ನವದೆಹಲಿ: ಬೆಂಗಳೂರು ಮತ್ತು ದೆಹಲಿಯಲ್ಲಿ ಮನೆಗಳ ಬೆಲೆಯು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಸರಾಸರಿ ಶೇ 29ರಷ್ಟು ಏರಿಕೆಯಾಗಿದೆ ಎಂದು ಆಸ್ತಿ ಸಲಹಾ ಸಂಸ್ಥೆ ಅನರಾಕ್ ಭಾನುವಾರ ಹೇಳಿದೆ.
ಬೇಡಿಕೆ ಹೆಚ್ಚಳ, ನಿರ್ಮಾಣ ವೆಚ್ಚ ಮತ್ತು ಲಕ್ಸುರಿ ಮನೆಗಳ ಬೇಡಿಕೆಯಿಂದಾಗಿ ಬೆಲೆ ಏರಿಕೆಯಾಗಿದೆ. ಆದರೆ, ಇದೇ ಅವಧಿಯಲ್ಲಿ ಬೆಂಗಳೂರು ಮತ್ತು ದೆಹಲಿಯಲ್ಲಿ ಮನೆಗಳ ಮಾರಾಟವು ಕ್ರಮವಾಗಿ ಶೇ 8 ಮತ್ತು ಶೇ 2ರಷ್ಟು ಇಳಿಕೆಯಾಗಿದೆ ಎಂದು ತಿಳಿಸಿದೆ.
ಕಳೆದ ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಬೆಂಗಳೂರಲ್ಲಿ ಪ್ರತಿ ಚದರ ಅಡಿ ಬೆಲೆ ₹6,275 ಇತ್ತು. ಪ್ರಸಕ್ತ ಅವಧಿಯಲ್ಲಿ ₹8,100ಕ್ಕೆ ಮುಟ್ಟಿದೆ. ದೆಹಲಿಯಲ್ಲಿ ₹7,200ಕ್ಕೆ ಹೆಚ್ಚಳವಾಗಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ₹5,570 ಇತ್ತು.
ಹೈದರಾಬಾದ್‌ನಲ್ಲಿ ಶೇ 32, ಮುಂಬೈ ಶೇ 24, ಪುಣೆ ಮತ್ತು ಚೆನ್ನೈ ಶೇ 16, ಕೋಲ್ಕತ್ತದಲ್ಲಿ ಮನೆಗಳ ಬೆಲೆ ಶೇ 14ರಷ್ಟು ಏರಿಕೆಯಾಗಿದೆ.
ಈ ಏಳು ನಗರಗಳಲ್ಲಿ ಮನೆಗಳ ಬೆಲೆಯು ವಾರ್ಷಿಕ ಸರಾಸರಿ ಶೇ 23ರಷ್ಟು ಏರಿಕೆಯಾಗಿದೆ. ಒಟ್ಟು 1.20 ಲಕ್ಷ ಮನೆಗಳು ಮಾರಾಟವಾಗಿವೆ. ಹಿಂದಿನ ವರ್ಷದ ಸೆಪ್ಟೆಂಬರ್ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ 11ರಷ್ಟು ಇಳಿಕೆಯಾಗಿದೆ ಎಂದು ವಿವರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.