ನವದೆಹಲಿ: ಕಳೆದ ಎರಡು ವರ್ಷಗಳಲ್ಲಿ ಗೃಹ ಹಾಗೂ ರಿಯಲ್ ಎಸ್ಟೇಟ್ ವಲಯಕ್ಕೆ ಬ್ಯಾಂಕ್‌ಗಳು ನೀಡಿರುವ ಸಾಲದ ಪ್ರಮಾಣದಲ್ಲಿ ಏರಿಕೆಯಾಗಿದ್ದು, ₹10 ಲಕ್ಷ ಕೋಟಿಯಷ್ಟು ಸಾಲ ನೀಡಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ ವರದಿ ತಿಳಿಸಿದೆ.
2022ರ ಮಾರ್ಚ್ ಅಂತ್ಯಕ್ಕೆ ಗೃಹ ಸಾಲದ (ಆದ್ಯತಾ ವಲಯದ ಸಾಲ ಸೇರಿದಂತೆ) ಬಾಕಿಯು ₹17.26 ಲಕ್ಷ ಕೋಟಿ ಇತ್ತು. 2023ರಲ್ಲಿ ₹19.88 ಲಕ್ಷ ಕೋಟಿಗೆ ಮುಟ್ಟಿತ್ತು. ಪ್ರಸಕ್ತ ವರ್ಷದ ಮಾರ್ಚ್ ಅಂತ್ಯಕ್ಕೆ ₹27.22 ಲಕ್ಷ ಕೋಟಿ ಆಗಿದೆ ಎಂದು ಆರ್‌ಬಿಐನ 2024ರ ಮಾರ್ಚ್‌ನ ಬ್ಯಾಂಕ್ ಸಾಲದ ವಲಯವಾರು ಬೆಳವಣಿಗೆ ಕುರಿತ ವರದಿ ತಿಳಿಸಿದೆ.
2022ರ ಮಾರ್ಚ್ ಅಂತ್ಯದಲ್ಲಿ ₹2.97 ಲಕ್ಷ ಕೋಟಿ ಇದ್ದ ವಾಣಿಜ್ಯ ಉದ್ದೇಶದ ರಿಯಲ್ ಎಸ್ಟೇಟ್‌ನ ಸಾಲದ ಬಾಕಿಯು ಈ ವರ್ಷದ ಮಾರ್ಚ್ ಅಂತ್ಯಕ್ಕೆ ₹4.48 ಲಕ್ಷ ಕೋಟಿಗೆ ತಲುಪಿದೆ ಎಂದು ಹೇಳಿದೆ.
ಕಳೆದ ಎರಡು ವರ್ಷಗಳಲ್ಲಿ ಮನೆಗಳ ಖರೀದಿ ಮತ್ತು ಬೆಲೆಯಲ್ಲಿ ಏರಿಕೆಯಾಗಿದೆ ಎಂದು ಆಸ್ತಿ ಸಲಹಾ ತಜ್ಞರು ಹೇಳಿದ್ದಾರೆ.
‘ಗೃಹ ವಲಯದ ಎಲ್ಲಾ ವಿಭಾಗಗಳಲ್ಲೂ ಸಾಲ ನೀಡಿಕೆಯು ಉತ್ತಮ ಬೆಳವಣಿಗೆ ಕಂಡಿದೆ. ಮತ್ತೊಂದೆಡೆ ಸರ್ಕಾರ ನೀಡುತ್ತಿರುವ ಉತ್ತೇಜನದಿಂದಾಗಿ ಕೈಗೆಟಕುವ ಮನೆಗಳ ವಿಭಾಗದಲ್ಲಿ ನಿರೀಕ್ಷೆಗೂ ಮೀರಿ ಸಾಲ ನೀಡಿಕೆ ಪ್ರಮಾಣವು ಹೆಚ್ಚಳವಾಗಿದೆ’ ಎಂದು ಬ್ಯಾಂಕ್ ಆಫ್ ಬರೋಡಾದ ಅರ್ಥಶಾಸ್ತ್ರಜ್ಞ ಮದನ್ ಸಬ್ನವಿಸ್ ಹೇಳಿದ್ದಾರೆ.
ಕೋವಿಡ್ ಸಾಂಕ್ರಾಮಿಕದ ವೇಳೆ ಮನೆಗಳ ಖರೀದಿ ಇಳಿಕೆಯಾಗಿತ್ತು. ಆದರೆ, ಕಳೆದ ಎರಡು ವರ್ಷಗಳಲ್ಲಿ ಖರೀದಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಬಡ್ಡಿದರ ಹೆಚ್ಚಿರುವುದರಿಂದ ಗೃಹ ಸಾಲ ನೀಡಿಕೆಯು ಬೆಳವಣಿಗೆಯು ಶೇ 15ರಿಂದ 20ರಷ್ಟು ಇಳಿಕೆಯಾಗಬಹುದು’ ಎಂದು ತಿಳಿಸಿದ್ದಾರೆ.
ರಿಯಲ್ ಎಸ್ಟೇಟ್ ವಲಯ
ದೇಶದ ರಿಯಲ್ ಎಸ್ಟೇಟ್ ವಲಯದೊಟ್ಟಿಗೆ ಸಿಮೆಂಟ್, ಉಕ್ಕು ಸೇರಿ 200ಕ್ಕೂ ಹೆಚ್ಚು ಪೂರಕ ಕೈಗಾರಿಕೆಗಳು ಬೆಸೆದುಕೊಂಡಿವೆ. ಕಳೆದ ಎರಡು ವರ್ಷದಿಂದಲೂ ಈ ವಲಯಗಳಲ್ಲಿನ ಸರಕುಗಳಿಗೆ ಬೇಡಿಕೆ ಹೆಚ್ಚುತ್ತಿದೆ.
ರಿಯಲ್ ಎಸ್ಟೇಟ್ ವಲಯವು ರೇರಾ, ಜಿಎಸ್‌ಟಿ ಹಾಗೂ ನೋಟು ಅಮಾನ್ಯದಿಂದಾಗಿ ತೊಂದರೆಗೆ ಸಿಲುಕಿದೆ. ಬಹಳಷ್ಟು ಡೆವಲಪರ್‌ಗಳು ಗ್ರಾಹಕರಿಂದ ಮುಂಗಡ ಹಣ ಪಡೆದರೂ ನಿಗದಿತ ಅವಧಿಯಲ್ಲಿ ಪ್ರಾಜೆಕ್ಟ್‌ಗಳನ್ನು ಪೂರ್ಣಗೊಳಿಸುತ್ತಿಲ್ಲ. ಇದರಿಂದ ಈ ವಲಯದ ವಿಶ್ವಾಸಕ್ಕೆ ಪೆಟ್ಟು ಬಿದ್ದಿದೆ. ಆದರೂ, ಕೋವಿಡ್ ಅವಧಿಯ ಸ್ಥಿತಿಗಿಂತಲೂ ಚೇತರಿಕೆ ಕಂಡಿದೆ ಎಂದು ಮಾರುಕಟ್ಟೆ ತಜ್ಞರು ಗೇಳಿದ್ದಾರೆ.
2030ರ ವೇಳೆಗೆ ಭಾರತೀಯ ರಿಯಲ್ ಎಸ್ಟೇಟ್‌ನ ಗಾತ್ರವು ₹83 ಲಕ್ಷ ಕೋಟಿಗೆ ತಲುಪಲಿದೆ ಎಂದು ಅಂದಾಜಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.