ನವದೆಹಲಿ: ಮಂದಗತಿಯ ಆರ್ಥಿಕತೆಗೆ ಚೇತರಿಕೆ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರ, ಗೃಹ, ವಾಹನ, ಶಿಕ್ಷಣ ಮತ್ತು ವೈಯಕ್ತಿಕ ಸಾಲಗಳನ್ನು ಕಡಿಮೆ ಬಡ್ಡಿ ದರಕ್ಕೆ ತ್ವರಿತವಾಗಿ ನೀಡಲು ಬ್ಯಾಂಕ್‌ಗಳಿಗೆ ಸೂಚಿಸಿದೆ.
ರಿಟೇಲ್ ಸಾಲದ ವಹಿವಾಟನ್ನು ವಿಸ್ತರಿಸಲು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಒಂದು ಗಂಟೆಗಿಂತ ಕಡಿಮೆ ಅವಧಿಯಲ್ಲಿ ಸಾಲಕ್ಕೆ ಅನುಮೋದನೆ ನೀಡುವ ಅಂತರ್ಜಾಲ ತಾಣದ ಸೌಲಭ್ಯವನ್ನು ಬಳಸಿಕೊಳ್ಳಲು ಮುಂದಾಗಿವೆ.
ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (ಎಂಎಸ್‌ಎಂಇ) ₹ 1 ಕೋಟಿವರೆಗಿನ ಸಾಲವನ್ನು ಒಂದು ಗಂಟೆಯ ಅವಧಿ ಒಳಗೆ ಮಂಜೂರು ಮಾಡಲು ಕಳೆದ ವರ್ಷ ಆರಂಭಿಸಿದ್ದ psbloansin59minutes ಅಂತರ್ಜಾಲ ತಾಣವನ್ನು ಗೃಹ, ವಾಹನ ಮತ್ತಿತರ ಸಾಲ ಮಂಜೂರಾತಿಗೂ ಬಳಸಿಕೊಳ್ಳಲು ಬ್ಯಾಂಕ್‌ಗಳು ಮುಂದಾಗಿವೆ. ಈ ಇಂಟರ್‌ನೆಟ್ ತಾಣದಲ್ಲಿ ರಿಟೇಲ್ ಸಾಲಗಳಿಗೆ ಒಂದು ಗಂಟೆಯ ಅವಧಿಯೊಳಗೆ ತಾತ್ವಿಕ ಅನುಮೋದನೆ ನೀಡಲು ಸಾಧ್ಯವಾಗಲಿದೆ. ಈ ಸೌಲಭ್ಯದಡಿ ಸಾಲ ಮಂಜೂರಾತಿಯ ಗರಿಷ್ಠ ಮಿತಿಯನ್ನು ₹ 5 ಕೋಟಿಗೆ ವಿಸ್ತರಿಸಲೂ ಕೆಲ ಬ್ಯಾಂಕ್‌ಗಳು ನಿರ್ಧರಿಸಿವೆ.
ಒಬಿಸಿ ಕೊಡುಗೆ: ಸರ್ಕಾರಿ ಸ್ವಾಮ್ಯದ ಒರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್, ರೆಪೊ ದರ ಆಧರಿಸಿದ ಶೇ 8.35 ಮತ್ತು ಶೇ 8.75ರಿಂದ ಆರಂಭವಾಗುವ ಗೃಹ ಮತ್ತು ವಾಹನ ಸಾಲಗಳನ್ನು ಪರಿಚಯಿಸಿದೆ.
ಎಸ್‌ಬಿಐ: ಅಗ್ಗದದರದಲ್ಲಿ ಗೃಹಸಾಲ
ನವದೆಹಲಿ (ಪಿಟಿಐ): ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ), ಹಬ್ಬದ ದಿನಗಳಿಗಾಗಿ ಅಗ್ಗದ ಬಡ್ಡಿ ದರದಲ್ಲಿ ಗೃಹ ಮತ್ತು ವಾಹನ ಖರೀದಿ ಸಾಲ ಒದಗಿಸುವುದಾಗಿ ಪ್ರಕಟಿಸಿದೆ.
ಈ ಅಗ್ಗದ ಬಡ್ಡಿ ದರಗಳಿಗೆ ಹೆಚ್ಚುವರಿಯಾಗಿ ಸಾಲ ವಿತರಣಾ ಶುಲ್ಕ ವಿನಾಯ್ತಿ, ಬಡ್ಡಿ ದರ ಹೆಚ್ಚಳಗೊಳ್ಳದ ಸೌಲಭ್ಯ ಮತ್ತು ನಿಯಮಿತವಾಗಿ ಸಾಲ ಮರುಪಾವತಿ ಮಾಡಿದ ಗ್ರಾಹಕರಿಗೆ ಸುಲಭವಾಗಿ ಮರು ಸಾಲ ಮಂಜೂರು ಮಾಡಲಿದೆ.
ಇತರ ಬ್ಯಾಂಕ್‌ಗಳೂ ಇಂತಹ ಅಗ್ಗದ ದರದ ಸಾಲ ಸೌಲಭ್ಯ ಪ್ರಕಟಿಸುವ ಸಾಧ್ಯತೆ ಇದೆ. ಈ ಹಬ್ಬದ
ವಿಶೇಷ ಕೊಡುಗೆಯ ನಿರ್ದಿಷ್ಟ ಸಮಯವನ್ನು ಎಸ್‌ಬಿಐ ಪ್ರಕಟಿಸಿಲ್ಲ.
ಗೃಹ ಸಾಲ: ಬ್ಯಾಂಕ್ ಸದ್ಯಕ್ಕೆ, ರೆಪೊ ದರ ಆಧರಿಸಿದ ಅಗ್ಗದ ಗೃಹ ಸಾಲವನ್ನು ಶೇ 8.05ರ ಬಡ್ಡಿ ದರದಲ್ಲಿ ಒದಗಿಸುತ್ತಿದೆ. ಈ ದರವು ಸೆಪ್ಟೆಂಬರ್ 1ರಿಂದ ಹಾಲಿ ಮತ್ತು ಹೊಸ ಸಾಲಗಳಿಗೆ ಅನ್ವಯಿಸಲಿದೆ ಎಂದು ಬ್ಯಾಂಕ್ ತಿಳಿಸಿದೆ.
ಹಬ್ಬದ ದಿನಗಳಲ್ಲಿನ ಕಾರ್ ಖರೀದಿ ಸಂದರ್ಭದಲ್ಲಿ ಸಾಲ ಮಂಜೂರು ಮಾಡುವುದರ ಶುಲ್ಕ ವಿಧಿಸುವುದಿಲ್ಲ. ಶೇ 8.70ರಿಂದ ಬಡ್ಡಿ ದರ ಆರಂಭವಾಗಲಿದೆ. ನಂತರದ ದಿನಗಳಲ್ಲಿ ಈ ಬಡ್ಡಿ ದರ ಏರಿಳಿತ ಕಾಣುವುದಿಲ್ಲ. ಬ್ಯಾಂಕ್‌ನ ಯೋನೊ (YONO) ಆ್ಯಪ್ ಅಥವಾ ಅಂತರ್ಜಾಲ ತಾಣದ ಮೂಲಕ ಕಾರ್ ಖರೀದಿ ಸಾಲಕ್ಕೆ ಅರ್ಜಿ ಸಲ್ಲಿಸುವವರಿಗೆ ಬಡ್ಡಿ ದರದಲ್ಲಿ ಶೇ 0.25ರಷ್ಟು ವಿನಾಯ್ತಿ ನೀಡಲಾಗುವುದು. ವೇತನದಾರರಿಗೆ ಕಾರ್ ಖರೀದಿಯಲ್ಲಿನ ರಸ್ತೆ ತೆರಿಗೆ, ವಿಮೆ, ನೋಂದಣಿ ಶುಲ್ಕ ಒಳಗೊಂಡ ಒಟ್ಟಾರೆ ವೆಚ್ಚದ ಶೇ 90ರಷ್ಟು ಸಾಲ ಒದಗಿಸಲಾಗುವುದು ಎಂದು ಬ್ಯಾಂಕ್ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.