ADVERTISEMENT

ಚಿನ್ನ, ವೈಯಕ್ತಿಕ ಸಾಲದ ಆಯ್ಕೆ ಹೇಗೆ?

ಗೌರವ್‌ ಅಗರ್ವಾಲ್‌
Published 11 ಸೆಪ್ಟೆಂಬರ್ 2018, 19:30 IST
Last Updated 11 ಸೆಪ್ಟೆಂಬರ್ 2018, 19:30 IST
   

ಚಿನ್ನದ ಸಾಲ ಮತ್ತು ವೈಯಕ್ತಿಕ ಸಾಲಗಳಲ್ಲಿ ಯಾವುದು ಸೂಕ್ತ. ಸಾಲ ಪಡೆಯಲು ಮುಂದಾಗುವ ಹಲವರಲ್ಲಿ, ವಿಶೇಷವಾಗಿ ಮನೆಯಲ್ಲಿ ಚಿನ್ನಾಭರಣಗಳನ್ನು ಇಟ್ಟುಕೊಂಡವರಲ್ಲಿ ಈ ಗೊಂದಲ ಸಹಜವಾಗಿಯೇ ಮೂಡಿರುತ್ತದೆ.

ಬಡ್ಡಿ ದರ, ಸಾಲ ಮಂಜೂರಾತಿಗೆ ತೆಗೆದುಕೊಳ್ಳುವ ಅವಧಿ ಮುಂತಾದ ವಿಚಾರಗಳಲ್ಲಿ ಎರಡೂ ವಿಧದ ಸಾಲಗಳಲ್ಲಿ ಹೆಚ್ಚಿನ ವ್ಯತ್ಯಾಸವೇನೂ ಕಾಣಿಸುವುದಿಲ್ಲ (ಶೇ 9.85 ರಿಂದ ಶೇ 26ರ ಬಡ್ಡಿ ದರದಲ್ಲಿ ಚಿನ್ನದ ಸಾಲ ಹಾಗೂ ಶೇ 10.75 ರಿಂದ ಶೇ 24ರ ಬಡ್ಡಿದರದಲ್ಲಿ ವೈಯಕ್ತಿಕ ಸಾಲಗಳು ಲಭ್ಯವಾಗುತ್ತವೆ). ಹೀಗಿರುವಾಗ ಯಾವ ಸಾಲ ಪಡೆಯಬೇಕು ಎಂಬುದನ್ನು ನಿರ್ಧರಿಸಲು ಕಷ್ಟವಾಗುತ್ತದೆ. ಈ ಗೊಂದಲ ನಿವಾರಣೆಗೆ ಒಂದಷ್ಟು ಸಲಹೆಗಳು ಇಲ್ಲಿವೆ...

ಚಿನ್ನದ ಸಾಲವೇಕೆ?

ADVERTISEMENT

ಚಿನ್ನದ ಸಾಲವನ್ನು ಯಾಕೆ ಆಯ್ಕೆ ಮಾಡಬೇಕು ಎಂಬುದಕ್ಕೆ, ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ಸಾಲವನ್ನು ಪಡೆಯಲು ಸಾಧ್ಯ ಎಂಬುದೇ ಮೊದಲ ಮತ್ತು ಪ್ರಮುಖ ಕಾರಣವಾಗಿದೆ.

ಬಹುತೇಕ ಸಂಸ್ಥೆಗಳು ಗರಿಷ್ಠವೆಂದರೂ ₹ 40 ಲಕ್ಷದ ವರೆಗೆ ವೈಯಕ್ತಿಕ ಸಾಲ ನೀಡುತ್ತವೆ. ಅದೇ ಚಿನ್ನದ ಸಾಲ
ವಾದರೆ ಗರಿಷ್ಠ ₹ 1.5 ಕೋಟಿಯಷ್ಟು ನೀಡುತ್ತವೆ. ನಿಮಗೆ ತುರ್ತಾಗಿ ಹೆಚ್ಚಿನ ಹಣದ ಅಗತ್ಯವಿದ್ದರೆ ಚಿನ್ನದ ಸಾಲದ ಮೂಲಕ ಅಗತ್ಯವನ್ನು ಈಡೇರಿಸಿಕೊಳ್ಳಬಹುದು. ಚಿನ್ನವನ್ನು ಅಡವಿಟ್ಟು ಕನಿಷ್ಠ ₹ 1000 ಬೇಕಾದರೂ ಪಡೆಯಬಹುದು. ವೈಯಕ್ತಿಕ ಸಾಲವಾದರೆ ಕನಿಷ್ಠವೆಂದರೂ ₹ 5,000 ಪಡೆಯಬೇಕಾಗುತ್ತದೆ. ಅದಕ್ಕಿಂತ ಕಡಿಮೆ ಮೊತ್ತದ ವೈಯಕ್ತಿಕ ಸಾಲವನ್ನು ಯಾವ ಸಂಸ್ಥೆಯೂ ಕೊಡುವುದಿಲ್ಲ.

ಹೆಚ್ಚಿನ ‘ಸಾಲ ಅಂಕ’

ಸಾಲ ನೀಡುವ ಸಂಸ್ಥೆಗಳು ಗ್ರಾಹಕರ ಆದಾಯ, ಮರುಪಾವತಿಯ ಸಾಮರ್ಥ್ಯ ಹಾಗೂ ಇತರ ಕೆಲವು ವಿಚಾರಗಳನ್ನು ತಾಳೆಹಾಕಿ ಅವರಿಗೆ ‘ಸಾಲ ಅಂಕ’ಗಳನ್ನು (ಕ್ರೆಡಿಸ್‌ ಸ್ಕೋರ್‌) ನೀಡುತ್ತವೆ. ಆ ಅಂಕಗಳಿಗೆ ಅನುಸಾರವಾಗಿ ಗರಿಷ್ಠ ಸಾಲದ ಮಿತಿಯನ್ನು ನಿರ್ಧರಿಸಲಾಗುತ್ತದೆ. ವೈಯಕ್ತಿಕ ಸಾಲದ ವಿಚಾರದಲ್ಲಿ ಈ ಸಾಲ ಅಂಕ ಬಹು ಮುಖ್ಯ ಪಾತ್ರ ವಹಿಸುತ್ತದೆ. ಆದರೆ, ಚಿನ್ನದ ಸಾಲದ ವಿಚಾರದಲ್ಲಿ ಇದು ಅಷ್ಟು ಮುಖ್ಯವಾಗುವುದಿಲ್ಲ. ಇಲ್ಲಿ ಅಡವಿಡುವ ಚಿನ್ನದ ಮೌಲ್ಯವೇ ಮುಖ್ಯವಾಗುತ್ತದೆ. ಆದ್ದರಿಂದ ಕಡಿಮೆ ಅಂಕ ಹೊಂದಿರುವವರು ಸಹ ಕೈಯಲ್ಲಿ ಚಿನ್ನವಿದ್ದರೆ ಸಂಸ್ಥೆಯಲ್ಲಿ ಅಡವಿಟ್ಟು, ಶೀಘ್ರದಲ್ಲೇ ಹೆಚ್ಚಿನ ಸಾಲವನ್ನು ಪಡೆಯಬಹುದು. ಒಂದು ವೇಳೆ ಸಾಲಗಾರರು ಹಣ ಮರುಪಾವತಿ ಮಾಡದಿದ್ದರೆ, ಅಡವಿಟ್ಟ ಚಿನ್ನವನ್ನು ಮಾರಾಟ ಮಾಡಿಯಾದರೂ ಹಣವನ್ನು ವಸೂಲು ಮಾಡುವ ಅವಕಾಶ ಸಂಸ್ಥೆಗೆ ಇರುತ್ತದೆ. ಆದರೆ , ಹೀಗೆ ಪಡೆಯುವ ಸಾಲದ ಪ್ರಮಾಣವು ಅಡವು ಇಟ್ಟಿರುವ ಚಿನ್ನದ ಮೌಲ್ಯಕ್ಕಿಂತ ಹೆಚ್ಚಿನದಾಗಿದ್ದರೆ ಸಂಸ್ಥೆಗಳು ಸಾಲ ಅಂಕಗಳನ್ನು ಪರಿಗಣಿಸುವ ಸಾಧ್ಯತೆ ಇದೆ.

ವೈಯಕ್ತಿಕ ಸಾಲ ನೀಡಿಕೆಯ ಸಂದರ್ಭದಲ್ಲಿ ಸಾಲ ಪಡೆಯುವವರ ಸಾಲ ಅಂಕಗಳೇ ಬಹುಮುಖ್ಯ ಪಾತ್ರವಹಿಸುತ್ತವೆ. ಈ ಅಂಕಗಳು ಮತ್ತು ಮರುಪಾವತಿ ಸಾಮರ್ಥ್ಯದ ಆಧಾರದಲ್ಲಿಯೇ ಸಾಲದ ಪ್ರಮಾಣ, ಬಡ್ಡಿ ಪ್ರಮಾಣ, ಮರುಪಾವತಿ ಅವಧಿ ಮತ್ತಿತರ ನಿಯಮಾವಳಿಗಳು ನಿರ್ಧಾರವಾಗುತ್ತವೆ. ಸಾಲಕ್ಕಾಗಿ ಅರ್ಜಿ ಸಲ್ಲಿಸಿದವರ ಸಾಲ ಅಂಕ ಕಡಿಮೆಯಾಗಿದ್ದರೆ ಸಂಸ್ಥೆಗಳು ಅಂಥವರ ಅರ್ಜಿಯನ್ನು ತಿರಸ್ಕರಿಸಬಹುದು ಅಥವಾ ಹೆಚ್ಚು ಬಡ್ಡಿದರ ವಿಧಿಸಿ ಸಾಲ ಮಂಜೂರು ಮಾಡಬಹುದು. ಸಾಲ ಅಂಕಗಳೇ ಕಡಿಮೆ ಇರುವುದರಿಂದ ಗ್ರಾಹಕರು ಹೆಚ್ಚಿನ ಬಡ್ಡಿ ಕೊಡುವುದು ಅನಿವಾರ್ಯವಾಗುತ್ತದೆ.

ಕನಿಷ್ಠ ಕಡತ, ಹೆಚ್ಚಿನ ಸ್ವಾತಂತ್ರ್ಯ

ಅತಿ ಕನಿಷ್ಠ ಪ್ರಮಾಣದ ದಾಖಲೆ ಅಥವಾ ಕಡತಗಳನ್ನು ಕೊಟ್ಟು ಪಡೆಯಬಹುದಾದ ಸಾಲವೆಂದರೆ ಚಿನ್ನದ ಸಾಲ ಮಾತ್ರ. ಹೆಚ್ಚಿನ ಸಾಲ ನೀಡಿಕೆ ಸಂಸ್ಥೆಗಳು ಕೇವಲ ಗುರುತು ಪತ್ರ ಹಾಗೂ ವಿಳಾಸ ದೃಢೀಕರಣ ಪತ್ರಗಳ ಆಧಾರದಲ್ಲೇ ಚಿನ್ನದ ಸಾಲ ಮಂಜೂರು ಮಾಡುತ್ತವೆ. ಆದರೆ, ವೈಯಕ್ತಿಕ ಸಾಲ ಪಡೆಯಲು ಗುರುತುಪತ್ರ, ವಿಳಾಸ ದೃಢೀಕರಣಪತ್ರ, ಆದಾಯ ಪ್ರಮಾಣಪತ್ರ, ಬ್ಯಾಂಕ್‌ ಸ್ಟೇಟ್‌ಮೆಂಟ್‌... ಮುಂತಾಗಿ ಹತ್ತು ಹಲವು ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.

ಸಾಲ ಮರುಪಾವತಿಯ ವಿಚಾರದಲ್ಲೂ ಚಿನ್ನದ ಸಾಲ ಪಡೆದವರಿಗೆ ಹೆಚ್ಚಿನ ಸ್ವಾತಂತ್ರ್ಯ ಇರುತ್ತದೆ. ಮೊದಲು ಬಡ್ಡಿಯನ್ನು ಮಾತ್ರ ಕಟ್ಟಿ ಕೊನೆಯಲ್ಲಿ ಮೂಲ ಸಾಲವನ್ನು ಮರುಪಾವತಿ ಮಾಡುವುದು, ಅವಧಿಯ ಕೊನೆಯಲ್ಲಿ ಸಾಲ ಹಾಗೂ ಬಡ್ಡಿ ಎರಡನ್ನೂ ಏಕಕಾಲದಲ್ಲಿ ಪಾವತಿ ಮಾಡುವುದು... ಹೀಗೆ ಅನೇಕ ಆಯ್ಕೆಗಳನ್ನು ಸಂಸ್ಥೆಗಳು ನೀಡುತ್ತವೆ. ವೈಯಕ್ತಿಕ ಸಾಲ ಪಡೆದರೆ ಪ್ರತಿ ತಿಂಗಳೂ ಸಮಾನ ಕಂತನ್ನು ತುಂಬುತ್ತಲೇ ಇರಬೇಕು.

ಹಾಗೆಂದು ವೈಯಕ್ತಿಕ ಸಾಲ ಪಡೆಯಲೇಬಾರದು ಎಂದಲ್ಲ. ವೈಯಕ್ತಿಕ ಸಾಲದಲ್ಲೂ ಕೆಲವು ಸಕಾರಾತ್ಮಕ ಅಂಶಗಳಿವೆ. ವಿಶೇಷವಾಗಿ ಸಾಲ ಮರುಪಾವತಿಯ ಅವಧಿಯ ವಿಚಾರ. ಚಿನ್ನದ ಸಾಲ ಮರುಪಾವತಿಗೆ ಸಾಮಾನ್ಯವಾಗಿ ಮೂರು ವರ್ಷಗಳ ಅವಧಿ ಇದ್ದರೆ, ವೈಯಕ್ತಿಕ ಸಾಲಕ್ಕೆ ಐದು ವರ್ಷಗಳ ಅವಧಿ ಲಭಿಸುತ್ತದೆ. ಕೆಲವು ಸಂಸ್ಥೆಗಳು ಏಳು ವರ್ಷಗಳ ಮರುಪಾವತಿ ಅವಧಿಯನ್ನೂ ನೀಡುತ್ತವೆ. ಅವಧಿ ದೀರ್ಘವಾದರೆ ಮಾಸಿಕ ಕಂತಿನ ಹೊರೆ ಕಡಿಮೆಯಾಗಿರುತ್ತದೆ.

ಚಿನ್ನದ ಸಾಲ ಪಡೆಯಲು, ಅಡವಿಡುವ ಚಿನ್ನದ ಮೌಲ್ಯ ನಿರ್ಧರಿಸುವುದು, ಅದರ ಪರಿಶೀಲನೆ ಮುಂತಾದ ಕೆಲಸಗಳಿರುತ್ತವೆ. ಅದಕ್ಕಾಗಿ ಕನಿಷ್ಠ ಒಂದೆರಡು ಬಾರಿಯಾದರೂ ಅಡಮಾನ ಸಂಸ್ಥೆಯ ಕಚೇರಿಗೆ ಹೋಗಬೇಕಾಗುತ್ತದೆ. ನಿಮ್ಮ ಮನೆಯ ಸಮೀಪದಲ್ಲಿ ಇಂಥ ಸಂಸ್ಥೆ ಇಲ್ಲದಿದ್ದರೆ ಚಿನ್ನದ ಸಾಲ ಪಡೆಯುವುದು ಸ್ವಲ್ಪ ಕಷ್ಟವೆನಿಸಬಹುದು. ವಿಶೇಷವಾಗಿ ಗ್ರಾಮೀಣ ಪ್ರದೇಶದ ಜನರು ತಮ್ಮ ಬಳಿ ಚಿನ್ನ ಇದ್ದರೂ ಅದನ್ನು ಅಡವಿಟ್ಟು ಸಾಲ ಪಡೆಯಬೇಕಾದರೆ ಸಮೀಪದ ಪಟ್ಟಣ ಪ್ರದೇಶಕ್ಕೆ ಹೋಗಬೇಕಾಗುತ್ತದೆ. ಆದರೆ, ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ತಂತ್ರಜ್ಞಾನದ ಅಳವಡಿಕೆ ಆಗಿರುವುದರಿಂದ ವೈಯಕ್ತಿಕ ಸಾಲ ಪಡೆಯಲು ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಬಹುದು. ಬೇರೆ ಬೇರೆ ಸಂಸ್ಥೆಗಳು ವಿಧಿಸುವ ಬಡ್ಡಿದರ, ಮರುಪಾವತಿ ಅವಧಿ ಮತ್ತಿತರ ಅಂಶಗಳನ್ನು ಆನ್‌ಲೈನ್‌ನಲ್ಲೇ ತುಲನೆ ಮಾಡಬಹುದು. ಅಷ್ಟೇ ಅಲ್ಲ. ಅನೇಕ ಸಂದರ್ಭಗಳಲ್ಲಿ ಸಾಲ ನೀಡುವ ಸಂಸ್ಥೆಯ ಕಚೇರಿಗೆ ಒಮ್ಮೆಯೂ ಭೇಟಿ ನೀಡಿದೆ ಸಾಲವನ್ನು ಪಡೆಯುವುದೂ ಸಾಧ್ಯ.

ಆಯ್ಕೆ ಹೇಗೆ?

ಹಾಗಿದ್ದರೆ ಯಾವ ಸಾಲ ಪಡೆಯುವುದು ಸೂಕ್ತ. ಇದು ಸಾಲ ಪಡೆಯುವವರ ಅಗತ್ಯಕ್ಕೆ ಅನುಗುಣವಾಗಿದೆ. ಒಂದುವೇಳೆ ನೀವು ಕಡಿಮೆ ಸಾಲ ಅಂಕ ಹೊಂದಿದ್ದು, ನಿಮಗೆ ತುರ್ತಾಗಿ ಹೆಚ್ಚಿನ ಮೊತ್ತದ ಅಗತ್ಯವಿದ್ದಲ್ಲಿ ಮತ್ತು ಮೂರು ವರ್ಷದೊಳಗೆ ಅದನ್ನು ಮರುಪಾವತಿಸುವ ಸಾಮರ್ಥ್ಯ ಇದ್ದಲ್ಲಿ ಚಿನ್ನದ ಸಾಲವೇ ಒಳ್ಳೆಯ ಆಯ್ಕೆ.
ನೀವು ಒಳ್ಳೆಯ ಸಾಲ ಅಂಕಗಳ ಜೊತೆಗೆ ನಿಗದಿತ ಆದಾಯ ಇರುವವರಾಗಿದ್ದರೆ ಮತ್ತು ಸಾಲ ಮರುಪಾವತಿಗೆ ದೀರ್ಘವಾದ ಅವಧಿ ಬೇಕಿದ್ದರೆ ವೈಯಕ್ತಿಕ ಸಾಲ ಪಡೆಯುವುದು ಸೂಕ್ತ.

(ಲೇಖಕ: ಪೈಸಾಬಝಾರ್‌ ಡಾಟ್ ಕಾಂನ ಸಹ ನಿರ್ದೇಶಕ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.