ADVERTISEMENT

ಹರಡುತ್ತಿದೆ ಕೊರೊನಾ: ದುರಿತ ಕಾಲಕ್ಕೆ ಬೇಕು ಆರೋಗ್ಯ ವಿಮೆಯ ಆಸರೆ

ಎಚ್ಚೆತ್ತುಕೊಳ್ಳಿ

ಹೇಮಂತ್ ಕುಮಾರ್ ಎಸ್.
Published 2 ಜುಲೈ 2020, 5:46 IST
Last Updated 2 ಜುಲೈ 2020, 5:46 IST
ಆರೋಗ್ಯ ವಿಮೆ– ಸಾಂದರ್ಭಿಕ ಚಿತ್ರ
ಆರೋಗ್ಯ ವಿಮೆ– ಸಾಂದರ್ಭಿಕ ಚಿತ್ರ   
""

ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ವೈರಸ್‌ ಸಾಂಕ್ರಾಮಿಕ ಜಾಗತಿಕ ಪಿಡುಗು ಎಂದು ಘೋಷಿಸಿದೆ. ಭಾರತದಲ್ಲಿ ಕೋವಿಡ್‌–19 ದೃಢಪಟ್ಟವರು ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ದಿನೇ ದಿನೇ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಖಾಸಗಿ ಆರೋಗ್ಯ ಸೇವೆಗಳ ಅವಶ್ಯಕತೆ ಎದುರಾಗಿದೆ. ಈ ನಡುವೆ ಚಿಕಿತ್ಸೆಗಾಗಿ ಭರಿಸಬೇಕಾದ ವೆಚ್ಚ ಹಾಗೂ ಆರೋಗ್ಯ ವಿಮೆಗಳ ಕುರಿತು ಚರ್ಚೆ ಜೋರಾಗಿದೆ. ಬ್ಯಾಂಕ್‌ಗಳು ಗ್ರಾಹಕರಿಗೆ ಕಡಿಮೆ ದರದಲ್ಲಿ ಕೋವಿಡ್‌–19 ಚಿಕಿತ್ಸೆ ಒಳಗೊಂಡ ವಿಶೇಷ ಆರೋಗ್ಯ ವಿಮೆ ಒದಗಿಸುವ ಪ್ರಯತ್ನ ನಡೆಸುತ್ತಿವೆ. ಈ ಮೂಲಕ ವಿಮಾ ಸಂಸ್ಥೆಗಳು ಹೆಚ್ಚು ಜನರನ್ನು ತಲುಪುವ ಪ್ರಯತ್ನ ನಡೆಯುತ್ತಿದೆ.

ಆ್ಯಕ್ಸಿಸ್‌ ಬ್ಯಾಂಕ್‌ ತನ್ನ ಗ್ರಾಹಕರಿಗೆ ಟಾಟಾ ಎಐಜಿ ಆರೋಗ್ಯ ವಿಮೆ ಕುರಿತು ಪರಿಚಯಿಸುತ್ತಿದೆ. ಕಾರ್ಯನಿರ್ವಹಿಸುವ ಕಂಪನಿಯಿಂದ ಗ್ರೂಪ್‌ ಮೆಡಿಕಲ್‌ ಕವರ್‌ (ಜಿಎಂಸಿ) ಹೊಂದಿದ್ದರೆ, ಅದರೊಂದಿಗೆ ಹೆಚ್ಚುವರಿಯಾಗಿ ₹2 ಲಕ್ಷ ವಿಮೆ (ಇನ್ನೂ ಹೆಚ್ಚಿನ ಮೊತ್ತದ ವಿಮೆ ಲಭ್ಯ) ಪಡೆಯುವ ಸೌಲಭ್ಯ ನೀಡುತ್ತಿದೆ. ವರ್ಷಕ್ಕೆ ಸುಮಾರು ₹4,500 ನೀಡಿ ₹2 ಲಕ್ಷದ ವರೆಗಿನ ಟಾಟಾ ಎಐಜಿ ವಿಮೆ ಪಡೆದುಕೊಳ್ಳಬಹುದು. ಈ ವಿಮೆ ಕೋವಿಡ್‌–19 ಚಿಕಿತ್ಸೆಗೂ ಅನ್ವಯಿಸುತ್ತದೆ ಎನ್ನುತ್ತಾರೆ ಗ್ರಾಹಕ ಸಂಪರ್ಕ ಅಧಿಕಾರಿಗಳು. ಈ ವಿಮಾ ಪಾಲಿಸಿ ತೆರಿಗೆ ವಿನಾಯಿತಿಗೂ ಒಳಪಟ್ಟಿರುತ್ತದೆ.

ಬಜಾಜ್‌ ಫಿನ್‌ಸರ್ವ್ ಡಿಜಿಟಲ್‌ ಹೆಲ್ತ್‌ ಇಎಂಐ ನೆಟ್‌ವರ್ಕ್‌ ಕಾರ್ಡ್‌ ಹೊರತಂದಿದೆ. ಪ್ರಸ್ತುತ ಬಜಾಜ್‌ ಫಿನ್‌ಸರ್ವ್ ಕಾರ್ಡ್‌ ಪಡೆದಿರುವವರಿಗೆ ನಿಗದಿಯಾಗಿರುವ ಕ್ರೆಡಿಟ್‌ ಮಿತಿಯ ಆಧಾರದ ಮೇಲೆ ಗರಿಷ್ಠ ₹4 ಲಕ್ಷದ ವರೆಗೂ ಡಿಜಿಟಲ್‌ ಹೆಲ್ತ್‌ ಇಎಂಐ ಕಾರ್ಡ್‌ ಪಡೆಯಬಹುದು. ₹700–800 ಪಡೆದು ₹1 ಲಕ್ಷ ಮಿತಿಯ ಕಾರ್ಡ್‌ ಪಡೆದುಕೊಳ್ಳಬಹುದು. ಇದು ಇತರೆ ವಿಮಾ ಪಾಲಿಸಿಗಳಂತೆ ಅಲ್ಲ. ಆಸ್ಪತ್ರೆಯ ಖರ್ಚು, ರೂಂ ಬಾಡಿಗೆ, ಔಷಧ, ಸ್ಕ್ಯಾನಿಂಗ್‌,... ಎಲ್ಲದರ ವೆಚ್ಚ ಕಾರ್ಡ್‌ ಮೂಲಕ ಮಾಡಬಹುದು. ಕೆಲವು ಆಸ್ಪತ್ರೆಗಳಲ್ಲಿ ಶೇ 10–20ರಷ್ಟು ರಿಯಾಯಿತಿ ಸಹ ದೊರೆಯುತ್ತದೆ. ಆದರೆ, ಮಾಡಿದ ಖರ್ಚು 24 ತಿಂಗಳ ಅವಧಿಯಲ್ಲಿ ಇಎಂಐ ರೂಪದಲ್ಲಿ ಮರು ಪಾವತಿಸಬೇಕು. ಕೋವಿಡ್‌–19 ಚಿಕಿತ್ಸೆಗೂ ಇದು ಅನ್ವಯಿಸುತ್ತದೆ.

ADVERTISEMENT

ಆರೋಗ್ಯ ತುರ್ತು, ಅಪಾಯದ ಸಂದರ್ಭಗಳಲ್ಲಿ ವಿಮೆ ಬಹುದೊಡ್ಡ ಸ್ನೇಹಿತನಾಗಿ ನಿಲ್ಲಬಹುದು. ಆದರೆ, ಸರಿಯಾದ ವಿಮೆ ಆಯ್ಕೆ ಮಾಡಿಕೊಳ್ಳುವುದು ನಮ್ಮದೇ ಜವಾಬ್ದಾರಿಯಾಗಿರುತ್ತದೆ. ಬಹುತೇಕ ಎಲ್ಲ ಆರೋಗ್ಯ ವಿಮೆ ಪಾಲಿಸಿಗಳು 'ಕೋವಿಡ್‌–19' ಒಳಗೊಂಡಂತೆ ಸಾಂಕ್ರಾಮಿಕ ಕಾಯಿಲೆಗಳಿಗೆ ಪರಿಹಾರ ಒದಗಿಸುವ ಸೌಲಭ್ಯ ಒಳಗೊಂಡಿವೆ ಎಂದು ಮಾರ್ಚ್‌ನಲ್ಲಿ ಸಾಮಾನ್ಯ ವಿಮೆ ಮಂಡಳಿ (ಜನರಲ್‌ ಇನ್ಶುರೆನ್ಸ್ ಬೋರ್ಡ್‌) ತಿಳಿಸಿದೆ.

ಈಗಾಗಲೇ ಚಾಲ್ತಿಯಲ್ಲಿರುವ ಆರೋಗ್ಯ ವಿಮೆಯಲ್ಲಿ ಕೋವಿಡ್–19 ಪ್ರಕರಣಗಳ ಚಿಕಿತ್ಸೆ ವೆಚ್ಚ ಅನ್ವಯಿಸುವಂತೆ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎ) ವಿಮೆ ಕಂಪನಿಗಳಿಗೆ ಸೂಚನೆ ನೀಡಿದೆ. ರಾಷ್ಟ್ರೀಯ ಮಟ್ಟದಲ್ಲಿ ಕೋವಿಡ್–19 ಚಿಕಿತ್ಸೆಗೆ ತಗುಲುವ ವೆಚ್ಚ ನಿಗದಿ ಪಡಿಸಿಲ್ಲ. ಹಾಗಾಗಿ, ವಿಮೆ ಕಂಪನಿಗಳು ಸಹ ನಿಗದಿ ಪಡಿಸುವ ವೆಚ್ಚದ ಬಗ್ಗೆ ಗೊಂದಲ ಹೊಂದಿವೆ.

ಕೋವಿಡ್‌ಗಾಗಿ ವಿಶೇಷ ‍ವಿಮೆ

ಮಾರ್ಚ್‌ 2020ರಲ್ಲಿ ಹಲವು ಇನ್ಶುರೆನ್ಸ್‌ ಕಂಪನಿಗಳು ಕೋವಿಡ್–19 ವಿಶೇಷ ವಿಮೆ ಪಾಲಿಸಿಗಳನ್ನು ಹೊರತಂದವು. ಕಡಿಮೆ ಅವಧಿ, ನಿಗದಿ ಸೌಲಭ್ಯ ಹಾಗೂ ಸೀಮಿತಿ ಮೊತ್ತ ಒಳಗೊಂಡಿದೆ. ಹೊಸದಾಗಿ ವಿಮೆ ಪಡೆಯುವವರಿಗೆ ಕೋವಿಡ್–19 ದೃಢಪಟ್ಟರೆ, ವಿಮೆಯ ಮೂಲಕ ಚಿಕಿತ್ಸೆ ಪಡೆಯಲು ಸಾಧ್ಯವಾಗುವುದಿಲ್ಲ. ಬಹುತೇಕ ವಿಮೆ ಕಂಪನಿಗಳು ಕನಿಷ್ಠ 30 ದಿನಗಳ ಕಾಯುವಿಕೆ ಅವಧಿಯನ್ನು ಹೊಂದಿರುತ್ತವೆ. ಸ್ಟಾರ್‌ ಹೆಲ್ತ್‌ ರೀತಿಯ ಕೆಲವು ಕಂಪನಿಗಳು ಮಾತ್ರ 16 ದಿನಗಳ ಕಾಯುವಿಕೆ ಅವಧಿ ನೀಡುತ್ತವೆ. ಚಾಲ್ತಿಯಲ್ಲಿರುವ ಪಾಲಿಸಿಗಳಿಗೆ ಅವಧಿಯೊಳಗೆ ಪ್ರೀಮಿಯಂ ಪಾವತಿಯಾಗದೆ ಇದ್ದರೆ, 30 ದಿನಗಳ ಕಾಲಾವಕಾಶ ನೀಡುವಂತೆ ಐಆರ್‌ಡಿಎ ಸಲಹೆ ಮಾಡಿದೆ.

ಕೋವಿಡ್‌–19 ಚಿಕಿತ್ಸೆ‌ಗಾಗಿಯೇ ಕರ್ಣಾಟಕ ಬ್ಯಾಂಕ್‌, ಯುನಿವರ್ಸಲ್ ಸೋಂಪೊ ಜನರಲ್ ಇನ್ಶುರೆನ್ಸ್ ಕಂಪನಿ ಸಹಯೋಗದೊಂದಿಗೆ ವಿಶೇಷ ವಿಮೆ ಯೋಜನೆ ಆರಂಭಿಸಿದೆ. ಆಸ್ಪತ್ರೆಯ ವೆಚ್ಚಗಳಿಗಾಗಿ ಕೇವಲ ₹399 (ಎಲ್ಲ ತೆರಿಗೆಗಳೂ ಸೇರಿ) ಕಂತನ್ನು ನೀಡುವ ಮೂಲಕ ಈ ವಿಮೆ ಪಡೆಯಬಹುದಾಗಿದೆ. ಕೊರೊನಾ ಸೋಂಕಿನಿಂದಾಗಿ ಆಸ್ಪತ್ರೆಗೆ ಸೇರಬೇಕಾದ ಪರಿಸ್ಥಿತಿ ಉಂಟಾದಲ್ಲಿ ವಿಮಾದಾರರಿಗೆ ₹3 ಲಕ್ಷದವರೆಗೆ ಆಸ್ಪತ್ರೆಯ ಖರ್ಚನ್ನು ಹಾಗೂ ಹೊರ ರೋಗಿಯಾಗಿ ಚಿಕಿತ್ಸೆ ಪಡೆದಲ್ಲಿ ₹3 ಸಾವಿರದವರೆಗಿನ ಔಷಧಿಗಳ ಖರ್ಚನ್ನು ಅಥವಾ 14 ದಿನಗಳ ಕ್ವಾರಂಟೈನ್‌ಗೆ ಒಳಪಟ್ಟಲ್ಲಿ ದಿನವೊಂದಕ್ಕೆ ₹1 ಸಾವಿರದವರೆಗೆ ಸರ್ಕಾರಿ ಅಥವಾ ಮಿಲಿಟರಿ ಆಸ್ಪತ್ರೆಗಳ ಕ್ವಾರಂಟೈನ್ ವೆಚ್ಚ ಭರಿಸಲು ಅವಕಾಶವಿದೆ.

ವಿಮೆಯ ಅವಧಿ 120 ದಿನಗಳು. ಈ ವಿಮೆಯ ಸೌಲಭ್ಯ 18 ರಿಂದ 65 ವಯಸ್ಸಿನ ವಯೋಮಿತಿಯ ಬ್ಯಾಂಕಿನ ಎಲ್ಲ ಗ್ರಾಹಕರಿಗೆ ಲಭ್ಯವಿದೆ. ಗ್ರಾಹಕರಲ್ಲದವರೂ, ಕರ್ಣಾಟಕ ಬ್ಯಾಂಕ್‌ನಲ್ಲಿ ಖಾತೆ ತೆರೆದು ವಿಮಾ ಕಂತನ್ನು ಪಾವತಿಸಿ, ವಿಮೆ ಪಡೆಯುವ ಸೌಲಭ್ಯ ಕಲ್ಪಿಸಲಾಗಿದೆ ಎಂದು ಬ್ಯಾಂಕ್‌ನ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಟಾರ್ ಹೆಲ್ತ್ ಇನ್ಶುರೆನ್ಸ್ 1 ವರ್ಷದ ಅವಧಿಗೆ 'ಸ್ಟಾರ್‌ ನೋವೆಲ್ ಕೊರೊನಾ ವೈರಸ್‌ ವಿಮೆ' ಹೊರತಂದಿದ್ದು, 18–65 ವರ್ಷ ವಯಸ್ಸಿನವರು ಪಾಲಿಸಿ ಪಡೆಯಬಹುದು. ವಿಮೆ ಗರಿಷ್ಠ ಮೊತ್ತ ₹42,000 ಇದ್ದು, ಪ್ರೀಮಿಯಂ ₹598 (+ಜಿಎಸ್‌ಟಿ) ಪಾವತಿಸಬೇಕಾಗುತ್ತದೆ. ಕೋವಿಡ್‌-19 ದೃಢ ಪಟ್ಟ ವ್ಯಕ್ತಿಯ ಆಸ್ಪತ್ರೆಯ ವೆಚ್ಚವನ್ನು ವಿಮೆ ಪಾಲಿಸಿ ಮೂಲಕ ಮಾಡಬಹುದು.

ನಿಯಮ ಮತ್ತು ಷರತ್ತುಗಳು

ಆರೋಗ್ಯ ವಿಮಾ ನೀತಿ ಕೆಲವು ರೀತಿ ಮತ್ತು ರಿವಾಜುಗಳನ್ನು ಹೊಂದಿರುತ್ತವೆ. ಯಾವುದನ್ನು ಒಳಗೊಳ್ಳುತ್ತದೆ, ಯಾವೆಲ್ಲವೂ ಒಳಗೊಳ್ಳುವುದಿಲ್ಲ ಎಂಬುದನ್ನು ವಿವರವಾಗಿ ಹೇಳಿರುತ್ತವೆ. ಈ ನಿಯಮಾವಳಿಗಳಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ, ಕಾಲಾವಧಿ, ಆಸ್ಪತ್ರೆ ಕೊಠಡಿಗಳ ಬಾಡಿಗೆ ವ್ಯಾಪ್ತಿ, ಅಸ್ತಿತ್ವದಲ್ಲಿರುವ ಕಾಯಿಲೆಗಳು... ಇತ್ಯಾದಿ. ಹೀಗೆ ಎಲ್ಲ ಷರತ್ತು ಮಿತಿಗಳನ್ನು ಜಾಲಾಡಬೇಕು. ಇವೆಲ್ಲವೂ ಒಪ್ಪಿತವಾದರೆ ಮಾತ್ರ ವಿಮೆ ಯೋಜನೆ ಪಡೆದುಕೊಳ್ಳಬೇಕು.

ಇದೀಗ ರಾಜ್ಯ ಸರ್ಕಾರ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌–19 ಚಿಕಿತ್ಸೆಗೆ ದರ ನಿಗದಿ ಪಡಿಸಿದೆ. ರೋಗಿಗಳು ನೇರವಾಗಿ ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆಗೆ ಒಳಪಟ್ಟರೆ ಅವರಿಂದ ಜನರಲ್ ವಾರ್ಡ್‌ಗೆ ದಿನಕ್ಕೆ ₹10,000, ಎಚ್‌ಡಿಯು (High-dependency unit) ₹12,000, ಐಸಿಯು ₹15,000 ಹಾಗೂ ವೆಂಟಿಲೇಟರ್ ಸಹಿತ ಐಸಿಯುಗೆ ₹25,000ಕ್ಕಿಂತ ಅಧಿಕ ಶುಲ್ಕ ವಿಧಿಸುವಂತಿಲ್ಲ ಎಂದು ತಿಳಿಸಲಾಗಿದೆ. ಈ ಲೆಕ್ಕಾಚಾರದಲ್ಲಿ ಕೊರೊನಾ ಸೋಂಕಿತ ವ್ಯಕ್ತಿ 6–8 ದಿನ ಚಿಕಿತ್ಸೆ ಪಡೆದರೆ, ಕನಿಷ್ಠ ₹1 ಲಕ್ಷ ತಗಲಬಹುದಾಗಿದೆ. ಇದರ ಆಧಾರದ ಮೇಲೂ ವಿಮೆ ಪಡೆಯುವ ಮೊತ್ತವನ್ನು ನಿರ್ಧರಿಸಿಕೊಳ್ಳಬಹುದು.

ಪಾಲಿಸಿ ಪಡೆಯುವಾಗ ಆಸ್ಪತ್ರೆ ಚಿಕಿತ್ಸೆ ವೆಚ್ಚ, ರೂಂ ಬಾಡಿಗೆ, ಔಷಧ, ಶಸ್ತ್ರ ಚಿಕಿತ್ಸೆ ಅಥವಾ ಇತರೆ ವೆಚ್ಚಗಳು ವಿಮಾ ರಕ್ಷಣೆಯಲ್ಲಿ ಒಳಗೊಂಡಿರುವುದನ್ನು ಖಾತರಿ ಪಡಿಸಿಕೊಳ್ಳಬೇಕು. ಕೆಲವು ಕಂಪನಿಗಳು ಆನ್‌ಲೈನ್‌ ಮೂಲಕವೇ ಪಾಲಿಸಿ ಪಡೆಯಲು ಅವಕಾಶ ನೀಡಿದ್ದರೆ, ಇನ್ನೂ ಕೆಲವು ಕಂಪನಿಗಳು ಆರೋಗ್ಯ ತಪಾಸಣೆ ಅಗತ್ಯದ ಬಗ್ಗೆ ಹೇಳುತ್ತವೆ. 60 ವರ್ಷ ವಯಸ್ಸಿಗೂ ಹೆಚ್ಚಿನವರಿಗೆ ಪ್ರೀಮಿಯಂ ಮೊತ್ತ ಹಾಗೂ ವಿಮೆ ರಕ್ಷಣೆ ವ್ಯಾಪ್ತಿಯಲ್ಲಿ ಬದಲಾವಣೆಯಾಗುತ್ತದೆ. ಹಿರಿಯ ನಾಗರಿಕರಿಗೆ ಪ್ರೀಮಿಯಂ ಮೊತ್ತ ಸಹ ಹೆಚ್ಚಿರುತ್ತದೆ ಹಾಗೂ ವಿಮೆ ಪಡೆಯುವುದಕ್ಕೂ ಮುಂಚಿನಿಂದ ಇರುವ ಕಾಯಿಲೆಗಳಿಗೆ ಪಡೆಯುವ ಚಿಕಿತ್ಸೆಗೆ 2–3 ವರ್ಷಗಳ ನಂತರ ಖರ್ಚು ಕ್ಲೈಮ್‌ ಮಾಡಿಕೊಳ್ಳಬಹುದಾಗಿರುತ್ತದೆ.

ಸಾಮಾನ್ಯವಾಗಿ ವಿಮೆ ಪಾಲಿಸಿಗಳಲ್ಲಿ ಏನೆಲ್ಲ ಅನ್ವಯವಾಗುವುದಿಲ್ಲ?

* ಹೋಂ ಕ್ವಾರಂಟೈನ್‌: ಸೋಂಕಿನಿಂದ ಮನೆಯಲ್ಲಿಯೇ ಪ್ರತ್ಯೇಕವಾಗಿ ವಾಸವಿದ್ದರೆ, ಅದರ ಖರ್ಚು.
* ಅಧಿಕೃತವಲ್ಲದ ಕ್ವಾರಂಟೈನ್‌ ಕೇಂದ್ರ: ಸರ್ಕಾರ ಅಧಿಕೃತವಾಗಿ ಗೊತ್ತುಪಡಿಸದ ಕೇಂದ್ರಗಳಲ್ಲಿ ಕ್ವಾರಂಟೈನ್‌ ಆಗಿ ಕೊರೊನಾ ವೈರಸ್‌ಗೆ ಚಿಕಿತ್ಸೆ ಪಡೆದರೆ, ಅದರ ಖರ್ಚು.
* ಮುಂಚಿನಿಂದ ಇರುವ ಕಾಯಿಲೆ: ವಿಮೆ ಪಾಲಿಸಿ ಪಡೆಯುವುದಕ್ಕೂ ಮುಂಚಿನಿಂದಲೂ ಇರುವ ಕಾಯಿಲೆಗಳಿಗೆ ಕಾಯುವಿಕೆ ಅವಧಿ ಮುಗಿಯುವವರೆಗೂ ಪಡೆಯುವ ಚಿಕಿತ್ಸೆ ವೆಚ್ಚ.
* ವೈದ್ಯರ ಸಲಹೆ ಇಲ್ಲದೆಯೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದರೆ, ಅದರ ವೆಚ್ಚ ಅನ್ವಯವಾಗುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.