ನವದೆಹಲಿ: ಎಚ್‌ಡಿಎಫ್‌ಸಿ ಬ್ಯಾಂಕ್ 2024–25ರ ಹಣಕಾಸು ವರ್ಷದ ಸೆಪ್ಟೆಂಬರ್ ತ್ರೈಮಾಸಿಕದ ನಿವ್ವಳ ಲಾಭದಲ್ಲಿ ಏರಿಕೆ ಕಂಡಿದ್ದರಿಂದ ಸೋಮವಾರದ ವಹಿವಾಟಿನಲ್ಲಿ ಬ್ಯಾಂಕ್‌ನ ಷೇರಿನ ಮೌಲ್ಯ ಶೇ 3ರಷ್ಟು ಏರಿಕೆ ಕಂಡಿವೆ.
ಷೇರಿನ ಮೌಲ್ಯ ಏರಿಕೆಯಿಂದ ಕಂಪನಿಯ ಮಾರುಕಟ್ಟೆ ಮೌಲ್ಯಕ್ಕೆ (ಎಂ–ಕ್ಯಾಪ್) ಒಂದೇ ದಿನ ₹36,360 ಕೋಟಿ ಸೇರ್ಪಡೆಯಾಗಿದೆ. ಕಂಪನಿಯ ಒಟ್ಟು ಮಾರುಕಟ್ಟೆ ಮೌಲ್ಯ ₹13.19 ಲಕ್ಷ ಕೋಟಿಗೆ ಮುಟ್ಟಿದೆ.
ಖಾಸಗಿ ವಲಯದ ಎಚ್‌ಡಿಎಫ್‌ಸಿ ಬ್ಯಾಂಕ್ 2024–25ನೇ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹16,821 ಕೋಟಿ ಲಾಭ ಗಳಿಸಿದೆ.
ಸೆನ್ಸೆಕ್ಸ್, ನಿಫ್ಟಿ ಇಳಿಕೆ: ದಿನದ ವಹಿವಾಟಿನ ಆರಂಭದಲ್ಲಿ ಏರಿಕೆ ದಾಖಲಿಸಿದ್ದ ಷೇರು ಸೂಚ್ಯಂಕಗಳು ನಂತರ ಇಳಿಕೆ ದಾಖಲಿಸಿದವು.
ಕೋಟಕ್ ಮಹೀಂದ್ರ ಬ್ಯಾಂಕ್‌ನ ಷೇರಿನ ಮೌಲ್ಯ ಇಳಿಕೆ, ವಿದೇಶಿ ಬಂಡವಾಳದ ಹೊರಹರಿವಿನಿಂದ ಸೂಚ್ಯಂಕಗಳು ಇಳಿಕೆ ಕಂಡಿವೆ. ಕೋಟಕ್ ಮಹೀಂದ್ರ ಬ್ಯಾಂಕ್‌ನ ಷೇರಿನ ಮೌಲ್ಯ ಶೇ 5ರಷ್ಟು ಕುಸಿದಿದೆ. ಇದರಿಂದ ಬ್ಯಾಂಕ್‌ನ ಮಾರುಕಟ್ಟೆ ಮೌಲ್ಯ ₹15,954 ಕೋಟಿ ಕರಗಿದೆ.
ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 73 ಅಂಶ ಕಡಿಮೆಯಾಗಿ, 81,151ಕ್ಕೆ ವಹಿವಾಟು ಅಂತ್ಯಗೊಂಡಿತು. ವಹಿವಾಟಿನ ವೇಳೆ 545 ಅಂಶ ಏರಿಕೆ ದಾಖಲಿಸಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 73 ಅಂಶ ಇಳಿಕೆಯಾಗಿ, 24,781ಕ್ಕೆ ಸ್ಥಿರಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.