ನವದೆಹಲಿ: ಪೇಟಿಎಂ ಪೇಮೆಂಟ್ ಬ್ಯಾಂಕ್‌ನಿಂದ ಫಾಸ್ಟ್ಯಾಗ್ ಖರೀದಿಸದಂತೆ ಹೆದ್ದಾರಿ ಬಳಕೆದಾರರಿಗೆ, ಭಾರತೀಯ ಹೆದ್ದಾರಿ ನಿರ್ವಹಣಾ ಕಂಪನಿಯು (ಐಎಚ್‌ಎಂಸಿಎಲ್) ಸೂಚಿಸಿದೆ.
ಅಲ್ಲದೇ, ಫಾಸ್ಟ್ಯಾಗ್‌ಗಳನ್ನು ಖರೀದಿಸುವ ಬ್ಯಾಂಕ್‌ಗಳ ಪಟ್ಟಿಯಿಂದ ಪೇಟಿಎಂ ಬ್ಯಾಂಕ್ ಅನ್ನು ಕೈಬಿಟ್ಟಿದೆ.
ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್, ಅಲಹಾಬಾದ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಐಡಿಬಿಐ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಯೆಸ್ ಬ್ಯಾಂಕ್, ಕೆನರಾ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಕೋಟಕ್ ಮಹೀಂದ್ರ ಬ್ಯಾಂಕ್, ಕರೂರ್ ವೈಶ್ಯ ಬ್ಯಾಂಕ್, ಇಂಡಿಯನ್ ಬ್ಯಾಂಕ್ ಸೇರಿದಂತೆ 32 ಬ್ಯಾಂಕ್‌ಗಳಲ್ಲಿ ಬಳಕೆದಾರರು ಫಾಸ್ಟ್ಯಾಗ್ ಖರೀದಿಸಬಹುದು ಎಂದು ಶುಕ್ರವಾರ ‘ಎಕ್ಸ್’ನಲ್ಲಿ ತಿಳಿಸಿದೆ.
ದೇಶದಲ್ಲಿ ಒಟ್ಟು 8 ಕೋಟಿಗೂ ಹೆಚ್ಚು ಫಾಸ್ಟ್ಯಾಗ್ ಬಳಕೆದಾರರಿದ್ದಾರೆ. ಈ ಪೈಕಿ ಪೇಟಿಎಂ ಬ್ಯಾಂಕ್ ಶೇ 30ರಷ್ಟು ಪಾಲನ್ನು ಹೊಂದಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜನವರಿ 19ರಂದೇ ಫಾಸ್ಟ್ಯಾಗ್‌ಗಳನ್ನು ವಿತರಿಸದಂತೆ ಪೇಟಿಎಂ ಬ್ಯಾಂಕ್‌ಗೆ, ಭಾರತೀಯ ಹೆದ್ದಾರಿ ನಿರ್ವಹಣಾ ಕಂಪನಿಯು ಸೂಚಿಸಿತ್ತು.
ಫೆಬ್ರುವರಿ 29ರ ಬಳಿಕ ಎಲ್ಲ ಬಗೆಯ ಸೇವೆಗಳನ್ನು ಸ್ಥಗಿತಗೊಳಿಸುವಂತೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ವಿಧಿಸಿದ್ದ ನಿರ್ಬಂಧವನ್ನು ಭಾರತೀಯ ರಿಸರ್ವ್ ಬ್ಯಾಂಕ್, ಮಾರ್ಚ್ 15ರ ವರೆಗೆ ವಿಸ್ತರಿಸಿದೆ.
ಪೇಟಿಎಂ ಬಳಕೆದಾರರ ಖಾತೆಗಳು, ಪ್ರೀಪೇಯ್ಡ್ ಪೇಮೆಂಟ್, ವ್ಯಾಲೆಟ್ ಹಾಗೂ ಫಾಸ್ಟ್ಯಾಗ್‌ಗಳಿಗೆ ಯಾವುದೇ ಠೇವಣಿ ಅಥವಾ ಟಾಪ್ ಅಪ್‌ಗಳನ್ನು ಸ್ವೀಕರಿಸದಂತೆ ಆರ್‌ಬಿಐ ನಿರ್ಬಂಧ ಹೇರಿತ್ತು.
ಆದರೆ, ಪೇಟಿಎಂ ಸೇವೆ ಬಳಸುತ್ತಿರುವ ವ್ಯಾಪಾರಿಗಳು ಹಾಗೂ ಗ್ರಾಹಕರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಈ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.
ಪೇಟಿಎಂ ಬ್ಯಾಂಕ್‌ಗೆ ವಿಧಿಸಿರುವ ನಿರ್ಬಂಧಕ್ಕೆ ಸಂಬಂಧಿಸಿದಂತೆ ಜನಸಾಮಾನ್ಯರು ಕೇಳಿದ ಪ್ರಶ್ನೆಗಳಿಗೆ ಆರ್‌ಬಿಐ ಉತ್ತರಗಳನ್ನೂ ಬಿಡುಗಡೆ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.