ADVERTISEMENT

ಬ್ಯಾಂಕ್‌ ದಂಡ, ಶುಲ್ಕದಿಂದ ₹35,587.68 ಕೋಟಿ ಸಂಗ್ರಹ

ಪಿಟಿಐ
Published 9 ಆಗಸ್ಟ್ 2023, 15:37 IST
Last Updated 9 ಆಗಸ್ಟ್ 2023, 15:37 IST
   

ಬೆಂಗಳೂರು: ಬ್ಯಾಂಕ್‌ ಖಾತೆಯಲ್ಲಿ ಕನಿಷ್ಠ ಮೊತ್ತ ಉಳಿಸಿಕೊಳ್ಳದೇ ಇರುವುದಕ್ಕೆ ದಂಡ, ಮಿತಿಗಿಂತ ಹೆಚ್ಚಿನ ಬಾರಿ ಎಟಿಎಂ ಬಳಕೆಗೆ ಶುಲ್ಕ ಹಾಗೂ ಎಸ್‌ಎಂಎಸ್‌ ಸೇವೆಗೆ ಶುಲ್ಕದ ಮೂಲಕ ವಾಣಿಜ್ಯ ಬ್ಯಾಂಕ್‌ಗಳು 2018ರಿಂದ ಈಚೆಗೆ ಗ್ರಾಹಕರಿಂದ ಒಟ್ಟು ₹35,587.68 ಕೋಟಿ ಸಂಗ್ರಹಿಸಿವೆ.

ಸಂಸದೆ ಅಮೀ ಯಾಗ್ನಿಕ್ ಕೇಳಿದ ಪ್ರಶ್ನೆಗೆ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್‌ ಕರಾಡ್‌ ಅವರು ರಾಜ್ಯಸಭೆಯಲ್ಲಿ ಈ ಮಾಹಿತಿ ನೀಡಿದ್ದಾರೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಹಾಗೂ ಖಾಸಗಿ ವಲಯದ ಎಕ್ಸಿಸ್‌ ಬ್ಯಾಂಕ್‌, ಎಚ್‌ಡಿಎಫ್‌ಸಿ ಬ್ಯಾಂಕ್, ಇಂಡಸ್‌ಇಂಡ್‌ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌ ಮತ್ತು ಐಡಿಬಿಐ ಬ್ಯಾಂಕ್‌ ನೀಡಿರುವ ಅಂಕಿ–ಅಂಶಗಳನ್ನು ಆಧರಿಸಿ ಈ ಮಾಹಿತಿ ನೀಡಿರುವುದಾಗಿ ಅವರು ತಿಳಿಸಿದ್ದಾರೆ.

ಆರ್‌ಬಿಐ 2015ರ ಜುಲೈ 1ರಂದು ಹೊರಡಿಸಿರುವ ಪ್ರಕಟಣೆಯಂತೆ, ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತ ಉಳಿಸಿಕೊಳ್ಳದವರಿಗೆ ಬ್ಯಾಂಕ್‌ನ ಆಡಳಿತ ಮಂಡಳಿ ಒಪ್ಪಿರುವ ನೀತಿಯಂತೆ ದಂಡ ವಿಧಿಸಲು ಬ್ಯಾಂಕ್‌ಗಳಿಗೆ ಅವಕಾಶ ಇದೆ. ಆದರೆ, ಹೀಗೆ ವಿಧಿಸುವ ದಂಡವು ನ್ಯಾಯೋಚಿತವಾಗಿ ಇರಬೇಕು ಮತ್ತು ಸೇವೆಗಳನ್ನು ನೀಡುವುದಕ್ಕೆ ತಗಲುವ ಸರಾಸರಿ ವೆಚ್ಚಕ್ಕಿಂತಲೂ ಹೆಚ್ಚಿಗೆ ಇರದಂತೆ ನೋಡಿಕೊಳ್ಳಬೇಕು ಎಂದು ಅವರು ವಿವರಿಸಿದ್ದಾರೆ.

ADVERTISEMENT

2021ರ ಜೂನ್‌ 10ರ ಆರ್‌ಬಿಐ ಅಧಿಸೂಚನೆಯ ಪ್ರಕಾರ, ಗ್ರಾಹಕರು ತಾವು ಖಾತೆ ಹೊಂದಿರುವ ಬ್ಯಾಂಕಿನ ಎಟಿಎಂ ಮೂಲಕ ಪ್ರತಿ ತಿಂಗಳು ಐದು ಬಾರಿ ಉಚಿತವಾಗಿ ವಹಿವಾಟು ನಡೆಸಬಹುದು. ಬೇರೆ ಬ್ಯಾಂಕ್‌ ಎಟಿಎಂ ಮೂಲಕ ನಗರ ಪ್ರದೇಶದಲ್ಲಿ ತಿಂಗಳಿಗೆ ಮೂರು ಬಾರಿ, ಗ್ರಾಮೀಣ ಭಾಗದಲ್ಲಿ ತಿಂಗಳಿಗೆ ಐದು ಬಾರಿ ಮಾತ್ರ ಶುಲ್ಕ ರಹಿತವಾಗಿ ವಹಿವಾಟು ನಡೆಸುವ ಮಿತಿ ವಿಧಿಸಲಾಗಿದೆ. ಈ ಮಿತಿ ಮೀರಿದರೆ ಪ್ರತಿ ವಹಿವಾಟಿಗೆ ಗರಿಷ್ಠ ₹21 ಶುಲ್ಕ ವಿಧಿಸುವುದು 2022ರ ಜನವರಿ1ರಿಂದ ಜಾರಿಗೆ ಬಂದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ದಂಡ, ಶುಲ್ಕ ಸಂಗ್ರಹ ಕಾರಣ

ಮೊತ್ತ (ಕೋಟಿಗಳಲ್ಲಿ)

ಖಾತೆಯಲ್ಲಿ ಕನಿಷ್ಠ ಮೊತ್ತ ಇಲ್ಲದ್ದಕ್ಕೆ ದಂಡ;₹21,044.04

ಉಚಿತ ಮಿತಿಗಿಂತ ಹೆಚ್ಚು ಬಾರಿ ಎಟಿಎಂ ಬಳಕೆ;₹8,289.32

ಎಸ್‌ಎಂಎಸ್‌ ಸೇವೆಗಳಿಗೆ;₹6,254.32 (2018ರಿಂದ ಈಚೆಗೆ ಸಂಗ್ರಹಿಸಿರುವುದು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.