ಮುಂಬೈ: ನಿರ್ವಹಣಾ ವೆಚ್ಚದ ಹೊರೆಯಿಂದಾಗಿ2019ರ ಮಾರ್ಚ್ ಒಳಗಾಗಿ ದೇಶದಲ್ಲಿರುವ ಅರ್ಧದಷ್ಟು ಎಟಿಎಂಗಳು ಮುಚ್ಚಲಿವೆ. ಇದರಿಂದ ಸಾವಿರಾರು ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆಎಂದು ಎಟಿಎಂ ಉದ್ಯಮದ ಒಕ್ಕೂಟ (ಸಿಎಟಿಎಂಐ) ಎಚ್ಚರಿಕೆ ನೀಡಿದೆ.
ನಿಯಂತ್ರಣ ವ್ಯವಸ್ಥೆಯಲ್ಲಿ ಆಗುತ್ತಿರುವ ಬದಲಾವಣೆ ಮತ್ತು ನಿರ್ವಹಣಾ ವೆಚ್ಚ ಹೆಚ್ಚಾಗುತ್ತಿರುವುದರಿಂದ ಎಟಿಎಂಗಳನ್ನು ನಡೆಸುವುದು ಕಷ್ಟವಾಗುತ್ತಿದೆ. ಹೀಗಾಗಿ ಅವುಗಳನ್ನು ಮುಚ್ಚುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದೆ.
ಗ್ರಾಮೀಣ ಪ್ರದೇಶದಲ್ಲಿಯೇ ಹೆಚ್ಚಿನ ಸಂಖ್ಯೆಯಎಟಿಎಂಗಳು ಮುಚ್ಚಲಿವೆ.ಇದರಿಂದ ಸರ್ಕಾರದ ಆರ್ಥಿಕ ಸೇರ್ಪಡೆ ಪ್ರಯತ್ನದ ಮೇಲೆಯೂ ನಕಾರಾತ್ಮಕ ಪರಿಣಾಮ ಬೀರಲಿದೆ. ಫಲಾನುಭವಿಗಳಿಗೆ ಸರ್ಕಾರದ ಸಬ್ಸಿಡಿ ಹಣ ಪಡೆಯುವುದು ಕಷ್ಟವಾಗಲಿದೆ ಎಂದೂ ಹೇಳಿದೆ.
ಎಟಿಎಂ ಉದ್ಯಮವು ಈಗಲೂ ನೋಟು ರದ್ದತಿಯ ಆಘಾತದಿಂದ ಹೊರಬಂದಿಲ್ಲ. ಇವುಗಳಿಂದ ಬ್ಯಾಂಕ್‌ಗಳಿಗೆ ವರಮಾನ ಬರುತ್ತಿಲ್ಲ. ಅವುಗಳ ನಿರ್ವಹಣಾ ವೆಚ್ಚ ಹೆಚ್ಚುತ್ತಲೇ ಇದೆ. ವಿನಿಮಯ ಶುಲ್ಕವೂ ಬಹಳಷ್ಟು ಕಡಿಮೆ ಇದೆ ಎಂದು ‘ಸಿಎಟಿಐ’ ತಿಳಿಸಿದೆ. ಸೇವೆ ಒದಗಿಸುತ್ತಿರುವವರ ಬಳಿ ವೆಚ್ಚ ನಿರ್ವಹಿಸುವ ಹಣ ಇಲ್ಲದಾಗಿದೆ. ಹೀಗಾಗಿ ಅನಿವಾರ್ಯವಾಗಿ ಮುಚ್ಚುವ ನಿರ್ಧಾರಕ್ಕೆ ಬರುತ್ತಿದ್ದಾರೆ.
ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ಮೇಲ್ದರ್ಜೆಗೆ ಏರಿಸಬೇಕಾಗಿರುವುದು ಹೆಚ್ಚುವರಿ ಹೊರೆಯಾಗಿದೆ.ಹೊಸ ನೋಟುಗಳನ್ನು ಇಡಲು ಆಗುವಂತೆ ಟ್ರೇಗಳನ್ನು ಮರುಹೊಂದಾಣಿಕೆ ಮಾಡಬೇಕಾಗಿದೆ. ಇದಕ್ಕೆ ₹ 3 ಸಾವಿರ ಕೋಟಿ ವೆಚ್ಚವಾಗುತ್ತಿದೆ.
ಬ್ಯಾಂಕ್ ಆವರಣದಲ್ಲಿ ಇರದ 1 ಲಕ್ಷ ಎಟಿಎಂಗಳು ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ನಿರ್ವಹಿಸುವ 13 ಸಾವಿರ ಎಟಿಎಂಗಳಿಗೆ ಬೀಗ ಬೀಳಲಿದೆ.
ನಿರ್ವಹಣೆ ದುಬಾರಿ
ಒಂದು ಎಟಿಎಂ ನಿರ್ವಹಣೆ ಮಾಡಲು ತಿಂಗಳಿಗೆ ಅಂದಾಜು ₹ 60 ಸಾವಿರ ವೆಚ್ಚವಾಗುತ್ತಿದೆ. ಇದನ್ನು ಸರಿದೂಗಿಸಲು ಆ ಎಟಿಎಂನಲ್ಲಿ ಗ್ರಾಹಕರು ಒಂದು ದಿನಕ್ಕೆ ಕನಿಷ್ಠ 100 ಬಾರಿ ಹಣ ಪಡೆಯಬೇಕು. ಆದರೆ ಹಾಗಾಗುತ್ತಿಲ್ಲ. ಕನಿಷ್ಠ 400 ರಿಂದ 500 ಎಟಿಎಂ ಮುಚ್ಚಿದರೆ ಅದರಿಂದ ಬ್ಯಾಂಕ್‌ಗೆ ಪ್ರತಿ ತಿಂಗಳು ಅಂದಾಜು ₹ 3 ಕೋಟಿ ಉಳಿತಾಯವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.