ADVERTISEMENT

ಭಾರತೀಯ ಕುಟುಂಬಗಳ ಉಳಿತಾಯ ಕುಸಿತ, ಸಾಲ ದುಪ್ಪಟ್ಟು: ಎಸ್‌ಬಿಐನ ಸಂಶೋಧನಾ ವರದಿ

ಪಿಟಿಐ
Published 21 ಸೆಪ್ಟೆಂಬರ್ 2023, 14:29 IST
Last Updated 21 ಸೆಪ್ಟೆಂಬರ್ 2023, 14:29 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಮುಂಬೈ: ಭಾರತದ ಕುಟುಂಬಗಳ ಉಳಿತಾಯವು 2021–22ಕ್ಕೆ ಹೋಲಿಸಿದರೆ 2022–23ನೇ ಹಣಕಾಸು ವರ್ಷದಲ್ಲಿ ಶೇ 55ರಷ್ಟು ಕುಸಿತ ಕಂಡಿದ್ದು, ಜಿಡಿಪಿಯ ಶೇ 5.1ಕ್ಕೆ ಇಳಿಕೆಯಾಗಿದೆ. ಆದರೆ, ಸಾಲದ ಪ್ರಮಾಣವು ಎರಡು ಪಟ್ಟು ಏರಿಕೆ ಕಂಡಿದ್ದು ₹15.6 ಲಕ್ಷ ಕೋಟಿಯಷ್ಟು ಆಗಿದೆ ಎಂದು ಎಸ್‌ಬಿಐನ ಸಂಶೋಧನಾ ವರದಿ ತಿಳಿಸಿದೆ.

2021–22ರಲ್ಲಿ ಕುಟುಂಬಗಳ ಉಳಿತಾಯದ ಪ್ರಮಾಣವು ಶೇ 11.5ರಷ್ಟು ಇತ್ತು. ಇದು 2022–23ರಲ್ಲಿ ಶೇ 5.1ಕ್ಕೆ ಇಳಿಕೆ ಕಂಡಿದ್ದು, 50 ವರ್ಷಗಳ ಕನಿಷ್ಠ ಮಟ್ಟವಾಗಿದೆ ಎಂದು ಹೇಳಿದೆ. 2019–20ರಲ್ಲಿ ಕುಟುಂಬಗಳ ಉಳಿತಾಯದ ಪ್ರಮಾಣವು ಶೇ 7.6ರಷ್ಟು ಇತ್ತು.

ADVERTISEMENT

ಎಸ್‌ಬಿಐನ ಸಂಶೋಧನಾ ವರದಿಯ ಪ್ರಕಾರ, ಕುಟುಂಬದ ಉಳಿತಾಯದ ಪ್ರಮಾಣ ಕಡಿಮೆ ಆಗಿದ್ದು, ಭೌತಿಕ ಸ್ವರೂಪದ ಸ್ವತ್ತು (ರಿಯಲ್‌ ಎಸ್ಟೇಟ್‌, ಚಿನ್ನ ಇತ್ಯಾದಿ) ಖರೀದಿ ಹೆಚ್ಚಾಗುತ್ತಿದೆ. ಕುಟುಂಬದ ಸಾಲದ ಮೊತ್ತವು ₹8.2 ಲಕ್ಷ ಕೋಟಿಯಷ್ಟು ಹೆಚ್ಚಾಗಿದ್ದು, ಇದರಲ್ಲಿ ವಾಣಿಜ್ಯ ಬ್ಯಾಂಕ್‌ಗಳಿಂದಲೇ ₹7.1 ಲಕ್ಷ ಕೋಟಿಯಷ್ಟು ಸಾಲ ಪಡೆಯಲಾಗಿದೆ.

ಎಸ್‌ಬಿಐ ಸಂಶೋಧನಾ ಘಟಕದ ಮುಖ್ಯ ಆರ್ಥಿಕ ಸಲಹೆಗಾರ ಸೌಮ್ಯ ಕಾಂತಿ ಘೋಷ್‌ ಪ್ರಕಾರ, ಕೋವಿಡ್‌ ಸಾಂಕ್ರಾಮಿಕದ ನಂತರ ಕುಟುಂಬದ ಸಾಲವು ₹8.2 ಲಕ್ಷ ಕೋಟಿಯಷ್ಟು ಏರಿಕೆ ಕಂಡಿದ್ದರೆ, ಉಳಿತಾಯವು ₹6.7 ಲಕ್ಷ ಕೋಟಿಯಷ್ಟು ಹೆಚ್ಚಾಗಿದೆ.

ಎರಡು ವರ್ಷಗಳಲ್ಲಿ ಕುಟುಂಬಗಳು ಪಡೆದಿರುವ ಶೇ 55ರಷ್ಟು ರಿಟೇಲ್ ಸಾಲವನ್ನು ಮನೆ ಖರೀದಿಸಲು, ಶಿಕ್ಷಣದ ವೆಚ್ಚ ಭರಿಸಲು ಮತ್ತು ವಾಹನ ಖರೀದಿಸುವ ಉದ್ದೇಶಗಳಿಗೆ ಬಳಸಲಾಗಿದೆ.

ಬಡ್ಡಿದರವು ಕಡಿಮೆ ಪ್ರಮಾಣದಲ್ಲಿ ಇದ್ದಿದ್ದೇ ಕುಟುಂಬಗಳು ಈ ಪ್ರಮಾಣದಲ್ಲಿ ರಿಟೇಲ್‌ ಸಾಲ ಪಡೆಯಲು ಕಾರಣ. ಇದರಿಂದಾಗಿ ಕುಟುಂಬಗಳು ಉಳಿತಾಯ ಮಾಡುವ ಬದಲಾಗಿ ಆಸ್ತಿ, ಮನೆ ಖರೀದಿಯಂತಹ ಭೌತಿಕ ಸ್ವರೂಪದ ಉಳಿತಾಯದ ಕಡೆಗೆ ಹೆಚ್ಚು ಆಸಕ್ತಿ ತೋರಿವೆ ಎಂದು ಘೋಷ್‌ ಹೇಳಿದ್ದಾರೆ.

ಆಸ್ತಿ ಖರೀದಿಸುವ ಕಡೆಗೆ ಗಮನ ಹೆಚ್ಚಾಗಿರುವುದರಿಂದ ರಿಯಲ್‌ ಎಸ್ಟೇಟ್‌ ವಲಯದ ಚೇತರಿಕೆ ಆಗಿರುವುದಲ್ಲದೆ ಆಸ್ತಿಗಳ ಬೆಲೆಯೂ ಹೆಚ್ಚಾಗುವಂತಾಗಿದೆ ಎಂದು ಘೋಷ್‌ ತಿಳಿಸಿದ್ಧಾರೆ.

ಗೃಹ ಸಾಲ ಮತ್ತು ಭೌತಿಕ ಸ್ವತ್ತುಗಳ ಮೂಲಕ ಕುಟುಂಬವು ಮಾಡುವ ಉಳಿತಾಯದ ನಡುವೆ ದೀರ್ಘಾವಧಿಯ ಸಂಬಂಧ ಇದೆ. ಕುಟುಂಬದ ನಿವ್ವಳ ಉಳಿತಾಯದಲ್ಲಿ ಇಳಿಕೆ ಕಂಡಿರುವ ಜೊತೆಗೇ ಭೌತಿಕ ಸ್ವತ್ತು ಖರೀದಿಸುವ ಮೂಲಕ ಮಾಡುವ ಉಳಿತಾಯವು ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.