ADVERTISEMENT

ಎಚ್‌ಸಿಎಲ್‌ ಟೆಕ್‌ಗೆ ₹4,257 ಕೋಟಿ ಲಾಭ

​ಪ್ರಜಾವಾಣಿ ವಾರ್ತೆ
Published 13 ಜುಲೈ 2024, 15:44 IST
Last Updated 13 ಜುಲೈ 2024, 15:44 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ದೇಶದ ಪ್ರಮುಖ ಐ.ಟಿ ಕಂಪನಿ ಎಚ್‌ಸಿಎಲ್‌ ಟೆಕ್‌, 2024–25ನೇ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ₹4,257 ಕೋಟಿ ನಿವ್ವಳ ಲಾಭ ಗಳಿಸಿದೆ.

ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ನಿವ್ವಳ ಲಾಭದಲ್ಲಿ ಶೇ 20.4ರಷ್ಟು ಏರಿಕೆಯಾಗಿದೆ. ಜನರೇಟಿವ್‌ ಎ.ಐ ತಂತ್ರಜ್ಞಾನ ಅಳವಡಿಕೆಯ ಜೊತೆಗೆ ಸದೃಢ ಕಾರ್ಯಾಚರಣೆಯಿಂದಾಗಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ವರಮಾನವು ಶೇ 3ರಿಂದ 5ರಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ ಎಂದು ಕಂಪನಿ ತಿಳಿಸಿದೆ.

ಮೊದಲ ತ್ರೈಮಾಸಿಕದಲ್ಲಿ ಕಂಪನಿಯ ಕಾರ್ಯಾಚರಣೆ ವರಮಾನ ₹28,057 ಕೋಟಿ ಆಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 6.6ರಷ್ಟು ಏರಿಕೆಯಾಗಿದೆ. ಆದರೆ, ನಾಲ್ಕನೇ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ 1.6ರಷ್ಟು ಇಳಿಕೆಯಾಗಿದೆ ಎಂದು ವಿವರಿಸಿದೆ. 

ADVERTISEMENT

‘ಮೊದಲ ತ್ರೈಮಾಸಿಕದಲ್ಲಿ ವರಮಾನ, ಬಡ್ಡಿ ಮತ್ತು ತೆರಿಗೆ ಕಡಿತಕ್ಕಿಂತ ಮೊದಲಿನ ಗಳಿಕೆಯು (ಇಬಿಐಟಿ) ನಮ್ಮ ನಿರೀಕ್ಷೆಗಿಂತಲೂ ಉತ್ತಮವಾಗಿದೆ’ ಎಂದು ಎಚ್‌ಸಿಎಲ್‌ ಟೆಕ್‌ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಿ. ವಿಜಯಕುಮಾರ್‌ ತಿಳಿಸಿದ್ದಾರೆ.

ಜೂನ್‌ ತ್ರೈಮಾಸಿಕದ ಅಂತ್ಯಕ್ಕೆ ಶೇ 3.6ರಷ್ಟು ನೌಕರರು ವಿವಿಧ ಕಾರಣಗಳಿಂದ ಕಂಪನಿ ತೊರೆದಿದ್ದಾರೆ. ಸದ್ಯ 2.19 ಲಕ್ಷ ನೌಕರರು ಇದ್ದಾರೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಹೊಸದಾಗಿ 10 ಸಾವಿರ ವೃತ್ತಿಪರರ ನೇಮಕಕ್ಕೆ ಕಂಪನಿಯು ನಿರ್ಧರಿಸಿದೆ. ಪ್ರತಿ ಷೇರಿಗೆ ₹12 ಮಧ್ಯಂತರ ಲಾಭಾಂಶ ನೀಡುವುದಾಗಿ ಘೋಷಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.