ಮುಂಬೈ: ಹುರುನ್ ಇಂಡಿಯಾ ಸಂಸ್ಥೆಯು ಗುರುವಾರ ದೇಶದ ಮಹಾದಾನಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಎಚ್‌ಸಿಎಲ್ ಟೆಕ್ನಾಲಜೀಸ್ ಕಂಪನಿಯ ಸಂಸ್ಥಾಪಕ ಶಿವ ನಾಡಾರ್, ಈ ಬಾರಿಯೂ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.
2023–24ನೇ ಆರ್ಥಿಕ ವರ್ಷದಲ್ಲಿ ನಾಡಾರ್ ಅವರು, ಒಟ್ಟು ₹2,153 ಕೋಟಿ ದಾನ ಮಾಡಿದ್ದಾರೆ. ಇದರ ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಅವರ ದಾನದ ಮೊತ್ತದಲ್ಲಿ ಶೇ 5ರಷ್ಟು ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.
ದೇಶದ ಶ್ರೀಮಂತರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಉದ್ಯಮಿ ಗೌತಮ್ ಅದಾನಿ ಅವರು, ₹330 ಕೋಟಿ ದಾನ ಮಾಡಿದ್ದಾರೆ. ಎರಡನೇ ಅತಿದೊಡ್ಡ ಶ್ರೀಮಂತರಾಗಿರುವ ಉದ್ಯಮಿ ಮುಕೇಶ್ ಅಂಬಾನಿ ಅವರು, ₹407 ಕೋಟಿ ದಾನ ಮಾಡಿದ್ದಾರೆ ಎಂದು ವಿವರಿಸಿದೆ.
ಮುಕೇಶ್ ಅವರು ದಾನಿಗಳ ಪಟ್ಟಿಯಲ್ಲಿ ಒಂದು ಸ್ಥಾನ ಮೇಲಕ್ಕೇರಿದ್ದರೆ, ಅದಾನಿ ಅವರು ಐದನೇ ಸ್ಥಾನದಲ್ಲಿಯೇ ಮುಂದುವರಿದಿದ್ದಾರೆ.
203 ಮಂದಿ ₹5 ಕೋಟಿಗೂ ಹೆಚ್ಚು ದಾನ ಮಾಡಿದ್ದಾರೆ. ಹುರುನ್ ಸಿದ್ಧಪಡಿಸಿರುವ ದೇಶದ ಸಿರಿವಂತರ ಪಟ್ಟಿಯಲ್ಲಿರುವ 1,539 ಮಂದಿಯ ಒಟ್ಟು ಸಂಪತ್ತು ತಲಾ ₹1 ಸಾವಿರ ಕೋಟಿ ಇದೆ. ಈ ವರ್ಷದಲ್ಲಿ ಇವರ ಒಟ್ಟು ಸಂಪತ್ತಿನ ಮೌಲ್ಯದಲ್ಲಿ ಶೇ 46ರಷ್ಟು ಏರಿಕೆಯಾಗಿದೆ.
ನಾಡಾರ್ ಅವರ ಒಟ್ಟು ಸಂಪತ್ತು ₹3.14 ಲಕ್ಷ ಕೋಟಿ ಇದ್ದರೆ, ಅದಾನಿ ₹11.6 ಲಕ್ಷ ಕೋಟಿ ಹಾಗೂ ಮುಕೇಶ್ ಅಂಬಾನಿ ಅವರು ₹10.14 ಲಕ್ಷ ಕೋಟಿ ಸಂಪತ್ತು ಹೊಂದಿದ್ದಾರೆ.
‘ದಾನಿಗಳ ಪಟ್ಟಿಯಲ್ಲಿರುವ ಒಂಬತ್ತು ಕಂಪನಿಗಳ ಪ್ರವರ್ತಕರು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯಡಿ (ಸಿಎಸ್‌ಆರ್) ನೀಡುವ ಶೇ 2ರಷ್ಟು ಮೊತ್ತಕ್ಕಿಂತಲೂ ಹೆಚ್ಚು ದಾನ ಮಾಡಿದ್ದಾರೆ’ ಎಂದು ಹುರುನ್ ಇಂಡಿಯಾದ ಸಂಸ್ಥಾಪಕ ಮತ್ತು ಮುಖ್ಯ ಸಂಶೋಧಕ ಅನಸ್ ರೆಹಮಾನ್ ಜುನೈದ್ ತಿಳಿಸಿದ್ದಾರೆ.
ಮಹಿಳಾ ವಿಭಾಗದ ದಾನಿಗಳ ಪಟ್ಟಿಯಲ್ಲಿ ರೋಹಿಣಿ ನಿಲೇಕಣಿ ಅವರು ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಮೈಂಡ್‌ಟ್ರೀಯ ಸುಸ್ಮಿತಾ ಬಾಗ್ಚಿ ಆ ನಂತರದ ಸ್ಥಾನದಲ್ಲಿದ್ದಾರೆ.
2022–23ನೇ ಸಾಲಿನಡಿ ₹1,774 ಕೋಟಿ ದಾನ ಮಾಡಿ ದಾನಿಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದ ವಿಪ್ರೊ ಕಂಪನಿಯ ಅಜೀಂ ಪ್ರೇಮ್‌ಜೀ ಅವರು, ಈ ಬಾರಿ ₹152 ಕೋಟಿ ದಾನ ಮಾಡಿದ್ದಾರೆ.
ಶೈಕ್ಷಣಿಕ ಉದ್ದೇಶಕ್ಕಾಗಿ ₹3,680 ಕೋಟಿ, ಹೆಲ್ತ್‌ಕೇರ್‌ಗೆ ₹626 ಕೋಟಿ ಹಾಗೂ ಗ್ರಾಮೀಣ ಪರಿವರ್ತನೆಯ ಉದ್ದೇಶಕ್ಕೆ ₹331 ಕೋಟಿ ದಾನ ನೀಡಲಾಗಿದೆ.
ಪ್ರಮುಖ ದಾನಿಗಳು (ಕೋಟಿಗಳಲ್ಲಿ)
ಶಿವ ನಾಡಾರ್;₹2,153
ಮುಕೇಶ್ ಅಂಬಾನಿ;₹407
ಬಜಾಜ್ ಕುಟುಂಬ;₹352
ಕುಮಾರಮಂಗಲಂ ಬಿರ್ಲಾ ಮತ್ತು ಕುಟುಂಬ;₹334
ಗೌತಮ್ ಅದಾನಿ;₹330
ನಂದನ್ ನಿಲೇಕಣಿ;₹307 ಕೋಟಿ
ರೋಹಿಣಿ ನಿಲೇಕಣಿ;₹154
ಅಜೀಂ ಪ್ರೇಮ್‌ಜೀ;₹152
ಸುಸ್ಮಿತಾ ಬಾಗ್ಚಿ;₹90
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.