ನವದೆಹಲಿ: ಡೆಟ್ ಮ್ಯೂಚುವಲ್ ಫಂಡ್ ಯೋಜನೆಗಳಿಗೆ ದೀರ್ಘಾವಧಿ ಬಂಡವಾಳ ವೃದ್ಧಿ ತೆರಿಗೆಯ (ಎಲ್‌ಟಿಜಿಸಿ) ಪ್ರಯೋಜನ ಹಿಂಪಡೆದಿರುವ ಕಾರಣ, ಸಿರಿವಂತರು (ಎಚ್‌ಎನ್‌ಐ) ಅಲ್ಲಿ ಹೂಡಿಕೆ ಮಾಡುವುದಕ್ಕಿಂತಲೂ ಬ್ಯಾಂಕ್‌ನ ನಿಶ್ಚಿತ ಠೇವಣಿಗಳಲ್ಲಿ (ಎಫ್.ಡಿ.) ಹಣ ತೊಡಗಿಸಲು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವಿಸಸ್ ವರದಿಯು ತಿಳಿಸಿದೆ.
ಬ್ಯಾಂಕ್ ಠೇವಣಿಗಳ ಬಡ್ಡಿದರವು ಕಳೆದ ಒಂದು ವರ್ಷದಲ್ಲಿ ಗಣನೀಯವಾಗಿ ಹೆಚ್ಚಾಗಿದೆ. ಇದು ಸಹ ಸಿರಿವಂತರನ್ನು ಡೆಟ್ ಫಂಡ್‌ಗಳ ಬದಲಾಗಿ ಎಫ್.ಡಿ.ಯತ್ತ ಮುಖಮಾಡುವಂತೆ ಪ್ರೇರೇಪಿಸಿದೆ ಎಂದು ಮೋತಿಲಾಲ್ ಓಸ್ವಾಲ್ ಇನ್‌ಸ್ಟಿಟ್ಯೂಷನಲ್ ಈಕ್ವಿಟೀಸ್‌ನ ಬಿಎಫ್‌ಎಸ್‌ಐ ರಿಸರ್ಚ್‌ನ ಮುಖ್ಯಸ್ಥ ನಿತಿನ್ ಅಗರ್ವಾಲ್ ತಿಳಿಸಿದ್ದಾರೆ.
₹1 ಸಾವಿರ ಕೋಟಿಗೂ ಅಧಿಕ ನಿರ್ವಹಣಾ ಸಂಪತ್ತು ಹೊಂದಿರುವ ಮ್ಯೂಚುವಲ್ ಫಂಡ್ ವಿತರಕರು ಮತ್ತು ಸಾಂಸ್ಥಿಕ ಮಾರಾಟ ಪ್ರತಿನಿಧಿಗಳಿಂದ ಮಾಹಿತಿ ಸಂಗ್ರಹಿಸಿ ಈ ವರದಿ ಸಿದ್ಧಪಡಿಸಲಾಗಿದೆ ಎಂದು ಅದು ಹೇಳಿದೆ. ವ್ಯವಸ್ಥಿತ ಹೂಡಿಕೆ ಯೋಜನೆಗಳಲ್ಲಿ (ಎಸ್‌ಐಪಿ) ಹೆಚ್ಚಿನ ಮೊತ್ತದ ಹೂಡಿಕೆಯನ್ನು ಸಿರಿವಂತರು ಮಾಡಿಲ್ಲ. ಏಕೆಂದರೆ ಕಳೆದ ಮೂರು ವರ್ಷಗಳಲ್ಲಿ ಎಸ್‌ಐಪಿ ಮೂಲಕ ಬಂದಿರುವ ಗಳಿಕೆಯು ಬಹಳ ಕಡಿಮೆ ಪ್ರಮಾಣದ್ದಾಗಿದೆ.
ಏಪ್ರಿಲ್ 1ರ ನಂತರ, ಡೆಟ್ ಮ್ಯೂಚುವಲ್ ಫಂಡ್ ಹೂಡಿಕೆಗಳಿಂದ ಸಿಗುವ ಲಾಭಕ್ಕೆ ಅಲ್ಪಾವಧಿ ಬಂಡವಾಳ ವೃದ್ಧಿ ತೆರಿಗೆ ವಿಧಿಸಲಾಗುತ್ತಿದೆ. ಇದರಿಂದಾಗಿ ಸಿರಿವಂತರು ಡೆಟ್ ಫಂಡ್‌ಗಳ ಕಡೆಗೆ ಹೆಚ್ಚು ಆಸಕ್ತಿ ತೋರಿಸುತ್ತಿಲ್ಲ.
ತಗ್ಗಿದ ಎಸ್‌ಐಪಿ ಹರಿವು: ಏಪ್ರಿಲ್ ತಿಂಗಳಲ್ಲಿ ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲಿನ ಒಳಹರಿವು ಶೇಕಡ 68ರಷ್ಟು ಕಡಿಮೆಯಾಗಿದ್ದು, ₹6,480 ಕೋಟಿಗೆ ತಲುಪಿದೆ ಎಂದು ಭಾರತೀಯ ಮ್ಯೂಚುವಲ್ ಫಂಡ್‌ಗಳ ಒಕ್ಕೂಟ (ಎಎಂಎಫ್‌ಐ) ಮಾಹಿತಿ ನೀಡಿದೆ. ಮಾರ್ಚ್ ತಿಂಗಳಲ್ಲಿ ಈಕ್ವಿಟಿ ಫಂಡ್‌ಗಳಲ್ಲಿ ₹20,534 ಕೋಟಿ ಹೂಡಿಕೆ ಆಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.