ಭಾರತದಂತಹ ಬೃಹತ್ ದೇಶದಲ್ಲಿ ಜನಸಂಖ್ಯೆ ಎಷ್ಟು ವೇಗವಾಗಿ ಬೆಳೆಯುತ್ತಿದೆಯೊ ಅದಕ್ಕೆ ತಕ್ಕಂತೆ ಸ್ವಂತ ಮನೆ ಹೊಂದಬೇಕೆಂದು ಹಂಬಲಿಸುವವರ ಸಂಖ್ಯೆಯೂ ಹೆಚ್ಚಾಗುತ್ತಾ ಹೋಗುತ್ತಿದೆ. ಜನರು ಆಸೆಪಡುವುದರಲ್ಲೇನೂ ಅಚ್ಚರಿಯಿಲ್ಲ. ಆದರೆ, ಅದಕ್ಕೆ ತಕ್ಕಂತೆ ಆಯಾ ಪ್ರದೇಶದಲ್ಲಿನ ಬೇಡಿಕೆ-ಪೂರೈಕೆ, ಬ್ಯಾಂಕ್‍ಗಳು ಸಾಲದ ಮೇಲೆ ವಿಧಿಸುವ ಬಡ್ಡಿ ಇತ್ಯಾದಿ ವಿಚಾರಗಳು ಮನೆ ಕಟ್ಟಿಸುವವರಿಗೆ - ಖರೀದಿಸುವವರಿಗೆ ಸದಾ ಸವಾಲಾಗಿ ಕಾಡುತ್ತಿರುತ್ತವೆ. ಇದಲ್ಲದೆ, ಸ್ವಂತ ಮನೆ ಹೊಂದಬೇಕೆಂಬ ಎಲ್ಲರ ಆಕಾಂಕ್ಷೆಗೆ ಅವರವರ ಆರ್ಥಿಕ ಸಾಮರ್ಥ್ಯ ಅಥವಾ ಸಾಲಪಡೆದು ತಮ್ಮ ಕನಸು ನನಸಾಗಿಸುವ ಕ್ಷಮತೆಯೇ ಎಲ್ಲದಕ್ಕಿಂತ ಹೆಚ್ಚು ಮಹತ್ವ ಪಡೆಯುತ್ತದೆ.
ಇಂತಹ ಸಂದರ್ಭದಲ್ಲಿ ಮನೆ ಸಾಲ ಪಡೆದುಕೊಂಡವರು ತಮ್ಮ ಹಣಕಾಸಿನ ಉತ್ತಮ ನಿರ್ವಹಣೆಯ ಭಾಗವಾಗಿ ಸಾಲದ ಪೂರ್ವ ಪಾವತಿಗೂ ಅವಕಾಶ ಇರಿಸಿಕೊಂಡು ಸಾಲ ಪಡೆದಿರುತ್ತಾರೆ. ಗೃಹ ಸಾಲಗಳು ಹದಿನೈದು ಇಪ್ಪತ್ತು ವರ್ಷಗಳ ದೀರ್ಘಾವಧಿ ಸಾಲವಾಗಿರುತ್ತವೆ. ಹೀಗಾಗಿ ಫ್ಲೋಟಿಂಗ್ ರೇಟ್ (ಬದಲಾಗುವ ಬಡ್ಡಿ ದರ) ಆಧರಿಸಿದ ಬಡ್ಡಿ ನಿಗದಿಪಡಿಸಲಾಗಿರುತ್ತದೆ. ಗ್ರಾಹಕರ ಸಾಲದ ಮೇಲಿನ ಬಡ್ಡಿಯು ಬಾಹ್ಯ ಸಂಗತಿಗಳ ಆಧಾರದ ಮೇಲೆ ನಿರ್ಧಾರವಾಗಬೇಕೆನ್ನುವ ಇತ್ತೀಚಿನ ಆರ್‌ಬಿಐನ ನಿರ್ದೇಶನ ಗ್ರಾಹಕರ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಅಕ್ಟೋಬರ್ ತಿಂಗಳಿನಿಂದ ಅನ್ವಯವಾಗುವಂತೆ ಎಂಸಿಎಲ್‌ಆರ್ ಆಧರಿತ ಬಡ್ಡಿ ದರದಿಂದ ಬಾಹ್ಯ ಸಂಗತಿಗಳನ್ನು ಆಧರಿಸಿ ಬಡ್ಡಿ ನಿರ್ಣಯವಾಗಲಿದೆ. ಇದರ ಪರಿಣಾಮವಾಗಿ ರೆಪೊ ದರ ಬದಲಾದಂತೆ ಗ್ರಾಹಕರು ಕಟ್ಟಬೇಕಾಗುವ ಬಡ್ಡಿ ಮೊತ್ತವೂ ವ್ಯತ್ಯಾಸಗೊಳ್ಳಲಿದೆ.
ಗೃಹ ಸಾಲದ ಭದ್ರತೆಗೆ ವಿಮೆ
ಎಲ್ಲ ಬ್ಯಾಂಕ್‍ಗಳು ತಾವು ಕೊಟ್ಟ ಸಾಲದ ಭದ್ರತೆಗಾಗಿ ಗೃಹ ಸಾಲ ವಿತರಣೆಯ ಸಂದರ್ಭದಲ್ಲಿ ಮನೆ ಕೊಳ್ಳುವ ವ್ಯಕ್ತಿಗಳಿಂದ ವಿಮೆ ಮಾಡಿಸಿಕೊಳ್ಳುವ ಪ್ರಸ್ತಾಪ ಸಾಮಾನ್ಯವಾಗಿ ಇರಿಸುತ್ತವೆ. ಸಾಲಪಡೆದ ವ್ಯಕ್ತಿ ದುರದೃಷ್ಟವಶಾತ್ ಮೃತನಾದ ಸಂದರ್ಭದಲ್ಲಿ ಬ್ಯಾಂಕ್‍ಗಳೇ ವಿಮಾ ಕಂಪನಿಗಳಿಂದ ಸಾಲದ ಮೊತ್ತವನ್ನು ಭರಿಸಿಕೊಳ್ಳುತ್ತವೆ. ಹೀಗಾಗಿ ಸಾಲಪಡೆದ ವ್ಯಕ್ತಿಯ ಸಂಬಂಧಿಕರು, ಬಾಕಿ ಉಳಿಸಿಕೊಂಡ ಸಾಲದ ಮೊತ್ತಕ್ಕೆ ಬಾಧ್ಯಸ್ಥರಾಗಿರುವುದಿಲ್ಲ. ಆದರೆ, ಇಲ್ಲಿ ಎಲ್ಲರೂ ಅರಿಯಬೇಕಾದ ವಿಚಾರ ಏನೆಂದರೆ, ವಿಮಾ ಸೌಲಭ್ಯ ಗ್ರಾಹಕರ ಕೋರಿಕೆಯ ಮೇಲೆ ಇರಬೇಕೆ ಹೊರತು, ಅವರನ್ನು ಬಲವಂತ ಮಾಡಿ ಪಾಲಿಸಿಗಳನ್ನು ಮಾರಾಟ ಮಾಡುವಂತಿಲ್ಲ ಎಂಬುದು ಭಾರತೀಯ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಐಆರ್‌ಡಿಎಇ) ನಿಯಮ. ಹೀಗಾಗಿ ಸಾಲದ ಮೇಲಿನ ವಿಮೆ ಐಚ್ಛಿಕವಾಗಿರುತ್ತದೆ.
ಆದರೆ, ಇಂದಿನ ಜೀವನ ಶೈಲಿ ಹಾಗೂ ಬದುಕಿನ ವಾತಾವರಣವನ್ನು ಅವಲೋಕಿಸಿದಾಗ ಯಾವುದೇ ರೀತಿಯ ದುರ್ಘಟನೆಗಳನ್ನು ಅಲ್ಲಗಳೆಯುವಂತಿಲ್ಲ. ಇದು ಸಾಲ ಪಡೆದ ವ್ಯಕ್ತಿಗಳಿಗಂತೂ ಹೆಚ್ಚಾಗಿ ಕಾಡುವ ವಿಚಾರ. ಹೀಗಾಗಿ ಸಾಲ ಪಡೆದ ಯಾವುದೇ ವ್ಯಕ್ತಿ ಸಾಲದ ಮೊತ್ತಕ್ಕೆ ಸಮನಾಗಿ ಅಥವಾ ಅದಕ್ಕಿಂತ ಹೆಚ್ಚುವರಿ ಮೊತ್ತಕ್ಕೆ ಟರ್ಮ್ ಇನ್ಶುರೆನ್ಸ್ ಮಾಡಿಸಿಕೊಳ್ಳುವುದು ಸುರಕ್ಷಿತ. ಇದರಿಂದ, ದುರಂತ ಘಟಿಸಿದ ಸಂದರ್ಭದಲ್ಲಿ ಪರಿವಾರದ ಸದಸ್ಯರಿಗೆ ಕಾಡಬಹುದಾದ ಸಂಭಾವ್ಯ ಆರ್ಥಿಕ ಸಂಕಷ್ಟವನ್ನು ನಿವಾರಿಸಬಹುದು. ಒಂದು ವೇಳೆ ನಿಮ್ಮಲ್ಲಿ ಈಗಾಗಲೇ ಇಂತಹ ಪಾಲಿಸಿ ಇದ್ದಲ್ಲಿ, ಸಾಲದ ಮೊತ್ತಕ್ಕೆ ಸಮನಾಗಿ ಹೆಚ್ಚುವರಿ ಮೊತ್ತವನ್ನು ಟಾಪ್ ಅಪ್ ಮಾಡಿಸಿಕೊಳ್ಳಬಹುದು. ಸಾಲ ಸಂಪೂರ್ಣ ಪಾವತಿಯಾದ ನಂತರವೂ ಅಗತ್ಯಕ್ಕೆ ತಕ್ಕಂತೆ ಮುಂದುವರಿಸಬಹುದು.
ಒಂದುವೇಳೆ ನೀವು ಸಾಲ ಕೊಟ್ಟ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯ ಸಲಹೆಯ ಮೇರೆಗೆ ವಿಮಾ ಸೌಲಭ್ಯ ಪಡೆದಿದ್ದರೂ, ಸಾಲದ ಪೂರ್ಣ ಅವಧಿಗೆ ಮುಂಗಡವಾಗಿ ವಿಮಾ ಕಂತುಗಳನ್ನು ಗ್ರಾಹಕರಿಂದ ಕಟ್ಟಿಸಿಕೊಳ್ಳುತ್ತವೆ. ಸಾಲವನ್ನು ನಿಗದಿತ ಅವಧಿಗಿಂತ ಮೊದಲೇ ಮರು ಪಾವತಿ ಮಾಡುವ ಅವಕಾಶವನ್ನು ನೀವು ಬಳಸಿಕೊಂಡರೆ ಹೆಚ್ಚುವರಿಯಾಗಿ ಪಾವತಿಸಿದ ಮೊತ್ತವನ್ನು ಗ್ರಾಹಕರಿಗೆ ಹಿಂದಿರುಗಿಸಲಾಗುತ್ತದೆ. ಹೀಗಾಗಿ ಸಾಲ ಪಡೆಯುವ ಸಂದರ್ಭದಲ್ಲಿ ವಿಮೆಗೆ ಸಂಬಂಧಿಸಿದಂತೆ ಅಗತ್ಯ ಮಾಹಿತಿಗಳನ್ನು ಮನನ ಮಾಡಿ ವ್ಯವಹರಿಸುವುದು ಒಳಿತು.
ಪೂರ್ವ ಪಾವತಿ - ತೆರಿಗೆ ಲಾಭ ಇದೆಯೆ ?
ಗೃಹ ಸಾಲದ ಸಂಪೂರ್ಣ ಪಾವತಿ ಅಥವಾ ಪೂರ್ವ ಪಾವತಿಗಿರುವ ಅವಕಾಶವನ್ನು ಇಂದು ಎಲ್ಲ ಬ್ಯಾಂಕ್‍ಗಳು ಒದಗಿಸಿಕೊಡುತ್ತವೆ. ಇದಕ್ಕಾಗಿ ಯಾವುದೇ ಶುಲ್ಕ ವಿಧಿಸುವಂತಿಲ್ಲ ಎನ್ನುವ ನಿಯಮವೂ ಇದೆ. ಗ್ರಾಹಕನಾದವನಿಗೆ ಇಂತಹ ಸಂದರ್ಭದಲ್ಲಿ ಉದ್ಭವಿಸುವ ಪ್ರಶ್ನೆ ಎಂದರೆ, ಪೂರ್ವ ಪಾವತಿಯ ಮೇಲೆ ಹೆಚ್ಚುವರಿ ತೆರಿಗೆ ರಿಯಾಯಿತಿ ಇದೆಯೇ ಇಲ್ಲವೇ ಎನ್ನುವುದು.
ಆದಾಯ ತೆರಿಗೆ ನಿಯಮದಡಿ ಸಾಲದ ಅಸಲು ಮೊತ್ತಕ್ಕೆ ಸಂಬಂಧಪಟ್ಟಂತೆ ಸೆಕ್ಷನ್ ‘80ಸಿ’ಯಡಿ ವಾರ್ಷಿಕವಾಗಿ ಒಟ್ಟು ₹ 1.50 ಲಕ್ಷದಷ್ಟು ಮೊತ್ತದ ಮೇಲಷ್ಟೇ ತೆರಿಗೆ ವಿನಾಯ್ತಿ ಇದೆ. ಈ ಮೊತ್ತದಲ್ಲಿ ಇತರ ಉಳಿತಾಯಗಳೂ ಒಳಗೊಳ್ಳುತ್ತವೆ. ಹೀಗಾಗಿ ಪೂರ್ವ ಪಾವತಿಯೂ ಅಸಲು ಮೊತ್ತದ ಭಾಗವಾಗಿರುವುದರಿಂದ ಯಾವುದೇ ಹೆಚ್ಚುವರಿ ತೆರಿಗೆ ರಿಯಾಯಿತಿ ಇರುವುದಿಲ್ಲ. ಇಷ್ಟೇ ಅಲ್ಲದೆ ವರ್ಷಕ್ಕೆ ₹ 2 ಲಕ್ಷದಷ್ಟು ಬಡ್ಡಿ ಮೊತ್ತವನ್ನು ನಿಮ್ಮ ಅನ್ಯ ಆದಾಯದೊಡನೆ ಸರಿದೂಗಿಸಿಕೊಳ್ಳುವ ಅವಕಾಶ ಆದಾಯ ತೆರಿಗೆ ಸೆಕ್ಷನ್ 24 ರಡಿ ಲಭ್ಯವಿದೆ. ಹೀಗಾಗಿ ಪೂರ್ವ ಪಾವತಿ ಯಾವಾಗ ಮಾಡಬೇಕೆನ್ನುವುದನ್ನು ಯೋಚಿಸಿ ನಿರ್ಧರಿಸಬೇಕಾದ ವಿಚಾರವಾಗಿದೆ.
ಪೂರ್ವ ಪಾವತಿ ಯಾವಾಗ ಸಮಂಜಸ ?
1. ಸಾಲ ಪಡೆದ ಆದ್ಯ ಹಂತದಲ್ಲಿ ಇಎಂಐ ಮೊತ್ತದಲ್ಲಿ ಬಡ್ಡಿಯ ಪ್ರಮಾಣ ಹೆಚ್ಚಿರುತ್ತದೆ ಹಾಗೂ ಅಸಲು ಮೊತ್ತ ಕಡಿಮೆ ಇರುತ್ತದೆ. ಹೀಗಾಗಿ ಸಾಲ ಪಡೆದವರು ತಮ್ಮ ಆರ್ಥಿಕ ಕ್ಷಮತೆಯನ್ನು ನೋಡಿಕೊಂಡು ಆರಂಭದ ಐದು ವರ್ಷಗಳಲ್ಲೇ ಪೂರ್ವ ಪಾವತಿಯ ಅವಕಾಶ ಬಳಸಿಕೊಳ್ಳುವುದು ಒಳಿತು.
2. ಸಾಲದ ಅವಧಿಯ ಕೊನೆಯ ಹಂತದಲ್ಲಿ ಪೂರ್ವ ಪಾವತಿ ಅಷ್ಟೊಂದು ಲಾಭ ನೀಡದು. ಕಾರಣ ಸಣ್ಣ ಪ್ರಮಾಣದ ಬಡ್ಡಿಯನ್ನಷ್ಟೇ ಸಾಲ ಪಡೆದ ವ್ಯಕ್ತಿ ಉಳಿತಾಯ ಮಾಡಬಲ್ಲ. ಆದರೆ ಇತರ ಕೆಲವು ಅವಕಾಶಗಳನ್ನು ತ್ಯಜಿಸಬೇಕಾಗುತ್ತದೆ. ಉದಾಹರಣೆಗೆ, ಸಾಲದ ಪೂರ್ವ ಪಾವತಿ ₹ 1.50 ಲಕ್ಷಕ್ಕಿಂತ (ಸೆಕ್ಷನ್ 80 ಸಿ) ಹೆಚ್ಚಿದ್ದಾಗ, ಯಾವುದೇ ತೆರಿಗೆ ಲಾಭವಿಲ್ಲ.
3. ನಿಮ್ಮ ಹೆಚ್ಚುವರಿ ಹಣಕ್ಕೆ ಪರ್ಯಾಯ ಆದಾಯ ಮಾರ್ಗವಿದ್ದರೆ ಹಾಗೂ ಗೃಹ ಸಾಲದ ಬಡ್ಡಿ ದರಕ್ಕಿಂತ ಅಧಿಕ ಲಾಭ ನೀಡುವಂತಿದ್ದರೆ ಪೂರ್ವ ಪಾವತಿ ಮಾಡದೆ ಹೆಚ್ಚುವರಿ ಲಾಭ ನೀಡುವ ಅವಕಾಶಗಳನ್ನು ಉಪಯೋಗಿಸಿ.
4. ನಿಮ್ಮಲ್ಲಿ ಗೃಹ ಸಾಲ ಹಾಗೂ ವಾಹನ ಸಾಲ ಎರಡೂ ಇದ್ದರೆ ಯಾವುದನ್ನು ಮೊದಲು ತೀರಿಸಬೇಕೆನ್ನುವುದನ್ನು ನೀವು ಕಟ್ಟುವ ಸಾಲದ ಬಡ್ಡಿ ದರದ ಆಧಾರದ ಮೇಲೆ ನಿರ್ಧರಿಸಿ. ಹೆಚ್ಚು ಬಡ್ಡಿ ಹೊರೆ ಇರುವ ವಾಹನ ಸಾಲವನ್ನು ಮೊದಲು ತೀರಿಸುವುದಕ್ಕೆ ಆದ್ಯತೆ ನೀಡಿ.
5. ಕೇವಲ ಸಾಲದ ಮೇಲಿನ ಬಡ್ಡಿ ಉಳಿತಾಯದ ಏಕೈಕ ಧೋರಣೆಯಲ್ಲದೆ, ನಮ್ಮ ತುರ್ತು ಅಗತ್ಯಕ್ಕಾಗಿ ಒಂದಿಷ್ಟು ಆಪತ್ಕಾಲದ ನಿಧಿ ಇರಿಸುವುದು ಒಳಿತು. ಅದು ಹೆಚ್ಚಾಗಿ ಅನಿರೀಕ್ಷಿತವಾಗಿ ಬರುವ ಆರ್ಥಿಕ ಸಮಸ್ಯೆಗೆ ಪರಿಹಾರ ನೀಡುತ್ತದೆ.
6. ಸಾಲದ ಪೂರ್ವ ಪಾವತಿಗೂ ಮುನ್ನ ನಿಮ್ಮ ಮುಂದಿನ ಆದಾಯ ಅಥವಾ ಆರ್ಥಿಕ ಚಟುವಟಿಕೆಗಳ ಬಗ್ಗೆ ಸಮರ್ಪಕವಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ. ಪೂರ್ವ ಪಾವತಿಯ ತರಾತುರಿಯಲ್ಲಿ ಮಕ್ಕಳ ಶಿಕ್ಷಣ, ಅಗತ್ಯವಾಗಿ ವ್ಯಯಿಸಬೇಕಾದ ಖರ್ಚುಗಳ ಬಗ್ಗೆ ನಿರ್ಲಕ್ಷ್ಯ ಬೇಡ.
7. ಷೇರು ಮಾರುಕಟ್ಟೆಯ ಉತ್ತಮ ಅವಕಾಶಗಳನ್ನು ನೋಡಿಕೊಂಡು ಮ್ಯೂಚುವಲ್ ಫಂಡ್ ಅಥವಾ ಪ್ರಮುಖ ಕಂಪನಿಗಳಲ್ಲೂ ಹೂಡಿಕೆ ಮಾಡುವುದು ತಪ್ಪಲ್ಲ. ಕಾರಣ, ನೀವು ಹೂಡುವ ಹಣ ದೀರ್ಘಾವಧಿಯಲ್ಲಿ ಉಳಿತಾಯ ಮಾಡಬಹುದಾದ ಸಾಲದ ಬಡ್ಡಿಗಿಂತ ಹೆಚ್ಚಿನ ಲಾಭ ಕೊಡಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.