ನವದೆಹಲಿ: ಅಮೆರಿಕದ ಶಾರ್ಟ್ ಶೆಲ್ಲರ್ ಕಂಪನಿ ಹಿಂಡೆನ್‌ಬರ್ಗ್ ತಮ್ಮ ವಿರುದ್ಧ ಮಾಡಿರುವ ಆರೋಪವನ್ನು ಭಾರತೀಯ ಷೇರು ಪೇಟೆ ನಿಯಂತ್ರಣ ಮಂಡಳಿ (ಸೆಬಿ) ಅಧ್ಯಕ್ಷೆ ಮಾಧವಿ ಬುಚ್ ಮತ್ತು ಅವರ ಪತಿ ಧವಲ್ ಬುಚ್ ಶನಿವಾರ ಅಲ್ಲಗಳೆದಿದ್ದಾರೆ.
ಹಿಂಡೆನ್‌ಬರ್ಗ್ ಆರೋಪಗಳು ಆಧಾರರಹಿತವಾಗಿವೆ ಎಂದಿರುವ ದಂಪತಿ, ತಮ್ಮ ಹಣಕಾಸು ವ್ಯವಹಾರಗಳು ತೆರೆದ ಪುಸ್ತಕವಿದ್ದಂತೆ ಎಂದು ಪ್ರತಿಪಾದಿಸಿದ್ದಾರೆ.
ವಾಣಿಜ್ಯ ಕ್ಷೇತ್ರದಲ್ಲಿ ಸದ್ದು ಮಾಡಿರುವ ಅದಾನಿ ಷೇರು ಹಗರಣದಲ್ಲಿ ಮಾಧವಿ ಹಾಗೂ ಧವಲ್ ಭಾಗಿಯಾಗಿದ್ದಾರೆ ಎಂದು ಹಿಂಡೆನ್‌ಬರ್ಗ್ ಗಂಭೀರವಾದ ಆರೋಪ ಮಾಡಿದೆ.
ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ದಂಪತಿ, ಸೆಬಿಯಿಂದ ಕ್ರಮ ಎದುರಿಸುತ್ತಿರುವ ಹಾಗೂ ಶೋಕಾಸ್ ನೋಟಿಸ್ ಪಡೆದಿರುವ ಹಿಂಡೆನ್‌ಬರ್ಗ್, ಅದಕ್ಕೆ ಪ್ರತಿಯಾಗಿ ಚಾರಿತ್ರ್ಯ ಹರಣಕ್ಕೆ ಯತ್ನಿಸುತ್ತಿರುವುದು ದುರದೃಷ್ಟಕರ ಎಂದಿದ್ದಾರೆ.
ಉದ್ಯಮಿ ಗೌತಮ್ ಅದಾನಿ ಸಮೂಹದ ಸಾಗರೋತ್ತರ ಹೂಡಿಕೆಯಲ್ಲಿ ಬುಚ್ ದಂಪತಿಯ ಪಾಲುದಾರಿಕೆ ಇದೆ. ಅದಾನಿಯವರು ಮಾರಿಷಸ್ ಮತ್ತು ಇನ್ನಿತರ ದೇಶಗಳಲ್ಲಿ ಹೊಂದಿರುವ ಶೆಲ್ ಕಂಪನಿಗಳ ಬಗ್ಗೆ ತನಿಖೆ ನಡೆಸಲು ಸೆಬಿ ಯಾವುದೇ ಆಸಕ್ತಿ ತೋರದಿರುವುದು ಅಚ್ಚರಿ ಮೂಡಿಸಿದೆ ಎಂದು ಹಿಂಡೆನ್‌ಬರ್ಗ್ ತನ್ನ ಬ್ಲಾಗ್‌ಸ್ಪಾಟ್‌ನಲ್ಲಿ ಆರೋಪ ಮಾಡಿದೆ.
ಅದಾನಿ ಷೇರು ಹಗರಣದ ಬಗ್ಗೆ 2023ರ ಜನವರಿಯಲ್ಲಿ ವರದಿ ಪ್ರಕಟಿಸಿದ್ದ ಹಿಂಡೆನ್‌ಬರ್ಗ್, ಷೇರುಪೇಟೆಯ ವಾಸ್ತವಿಕ ಬೆಲೆಗಿಂತ ಕೃತಕ ಬೆಲೆಯಲ್ಲಿ ಅದಾನಿ ಸಮೂಹದ ಷೇರುಗಳು ಮಾರಾಟವಾಗುತ್ತಿವೆ ಎಂಬ ಗಂಭೀರ ಆರೋಪ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.