ನವದೆಹಲಿ: ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು 2030ರ ಒಳಗಾಗಿ ಭಾರತದ ಮಾರುಕಟ್ಟೆಗೆ ಒಟ್ಟು ಐದು ಸ್ಪೋರ್ಟ್ಸ್ ಯುಟಿಲಿಟಿ ವಾಹನಗಳನ್ನು (ಎಸ್‌ಯುವಿ) ಬಿಡುಗಡೆ ಮಾಡುವ ಯೋಜನೆ ಇಟ್ಟುಕೊಂಡಿದೆ ಎಂದು ಕಂಪನಿಯ ಭಾರತದ ಅಧ್ಯಕ್ಷ ಟಕುಯಾ ಸುಮುರಾ ಹೇಳಿದ್ದಾರೆ.
ಕಂಪನಿಯು ‘ಎಲಿವೇಟ್’ ಕಾರನ್ನು ಸೋಮವಾರ ಬಿಡುಗಡೆ ಮಾಡುವ ಮೂಲಕ ಮಧ್ಯಮ ಗಾತ್ರದ ಎಸ್‌ಯುವಿ ವಿಭಾಗವನ್ನು ಪ್ರವೇಶಿಸಿದೆ. ಇದರ ಎಕ್ಸ್ ಷೋರೂಂ ಬೆಲೆ ₹10.99 ಲಕ್ಷದಿಂದ 15.99 ಲಕ್ಷದವರೆಗೆ ಇದೆ.
ಈ ಮಾದರಿಯು ಹುಂಡೈ ಕ್ರೆಟಾ, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ಕಿಯಾ ಸೆಲ್ಟೋಸ್ ಮತ್ತು ಟೊಯೋಟ ಅರ್ಬನ್ ಕ್ರ್ಯೂಸರ್ ಹೈರೈಡರ್ ಮಾದರಿಗಳಿಗೆ ಪೈಪೋಟಿ ನೀಡಲಿದೆ.
ಮಾರಾಟದ ದೃಷ್ಟಿಯಿಂದ ಎಸ್‌ಯುವಿ ವಿಭಾಗವು ಸದ್ಯ ಮುಂಚೂಣಿಯಲ್ಲಿದೆ. ಹೀಗಾಗಿ ಎಸ್‌ಯುವಿ ವಿಭಾಗದಲ್ಲಿ ಕಂಪನಿ ಇರಬೇಕಾದುದು ಬಹಳ ಮುಖ್ಯ ಎಂದು ಅವರು ಹೇಳಿದ್ದಾರೆ. ‘ಎಲಿವೇಟ್’ ಹೊಸ ಗ್ರಾಹಕರನ್ನು ಸೆಳೆಯುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.
ಎಲಿವೇಟ್ ಮಾದರಿಯು 1.5 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು 6–ಸ್ಪೀಡ್ ಮ್ಯಾನುಯಲ್ ಮತ್ತು 7 ಸ್ಪೀಡ್ ಸಿವಿಟಿ ಆಯ್ಕೆಗಳಲ್ಲಿ ಲಭ್ಯವಿದೆ ಎಂದು ಕಂಪನಿ ತಿಳಿಸಿದೆ.
ಪ್ರಯಾಣಿಕ ವಾಹನಗಳಲ್ಲಿ ಎಸ್‌ಯುವಿ ವಿಭಾಗದ ಪಾಲು 2022-23ನೇ ಹಣಕಾಸು ವರ್ಷದಲ್ಲಿ ಶೇ 43ರಷ್ಟು ಇದ್ದಿದ್ದು ಸದ್ಯ ಶೇ 48ಕ್ಕೆ ಏರಿಕೆ ಕಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.