ಸಣ್ಣ ಹೂಡಿಕೆದಾರರ ವಲಯದಲ್ಲಿ ಸಾಮಾನ್ಯವಾಗಿ ಕೇಳಿಬರುವ ಪದ ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲ್ಯಾನ್ ಅರ್ಥಾತ್ ‘ಎಸ್ಐಪಿ’. ಕ್ರಮಬದ್ಧವಾಗಿ ಹೂಡಿಕೆ ಮಾಡಬೇಕು ಎನ್ನುವವರಿಗೆ ‘ಎಸ್ಐಪಿ’ ಒಳ್ಳೆಯ ಆಯ್ಕೆ. ಕನ್ನಡದಲ್ಲಿ ‘ಎಸ್ಐಪಿ’ಯನ್ನು ವ್ಯವಸ್ಥಿತ ಹೂಡಿಕೆ ಯೋಜನೆ ಎಂದು ಕರೆಯಬಹುದು. 1993ರಿಂದ 2021ರವರೆಗೆ ಸುಮಾರು 4.3 ಕೋಟಿ ‘ಎಸ್ಐಪಿ’ ಹೂಡಿಕೆ ಖಾತೆಗಳು ಆರಂಭಗೊಂಡಿವೆ.ಕಳೆದ ಎರಡು ವರ್ಷಗಳಲ್ಲಂತೂ ‘ಎಸ್ಐಪಿ’ ನಿರೀಕ್ಷೆಗೂ ಮೀರಿ ಬೆಳವಣಿಗೆ ಸಾಧಿಸುತ್ತಿದೆ.
ಏನಿದು ‘ಎಸ್ಐಪಿ’?: ‘ಎಸ್ಐಪಿ’ ಎನ್ನುವುದು ಹೂಡಿಕೆ ಉತ್ಪನ್ನವಲ್ಲ; ಇದು ಹೂಡಿಕೆಯ ವಿಧಾನ. ಷೇರುಗಳಲ್ಲಿ ಹೂಡಿಕೆ, ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ, ಚಿನ್ನ ಖರೀದಿ, ಪಿಪಿಎಫ್ ಹೂಡಿಕೆ, ಅಂಚೆ ಕಚೇರಿ ಹೂಡಿಕೆ, ನಿಶ್ಚಿತ ಠೇವಣಿ... ಹೀಗೆ ಬಹುತೇಕ ಎಲ್ಲ ರೀತಿಯ ಹೂಡಿಕೆಗಳಲ್ಲೂ ‘ಎಸ್ಐಪಿ’ ವಿಧಾನವನ್ನು ಅಳವಡಿಸಿಕೊಳ್ಳಬಹುದು. ಒಂದು ಪೂರ್ವನಿಗದಿತ ದಿನದಂದು, ಪೂರ್ವ ನಿಗದಿತ ಮೊತ್ತವನ್ನು ಹೂಡಿಕೆ ಉತ್ಪನ್ನವೊಂದಕ್ಕೆ ವ್ಯವಸ್ಥಿತವಾಗಿಸ್ವಯಂಚಾಲಿತವಾಗಿ ವರ್ಗಾಯಿಸುವ ವಿಧಾನವೇ ‘ಎಸ್ಐಪಿ’.
ಎಸ್ಐಪಿ ಹೇಗೆ ಕೆಲಸ ಮಾಡುತ್ತದೆ?: ಮ್ಯೂಚುವಲ್ ಫಂಡ್‌ಗಳನ್ನು ಉದಾಹರಣೆಯಾಗಿ ತೆಗೆದುಕೊಂಡು ‘ಎಸ್ಐಪಿ’ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳೋಣ. ಯಾವುದೇ ‘ಎಸ್ಐಪಿ’ ಆರಂಭಿಸಬೇಕಾದರೆ ಮೊದಲಿಗೆ ಈ ನಾಲ್ಕು ಪ್ರಮುಖ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕು. ಯಾವ ಮ್ಯೂಚುವಲ್ ಫಂಡ್ ಅಥವಾ ಯೋಜನೆಯಲ್ಲಿ ಹೂಡಿಕೆ ಮಾಡುತ್ತೀರಿ; ಮ್ಯೂಚುವಲ್ ಫಂಡ್‌ಗೆ ಪ್ರತಿ ಬಾರಿ ಹೂಡಿಕೆ ಮಾಡಬೇಕಿರುವ ಮೊತ್ತ ಎಷ್ಟು; ಹೂಡಿಕೆಯನ್ನು ಪ್ರತಿ ವಾರ, ಪ್ರತಿ ತಿಂಗಳು ಅಥವಾ ಮೂರು ತಿಂಗಳಿಗೆ ಒಮ್ಮೆ ಮಾಡುವಿರೋ; ನಿಮ್ಮ ಖಾತೆಯಿಂದಹೂಡಿಕೆ ಫಂಡ್‌ಗೆ ಹಣ ವರ್ಗಾವಣೆಯಾಗಬೇಕಿರುವ ದಿನಾಂಕ ಯಾವುದು.
ಈ ನಾಲ್ಕು ವಿಚಾರಗಳನ್ನು ತೀರ್ಮಾನಿಸಿದ ಮೇಲೆ ನೀವು ಮುಂದುವರಿಯಬಹುದು. ಉದಾಹರಣೆ; ನಾನು ಮ್ಯೂಚುವಲ್ ಫಂಡ್ ಕಂಪನಿಯೊಂದು ನಿರ್ವಹಿಸುತ್ತಿರುವಒಂದು ಗ್ರೋತ್ ಫಂಡ್‌ನಲ್ಲಿ ಪ್ರತಿ ತಿಂಗಳು ₹ 10 ಸಾವಿರ ಹೂಡಿಕೆಗೆ ನಿರ್ಧರಿಸಿದ್ದೇನೆ. ಪ್ರತಿ ತಿಂಗಳ ಐದನೇ ದಿನದಂದು ನಾನು ಮ್ಯೂಚುವಲ್ ಫಂಡ್ ‘ಎಸ್ಐಪಿ’ಗೆ ಹಣ ಪಾವತಿಸಲು ತೀರ್ಮಾನಿಸಿದ್ದೇನೆ ಮತ್ತು 2021ರ ಏಪ್ರಿಲ್‌ನಿಂದಲೇ ಈ ಹೂಡಿಕೆ ಪ್ರಕ್ರಿಯೆ ಆರಂಭಿಸಿದ್ದೇನೆ ಎಂದಿಟ್ಟುಕೊಳ್ಳಿ. ಇದರಂತೆ ಹೋದರೆ 2021ರಏಪ್ರಿಲ್‌ನಿಂದ ನವೆಂಬರ್‌ವರೆಗೆ ತಿಂಗಳಿಗೆ ₹ 10 ಸಾವಿರದಂತೆ ₹ 80 ಸಾವಿರ ಹೂಡಿಕೆ ಮ್ಯೂಚುವಲ್ ಫಂಡ್‌ಗೆ ವರ್ಗಾವಣೆ ಆಗಿರುತ್ತದೆ.
ಮಾರುಕಟ್ಟೆ ಏರುಗತಿಯಲ್ಲಿ ಇದ್ದಾಗ ನಿಮ್ಮ ಹೂಡಿಕೆ ಮೊತ್ತಕ್ಕೆ ಕಡಿಮೆ ಮ್ಯೂಚುವಲ್ ಫಂಡ್ ಯೂನಿಟ್‌ಗಳು ಲಭಿಸುತ್ತವೆ. ಆದರೆ, ಮಾರುಕಟ್ಟೆ ಹೆಚ್ಚು ಇಳಿಕೆ ಕಂಡಾಗ ನಿಮಗೆ ಹೆಚ್ಚು ಮ್ಯೂಚುವಲ್ ಫಂಡ್ ಯೂನಿಟ್‌ಗಳು ಹಂಚಿಕೆಯಾಗುತ್ತವೆ. ‘ಎಸ್ಐಪಿ’ಯನ್ನು ದೀರ್ಘಾವಧಿಗೆ ಮಾಡುವುದರಿಂದ ಮಾರುಕಟ್ಟೆಯ ಏರಿಳಿತದ ಲಾಭ ನಿಮಗೆ ಲಭಿಸಿ ಮ್ಯೂಚುವಲ್ ಫಂಡ್ ಹೂಡಿಕೆಯಲ್ಲಿವೆಚ್ಚದ ಸರಾಸರಿ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ಹಾಗಾಗಿಯೇ ಎಸ್ಐಪಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಚಲಿತವಾಗುತ್ತಿದೆ.
ಎಸ್ಐಪಿ ಅನುಕೂಲಗಳು:
1. ತಿಂಗಳ ಸಂಬಳ ಪಡೆಯುವವರಿಗೆ, ನಿರ್ದಿಷ್ಟ ಆದಾಯ ಪಡೆಯುವವರಿಗೆ ಈ ಹೂಡಿಕೆ ಸರಾಗವಾಗುತ್ತದೆ.
2. ಎಸ್ಐಪಿಗಳು ಸ್ವಯಂಚಾಲಿತ ಆಗಿರುವುದರಿಂದ ಮಾರುಕಟ್ಟೆ ಎದ್ದಾಗ ಹೆಚ್ಚಿಗೆ ಹಣ ಹಾಕುವುದು ಮತ್ತು ಮಾರುಕಟ್ಟೆ ಬಿದ್ದಾಗ ಹಣ ಹಿಂಪಡೆದುಕೊಳ್ಳುವ ಧೋರಣೆಯಿಂದ ಹೂಡಿಕೆದಾರರು ದೂರವಿರಬಹುದು. ಹೀಗಾದಾಗ ದೀರ್ಘಾವಧಿ
ಯಲ್ಲಿ ಸಂಪತ್ತು ಸೃಷ್ಟಿಸಲು ಸಾಧ್ಯವಾಗುತ್ತದೆ.
3. ಎಸ್ಐಪಿಗಳನ್ನು ನಿಮ್ಮ ಅನುಕೂಲಕ್ಕೆ ಮತ್ತು ಆದಾಯದ ಮಟ್ಟಕ್ಕೆ ತಕ್ಕಂತೆ ರೂಪಿಸಿಕೊಳ್ಳ
ಬಹುದು.
4. ಮಾರುಕಟ್ಟೆ ಏರುಗತಿಯಲ್ಲಿದ್ದಾಗಲೂ ಮಾರುಕಟ್ಟೆ ಇಳಿಕೆ ಹಾದಿಯಲ್ಲಿದ್ದಾಗಲೂ ಎಸ್ಐಪಿ ಮುಂದುವರಿಸುವುದರಿಂದ, ಮಾರುಕಟ್ಟೆಯ ಏರಿಳಿತಗಳ ಲಾಭ ನಿಮಗೆ ಸಿಗುತ್ತದೆ.
ಅನಿಶ್ಚಿತತೆಯ ನಡುವೆಯೂ ವಾರದ ಅವಧಿಯಲ್ಲಿ ಏರಿಕೆ ಕಂಡ ಷೇರುಪೇಟೆ
ಷೇರುಪೇಟೆ ಸೂಚ್ಯಂಕಗಳು ಸತತ ಎರಡನೆಯ ವಾರ ಗಳಿಕೆ ದಾಖಲಿಸಿವೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಷೇರುಗಳನ್ನು ಮಾರಾಟ ಮಾಡುತ್ತಿರುವ ಜೊತೆಗೆ ಜಾಗತಿಕ ವಿದ್ಯಮಾನಗಳು ಆಶಾದಾಯಕವಾಗಿರದಿದ್ದರೂ ಸೂಚ್ಯಂಕಗಳು ಸುಧಾರಣೆ ಕಂಡಿವೆ. ನವೆಂಬರ್ 12ಕ್ಕೆ ಕೊನೆಗೊಂಡ ವಾರದಲ್ಲಿ ಸೆನ್ಸೆಕ್ಸ್ 60,686 ಅಂಶಗಳಲ್ಲಿ ವಹಿವಾಟು ಮುಗಿಸಿ ಶೇ 1.03ರಷ್ಟು ಜಿಗಿದಿದೆ. 18,102 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ ಶೇ 1.03ರಷ್ಟು ಹೆಚ್ಚಳವಾಗಿದೆ. ನಿಫ್ಟಿ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕಗಳು ಕ್ರಮವಾಗಿ ಶೇ 1.5ರಷ್ಟುಮತ್ತು ಶೇ 1ರಷ್ಟು ಏರಿಕೆಯಾಗಿವೆ.
ನಿಫ್ಟಿ ಮಾಹಿತಿ ತಂತ್ರಜ್ಞಾನ ವಲಯ ಶೇ 3ರಷ್ಟು, ಎನರ್ಜಿ ವಲಯ ಶೇ 2ರಷ್ಟು ಗಳಿಕೆ ಕಂಡಿವೆ. ನಿಫ್ಟಿ ಬ್ಯಾಂಕ್ ಮತ್ತು ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸೂಚ್ಯಂಕಗಳು ಇಳಿಕೆಯಾಗಿವೆ. ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 3,317.16 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ದೇಶಿ ಸಾಂಸ್ಥಿಕ ಹೂಡಿಕೆದಾರರು ₹ 5,887.66 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.
ಏರಿಕೆ–ಇಳಿಕೆ: ಮಹೀಂದ್ರ ಆ್ಯಂಡ್ ಮಹೀಂದ್ರ ಶೇ 7.5ರಷ್ಟು, ಏರ್‌ಟೆಲ್ ಶೇ 6ರಷ್ಟು, ಟೆಕ್ ಮಹೀಂದ್ರ ಶೇ 5ರಷ್ಟು, ಅದಾನಿ ಪೋರ್ಟ್ಸ್ ಶೇ 5ರಷ್ಟು ಮತ್ತು ಟೈಟನ್ ಶೇ 4.5ರಷ್ಟು ಗಳಿಕೆ ಕಂಡಿವೆ. ಇಂಡಸ್ ಇಂಡ್ ಬ್ಯಾಂಕ್ ಶೇ 12ರಷ್ಟು, ಡಿವೀಸ್ ಲ್ಯಾಬ್ಸ್ ಶೇ 7ರಷ್ಟು, ಎಸ್‌ಬಿಐ ಶೇ 3.5ರಷ್ಟು ಮತ್ತು ಟಾಟಾ ಸ್ಟೀಲ್ ಶೇ 2.6ರಷ್ಟು ಇಳಿಕೆಯಾಗಿವೆ.
ಮುನ್ನೋಟ: ಹಣದುಬ್ಬರದ ಆತಂಕ ಹೆಚ್ಚಾಗಿರುವ ಕಾರಣ ಈ ವಾರ ಷೇರುಪೇಟೆಯಲ್ಲಿ ಅನಿಶ್ಚಿತತೆ ಹೆಚ್ಚುವ ಸಾಧ್ಯತೆಯಿದೆ. ತ್ರೈಮಾಸಿಕ ಫಲಿತಾಂಶಗಳು ಕೂಡ ನಿರೀಕ್ಷಿತ ಮಟ್ಟದಲ್ಲಿ ಇರದ ಕಾರಣ ಹೂಡಿಕೆದಾರರು ಷೇರುಗಳ ಆಯ್ಕೆಯಲ್ಲಿ ಎಚ್ಚರಿಕೆ ವಹಿಸಬೇಕಿದೆ. ಹೂಸದಾಗಿ ಡಿ-ಮ್ಯಾಟ್ ಖಾತೆ ತೆರೆದು ಹೂಡಿಕೆ ಆರಂಭಿಸುವವರು ಒಂದೇ ಬಾರಿಗೆ ದೊಡ್ಡ ಮೊತ್ತದ ಹೂಡಿಕೆ ಮಾಡಲು ಹೋಗಬಾರದು. ಹಂತ ಹಂತವಾಗಿ ಉತ್ತಮ ಷೇರುಗಳನ್ನು ಆಯ್ಕೆ ಮಾಡಿ ಹೂಡಿಕೆ ಮಾಡುವ ಬಗ್ಗೆ ಆಲೋಚಿಸಬೇಕು.
ಜಾಗತಿಕ ವಿದ್ಯಮಾನಗಳು ಮತ್ತು ದೇಶಿಯ ಬೆಳವಣಿಗೆಗಳು ಷೇರುಪೇಟೆಯ ಮೇಲೆ ಪರಿಣಾಮ ಬೀರಲಿವೆ. ಈ ವಾರ ರಾಜೇಶ್ ಎಕ್ಸ್‌ಪೋರ್ಟ್ಸ್, ಸಹರಾ ಒನ್ ಮೀಡಿಯಾ ಆ್ಯಂಡ್ ಎಂಟರ್‌ಟೇನ್ಮೆಂಟ್, ಪಾರ್ಲೆ ಇಂಡಸ್ಟ್ರೀಸ್, ಆರ್‌ಜೆ ಬಯೋಟೆಕ್, ಎಸ್‌ಕೆಸಿ, ಪಿಎಫ್‌ಬಿಎಲ್, ಎಸ್‌ಎಸ್‌ಎಲ್ಫೈನಾನ್ಸ್, ಕೆಇಎಲ್ ಸೇರಿ ಕೆಲವು ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ.
(ಲೇಖಕ: ಸುವಿಷನ್ ಹೋಲ್ಡಿಂಗ್ಸ್ ಪ್ರೈ.ಲಿ.,ನ ಸಂಶೋಧನಾ ವಿಭಾಗದ ಮುಖ್ಯಸ್ಥ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.