ಬೆಂಗಳೂರು: ತೇಜಸ್ ಎಂಕೆ1ಎ ಸರಣಿಯ ಮೊದಲ ಲಘು ಯುದ್ಧ ವಿಮಾನವು (ಎಲ್‌ಎ5033) ಇಲ್ಲಿನ ಎಚ್‌ಎಎಲ್ ವಾಯುನೆಲೆಯಲ್ಲಿ ಗುರುವಾರ ತನ್ನ ಚೊಚ್ಚಿಲ ಹಾರಾಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು.
ಸರ್ಕಾರಿ ಸ್ವಾಮ್ಯದ ಹಿಂದುಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್‌ನಿಂದ ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಈ ವಿಮಾನವು, 18 ನಿಮಿಷಗಳ ಕಾಲ ಆಕಾಶದಲ್ಲಿ ಹಾರಾಟ ನಡೆಸಿತು. ಚೀಪ್ ಟೆಸ್ಟ್ ಪೈಲಟ್ ಗ್ರೂಪ್‌ನ ಕ್ಯಾಪ್ಟನ್ ಕೆ.ಕೆ. ವೇಣುಗೋಪಾಲ್ (ನಿವೃತ್ತ) ವಿಮಾನದ ನಿಯಂತ್ರಣ ಕಾರ್ಯಾಚರಣೆಯನ್ನು ನಡೆಸಿದರು.
‘2021ರ ಫೆಬ್ರುವರಿಯಲ್ಲಿ ಲಘು ಯುದ್ಧ ವಿಮಾನ ತಯಾರಿಕೆ ಸಂಬಂಧ ಎಚ್‌ಎಎಲ್ ಮತ್ತು ರಕ್ಷಣಾ ಸಚಿವಾಲಯದ ನಡುವೆ ಗುತ್ತಿಗೆ ಒಪ್ಪಂದಕ್ಕೆ ಅಂಕಿತ ಹಾಕಲಾಗಿದೆ. ಇದಕ್ಕೆ ಅನುಗುಣವಾಗಿಯೇ ಜಾಗತಿಕ ಸವಾಲುಗಳ ನಡುವೆ ವಿಮಾನಗಳ ತಯಾರಿಕಾ ವಿನ್ಯಾಸ ಮತ್ತು ಅಭಿವೃದ್ಧಿಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲಾಗಿದೆ’ ಎಂದು ಎಚ್‌ಎಎಲ್‌ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಸಿ.ಬಿ. ಅನಂತಕೃಷ್ಣನ್ ಹೇಳಿದ್ದಾರೆ.
‘ಭಾರತೀಯ ವಾಯುಪಡೆಗೆ ತೇಜಸ್ ಎಂಕೆ1ಎ ಸರಣಿಯ ವಿಮಾನಗಳು ಪ್ರವೇಶಿಸುವುದನ್ನು ಇಡೀ ರಾಷ್ಟ್ರವೇ ಎದುರು ನೋಡುತ್ತಿದೆ. ಶೀಘ್ರವೇ, ಮತ್ತಷ್ಟು ವಿಮಾನಗಳು ವಾಯುಪಡೆಗೆ ಸೇರ್ಪಡೆಗೊಳ್ಳಲಿವೆ. ಎಚ್‌ಎಎಲ್‌ನ ಈ ಸಾಧನೆಯ ಹಿಂದೆ ರಕ್ಷಣಾ ಸಚಿವಾಲಯ, ಐಎಎಫ್, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಹಾಗೂ ಖಾಸಗಿ ಸಂಸ್ಥೆಗಳ ಕೊಡುಗೆ ದೊಡ್ಡದಿದೆ. ಅವುಗಳ ಸೇವೆಗೆ ಆಭಾರಿಯಾಗಿದ್ದೇವೆ’ ಎಂದು ಹೇಳಿದ್ದಾರೆ.
ಈ ಲಘು ಯುದ್ಧ ವಿಮಾನವು ಸುಧಾರಿತ ಎಲೆಕ್ಟ್ರಾನಿಕ್ ರಾಡಾರ್, ಯುದ್ಧ ಸಂವಹನ ವ್ಯವಸ್ಥೆ ಹಾಗೂ ಸುಧಾರಿತ ನಿರ್ವಹಣಾ ವ್ಯವಸ್ಥೆಯನ್ನು ಹೊಂದಿದೆ. ಸರ್ವ ಋತುವಿನಲ್ಲೂ ಬಳಸಬಹುದಾದ ಹಾಗೂ ಬಹುವಿಧದ ಕಾರ್ಯಕ್ಷಮತೆ ಹೊಂದಿರುವ 4.5 ತಲೆಮಾರಿನ ವಿಮಾನ ಇದಾಗಿದೆ ಎಂದು ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.