ADVERTISEMENT

ಎಚ್‌ಡಿಎಫ್‌ಸಿ ಬ್ಯಾಂಕ್ ಲಾಭ ₹16,811 ಕೋಟಿ

ಪಿಟಿಐ
Published 16 ಅಕ್ಟೋಬರ್ 2023, 15:49 IST
Last Updated 16 ಅಕ್ಟೋಬರ್ 2023, 15:49 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ: ಎಚ್‌ಡಿಎಫ್‌ಸಿ ಬ್ಯಾಂಕ್‌ನ ನಿವ್ವಳ ಲಾಭವು ಪ್ರಸಕ್ತ ಹಣಕಾಸು ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹16,811 ಕೋಟಿ ಆಗಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಎಚ್‌ಡಿಎಫ್‌ಸಿ ಲಿಮಿಟೆಡ್‌ ವಿಲೀನಗೊಂಡ ಬಳಿಕ ಪ್ರಕಟ ಆಗುತ್ತಿರುವ ಮೊದಲ ತ್ರೈಮಾಸಿಕ ಫಲಿತಾಂಶ ಇದಾಗಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಬ್ಯಾಂಕ್‌ನ ನಿವ್ವಳ ಲಾಭವು ₹11,162 ಕೋಟಿ ಇತ್ತು.

ಬ್ಯಾಂಕ್‌ನ ನಿವ್ವಳ ಬಡ್ಡಿ ಲಾಭವು (ಎನ್‌ಐಎಂ) ಶೇ 4 ರಿಂದ ಶೇ 3.4ಕ್ಕೆ ಇಳಿಕೆ ಕಂಡಿದೆ. ಬ್ಯಾಂಕ್‌ನ ಒಟ್ಟು ವರಮಾನವು ₹46,181 ಕೋಟಿಯಿಂದ ₹78,406 ಕೋಟಿಗೆ ಏರಿಕೆ ಕಂಡಿದೆ. ವಸೂಲಾಗದ ಸಾಲದ ಸರಾಸರಿ ಪ್ರಮಾಣವು (ಎನ್‌ಪಿಎ) ಶೇ 1.23 ರಿಂದ ಶೇ 1.34ಕ್ಕೆ ಏರಿಕೆ ಕಂಡಿದೆ. 

ADVERTISEMENT

ಹೆಚ್ಚುವರಿ ನಗದಿನ ಅಗತ್ಯಕ್ಕಾಗಿ ಸಾಲದ ಮೇಲಿನ ವೆಚ್ಚ ಹೆಚ್ಚಾಗಿರುವುದು ಹಾಗೂ ವಿಲೀನ ಪ್ರಕ್ರಿಯೆ ಕಾರಣಗಳಿಂದಾಗಿ ನಿವ್ವಳ ಬಡ್ಡಿ ಗಳಿಕೆಯು ಇಳಿಕೆ ಕಾಣುವಂತಾಗಿದೆ ಎಂದು ಬ್ಯಾಂಕ್‌ನ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) ಶ್ರೀನಿವಾಸನ್ ವೈದ್ಯನಾಥನ್‌ ತಿಳಿಸಿದ್ದಾರೆ.

ಬ್ಯಾಂಕ್‌ನ ನಿವ್ವಳ ಬಡ್ಡಿ ಆದಾಯವು ಶೇ 30ರಷ್ಟು ಹೆಚ್ಚಾಗಿ ₹27,385 ಕೋಟಿಗೆ ಏರಿಕೆ ಕಂಡಿದೆ. ಠೇವಣಿ ಪ್ರಮಾಣವು ಶೇ 5.3ರಷ್ಟು ಮತ್ತು ಮುಂಗಡ ಶೇ 4.9ರಷ್ಟು ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ.

ಭವಿಷ್ಯದಲ್ಲಿ ಎದುರಾಗಬಹುದಾದ ಆರ್ಥಿಕ ನಷ್ಟ ಭರಿಸಲು ತೆಗೆದಿರಿಸುವ ಮೊತ್ತವು ₹ 3,240 ಕೋಟಿಯಿಂದ ₹2,903 ಕೋಟಿಗೆ ಇಳಿಕೆ ಕಂಡಿದೆ. ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ 16 ಸಾವಿರ ಜನರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಒಟ್ಟು ಸಿಬ್ಬಂದಿ ಸಂಖ್ಯೆಯು 1.98 ಲಕ್ಷಕ್ಕೆ ಏರಿಕೆ ಕಂಡಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.