ವೇರ್ ಒದಗಿಸಲು ಸರ್ಕಾರ ಉದ್ದೇಶಿಸಿದೆ’ ಎಂದು ಹೇಳಿದ್ದಾರೆ.
ಸಾಫ್ಟ್‌ವೇರ್ ಅಭಿವೃದ್ಧಿಪಡಿಸುವ ಉದ್ದೇಶಕ್ಕೆ 18 ಕಂಪನಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೊಬೈಲ್ ಆ್ಯಪ್: ಜಿಎಸ್‌ಟಿ ಅಧಿಕಾರಿಗಳ ಬಳಕೆಗೆ ಇನ್ಫೊಸಿಸ್ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಿದೆ.
ಶೀಘ್ರದಲ್ಲಿಯೇ ಈ ಆ್ಯಪ್ ಬಳಕೆಗೆ ಬರಲಿದೆ.
ಜಿಎಸ್‌ಟಿ ವರಮಾನ ಸಂಗ್ರಹ ಹೆಚ್ಚಿಸಲು ಸರ್ಕಾರ ಮೂಲದಲ್ಲಿಯೇ ತೆರಿಗೆ ಕಡಿತ (ಟಿಡಿಎಸ್) ಮತ್ತು ಮೂಲದಲ್ಲಿಯೇ ತೆರಿಗೆ ಸಂಗ್ರಹಕ್ಕೆ (ಟಿಸಿಎಸ್) ಅಕ್ಟೋಬರ್ 1 ರಿಂದ ಚಾಲನೆ ನೀಡಲಿದೆ.
ತಾಂತ್ರಿಕ ತೊಡಕು ನಿವಾರಿಸಲು ಮನವಿ
ಸರಕು ಮತ್ತು ಸೇವಾ ತೆರಿಗೆ ಪಾವತಿಸುವ ಅಂತರ್ಜಾಲ ತಾಣದಲ್ಲಿ (ಜಿಎಸ್‌ಟಿಎನ್) ಇತ್ತೀಚಿಗೆ ಕಂಡುಬರುತ್ತಿರುವ ಕೆಲ ತಾಂತ್ರಿಕ ತೊಡಕುಗಳನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ಮನವಿ ಮಾಡಿಕೊಂಡಿದೆ.
‘ಜಿಎಸ್‌ಟಿಎನ್’ಗೆ ಸಂಬಂಧಿಸಿದಂತೆ ರಚಿಸಲಾಗಿರುವ ಸಚಿವರ ತಂಡದ ಮುಖ್ಯಸ್ಥ ಸುಶೀಲ್ ಕುಮಾರ್ ಮೋದಿ ಅವರಿಗೆ ‘ಎಫ್‌ಕೆಸಿಸಿಐ’ ಅಧ್ಯಕ್ಷ ಸುಧಾಕರ ಎಸ್. ಶೆಟ್ಟಿ ಅವರು ಶನಿವಾರ ಇಲ್ಲಿ ಈ ಸಂಬಂಧ ಮನವಿ ಪತ್ರ ಸಲ್ಲಿಸಿದರು. ಲೆಕ್ಕಪತ್ರ ಹೊಂದಾಣಿಕೆಯ ಅಂತಿಮ ವಿವರ ಸಲ್ಲಿಸಲು ಸೆಪ್ಟೆಂಬರ್‌ಗೆ ಕೊನೆಗೊಳ್ಳಲಿದ್ದ ಗಡುವನ್ನು ಡಿಸೆಂಬರ್ ಅಂತ್ಯದವರೆಗೆ ವಿಸ್ತರಿಸಬೇಕು ಎಂದೂ ಮನವಿ ಮಾಡಿಕೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.