ಬೆಂಗಳೂರು: ಕೋಲ್ಕತ್ತ ಮೂಲದ ಹಲ್ದಿರಾಮ್ ಭುಜಿಯಾವಾಲಾ ಲಿಮಿಟೆಡ್‌ನಲ್ಲಿ ಪಂಟೊಮಾಥ್ಸ್‌ನ ಭಾರತ್ ವ್ಯಾಲ್ಯು ಫಂಡ್ (ಬಿವಿಎಫ್) ₹235 ಕೋಟಿ ಹೂಡಿಕೆ ಮಾಡಿದೆ.
ಹಲ್ದಿರಾಮ್ ಭುಜಿಯಾವಾಲಾ ಕಂಪನಿಯು 6 ದಶಕದಿಂದ ಕುರುಕುಲು ತಿಂಡಿ ಮತ್ತು ಉಪ್ಪು ಖಾರದ ಉತ್ಪನ್ನಗಳ ಉದ್ಯಮದಲ್ಲಿ ‘ಪ್ರಭುಜಿ’ ಎಂಬ ಬ್ರ್ಯಾಂಡ್‌ನಡಿ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ.
ಭಾರತದಲ್ಲಿ ಕುರುಕುಲು ತಿಂಡಿಗಳ ಮಾರುಕಟ್ಟೆಯು ವೇಗವಾಗಿ ಬೆಳೆಯುತ್ತಿದೆ. 2023–24ನೇ ಆರ್ಥಿಕ ವರ್ಷದಲ್ಲಿ ಕುರುಕಲು ತಿಂಡಿಗಳ ಮಾರುಕಟ್ಟೆ ಮೌಲ್ಯವು ₹42,600 ಕೋಟಿ ಆಗಿದೆ ಎಂದು ಅಂದಾಜಿಸಲಾಗಿದೆ. ಇದು 2031–32ರ ವೇಳೆಗೆ ₹95,500 ಕೋಟಿ ತಲುಪುವ ನಿರೀಕ್ಷೆ ಇದೆ. ಮಾರುಕಟ್ಟೆಯ ಒಟ್ಟಾರೆ ವಾರ್ಷಿಕ ಬೆಳವಣಿಗೆ ದರವು (ಸಿಎಜಿಆರ್) ಶೇ 11ರಷ್ಟಿದೆ.
ಕಂಪನಿಯು ಪ್ರಸ್ತುತ ಅಂದಾಜು 2 ಸಾವಿರ ವಿತರಕರ ಜಾಲ ಹೊಂದಿದ್ದು, ದೇಶದಾದ್ಯಂತ 2 ಲಕ್ಷ ರಿಟೇಲ್ ವ್ಯಾಪಾರಿಗಳಿಗೆ ಉತ್ಪನ್ನಗಳನ್ನು ಪೂರೈಕೆ ಮಾಡುತ್ತಿದೆ. ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್ ಮತ್ತು ಈಶಾನ್ಯ ರಾಜ್ಯಗಳಲ್ಲಿ ಹೆಚ್ಚಿನ ವಹಿವಾಟು ಹೊಂದಿದೆ. ಈ ಹೂಡಿಕೆ ಹಣವನ್ನು ಉತ್ಪಾದನೆ ಮತ್ತು ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುವುದಕ್ಕೆ ಬಳಸಿಕೊಳ್ಳಲಾಗುವುದು ಎಂದು ಕಂಪನಿ ತಿಳಿಸಿದೆ.
‘ಕಂಪನಿಯು ಪ‍್ರತಿ ವರ್ಷ 6,035 ಟನ್‌ಗಳ ಸಾಮರ್ಥ್ಯದೊಂದಿಗೆ ಮೂರು ಉತ್ಪಾದನಾ ಘಟಕಗಳನ್ನು ನಿರ್ವಹಿಸುತ್ತಿದೆ. 60 ವರ್ಷದಿಂದ ಗ್ರಾಹಕರಿಗೆ ರುಚಿಕರವಾದ ತಿಂಡಿಗಳನ್ನು ನೀಡುತ್ತಿದ್ದೇವೆ’ ಎಂದು ಹಲ್ದಿರಾಮ್ ಭುಜಿಯಾವಾಲಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಅಗರ್ವಾಲ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.