ADVERTISEMENT

ಪತಂಜಲಿ ಆಯುರ್ವೇದ್‌ ವ್ಯವಹಾರ ಸ್ವಾಧೀನಕ್ಕೆ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 19:16 IST
Last Updated 2 ಜುಲೈ 2024, 19:16 IST
   

ಬೆಂಗಳೂರು: ಪತಂಜಲಿ ಆಯುರ್ವೇದ್‌ ಲಿಮಿಟೆಡ್‌ನ (ಪಿಎಎಲ್‌) ಗೃಹ ಮತ್ತು ವೈಯಕ್ತಿಕ ಬಳಕೆ ವಸ್ತುಗಳ (ಎಚ್‌ಪಿಸಿ) ವ್ಯವಹಾರದ ಸ್ವಾಧೀನ ಪ್ರಸ್ತಾವನೆಗೆ, ಪತಂಜಲಿ ಫುಡ್ಸ್‌ ಲಿಮಿಟೆಡ್‌ನ ಆಡಳಿತ ಮಂಡಳಿಯು ಅನುಮೋದನೆ ನೀಡಿದೆ.

ಪಿಎಎಲ್‌ ಪ್ರಸ್ತುತ ಡೆಂಟಲ್‌ ಕೇರ್‌, ಸ್ಕಿನ್‌ ಕೇರ್‌, ಹೋಮ್ ಕೇರ್‌ ಮತ್ತು ಹೇರ್‌ ಕೇರ್‌ ವಿಭಾಗದಲ್ಲಿ ವಹಿವಾಟು ಹೊಂದಿದೆ. ಈ ಸ್ವಾಧೀನದಿಂದ ಕಂಪನಿಯ ಎಫ್‌ಎಂಸಿಜಿ ಉತ್ಪನ್ನಗಳ ವಿಭಾಗವು ಸದೃಢಗೊಳ್ಳಲಿದೆ. ಜೊತೆಗೆ, ವರಮಾನವು ಹೆಚ್ಚಲಿದೆ ಎಂದು ಪತಂಜಲಿ ಫುಡ್ಸ್‌ ಲಿಮಿಟೆಡ್‌ ತಿಳಿಸಿದೆ.

ಈ ಸ್ವಾಧೀನವು ಪಿಎಎಲ್‌ನ ಎಲ್ಲಾ ಆಸ್ತಿ, ಸಾಲ, ಉದ್ಯೋಗಿಗಳು, ವಿತರಣೆಯ ಜಾಲ, ಒಪ್ಪಂದ, ಪರವಾನಗಿಗಳನ್ನು ಒಳಗೊಂಡಿರುತ್ತದೆ. ಇದರ ವರ್ಗಾವಣೆಯ ಮೌಲ್ಯ ₹1,100 ಕೋಟಿ ಆಗಿದೆ. ಕಂಪನಿ ಮತ್ತು ಪಿಎಎಲ್‌ ನಡುವೆ ಇತರೆ ಷರತ್ತುಗಳೊಂದಿಗೆ ಶೇ 3ರಷ್ಟು ವಹಿವಾಟು ಆಧಾರಿತ ಶುಲ್ಕ ಪಾವತಿ ಒಪ್ಪಂದಕ್ಕೆ ಸಮ್ಮತಿಸಲಾಗಿದೆ ಎಂದು ತಿಳಿಸಿದೆ.

ADVERTISEMENT

ಈ ಸ್ವಾಧೀನವು ಪತಂಜಲಿ ಬ್ರ್ಯಾಂಡ್‌ನ ಎಫ್‌ಎಂಸಿಜಿ ಉತ್ಪನ್ನಗಳನ್ನು ಒಟ್ಟುಗೂಡಿಸಲಿದೆ. ಬ್ರ್ಯಾಂಡ್ ಇಕ್ವಿಟಿ, ಉತ್ಪನ್ನದ ನಾವೀನ್ಯ, ವೆಚ್ಚ ಇಳಿಕೆ, ಮೂಲ ಸೌಕರ್ಯ ಮತ್ತು ಕಾರ್ಯಾಚರಣೆಯ ದಕ್ಷತೆ ಹೆಚ್ಚಿಸಲಿದೆ. ಮಾರುಕಟ್ಟೆ ಮೇಲೂ ಸಕಾರಾತ್ಮಕ ಪರಿಣಾಮ ಬೀರಲಿದೆ. ಕಂಪನಿಯು ಷೇರು ಮಾರಾಟ ಪ್ರಕ್ರಿಯೆ (ಎಫ್‌ಪಿಒ) ಸಮಯದಲ್ಲಿ ತನ್ನ ಷೇರುದಾರರಿಗೆ ಬದ್ಧವಾಗಿ ಪ್ರಮುಖ ಎಫ್‌ಎಂಸಿಜಿ ಕಂಪನಿಯಾಗಿ ತನ್ನ ಸ್ಥಾನ ಉಳಿಸಿಕೊಳ್ಳಲಿದೆ ಎಂದು ತಿಳಿಸಿದೆ.

ಮಂಡಳಿಯ ಅನುಮೋದನೆಗೆ ಅನುಸಾರವಾಗಿ, ಕಂಪನಿಯು ಈಗ ಸ್ವಾಧೀನಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ಒಪ್ಪಂದಗಳನ್ನು ಕಾರ್ಯಗತಗೊಳಿಸಲು ಅಗತ್ಯ ಕ್ರಮವನ್ನು ಕೈಗೊಳ್ಳಲಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.