ಮುಂಬೈ: 2020ರ ನವೆಂಬರ್ ತಿಂಗಳಿಗೆ ಹೋಲಿಸಿದರೆ, ಡಿಸೆಂಬರ್‌ನಲ್ಲಿ ನೇಮಕಾತಿ ಚಟುವಟಿಕೆಗಳಲ್ಲಿ ಶೇಕಡ 14ರಷ್ಟು ಹೆಚ್ಚಳ ಆಗಿದೆ. ವಿಮೆ, ಆಟೊಮೊಬೈಲ್ ಮತ್ತು ಅದಕ್ಕೆ ಸಂಬಂಧಿಸಿದ ಇತರ ವಲಯಗಳಲ್ಲಿ ಹೆಚ್ಚಿನ ನೇಮಕಾತಿ ನಡೆದಿದೆ ಎಂದು ನೌಕ್ರಿ.ಕಾಂ ಸಿದ್ಧಪಡಿಸಿದ ವರದಿ ಹೇಳಿದೆ.
‘2020ರ ಏಪ್ರಿಲ್, ಮೇ, ಜೂನ್ ತಿಂಗಳುಗಳಲ್ಲಿ ಉದ್ಯೋಗ ನೇಮಕಾತಿಯಲ್ಲಿ ಶೇಕಡ 56ರಷ್ಟು ಕುಸಿತ ಆಗಿತ್ತು. ಅದಾದ ನಂತರದಲ್ಲಿ ನೇಮಕಾತಿಯಲ್ಲಿ ಸ್ಥಿರ ಏರಿಕೆ ಕಂಡುಬಂದಿದೆ’ ಎಂದು ನೌಕ್ರಿ.ಕಾಂ ಕಂಪನಿಯ ಮುಖ್ಯ ವಾಣಿಜ್ಯ ಅಧಿಕಾರಿ ಪವನ್ ಗೋಯಲ್ ತಿಳಿಸಿದರು.
ಆತಿಥ್ಯ, ಪ್ರವಾಸ, ಆಟೊಮೊಬೈಲ್ ಮತ್ತು ರಿಟೇಲ್ ವಹಿವಾಟು ಉದ್ಯಮಗಳು ಇನ್ನೂ ಚೇತರಿಸಿಕೊಳ್ಳುತ್ತಿವೆ. 2021ರಲ್ಲಿ ದೊಡ್ಡ ಮಟ್ಟದಲ್ಲಿ ಚೇತರಿಕೆ ಇದೆ ಎಂಬುದನ್ನು ಅಂಕಿ–ಅಂಶಗಳು ಹೇಳುತ್ತಿವೆ ಎಂದು ಅವರು ಹೇಳಿದ್ದಾರೆ.
ವಿಮಾ ಕ್ಷೇತ್ರದಲ್ಲಿ ನೇಮಕ ಚಟುವಟಿಕೆಗಳು ಡಿಸೆಂಬರ್‌ನಲ್ಲಿ ಶೇಕಡ 45ರಷ್ಟು ಏರಿಕೆ ಆಗಿವೆ ಎಂದು ವರದಿ ಹೇಳಿದೆ. ಬ್ಯಾಂಕಿಂಗ್, ಹಣಕಾಸು ಸೇವೆಗಳು, ಬಯೋಟೆಕ್, ಎಫ್‌ಎಂಸಿಜಿ, ಐ.ಟಿ. ಉದ್ಯಮಗಳ ನೇಮಕಾತಿಯಲ್ಲಿ ಕೂಡ ಬೆಳವಣಿಗೆ ಕಂಡುಬಂದಿದೆ ಎಂದು ವರದಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.