ADVERTISEMENT

ವಿಮೆ ಮೊತ್ತ ನಿರ್ಧರಿಸುವುದು ಹೇಗೆ?

​ಪ್ರಜಾವಾಣಿ ವಾರ್ತೆ
Published 30 ಜುಲೈ 2019, 19:31 IST
Last Updated 30 ಜುಲೈ 2019, 19:31 IST
   

ಜೀವವಿಮೆ ಮಾಡಿಸುವುದು ನಮ್ಮ ಜೀವನದ ಬಹುಮುಖ್ಯ ನಿರ್ಧಾರಗಳಲ್ಲೊಂದು. ವಿಮೆ ದೀರ್ಘಾವಧಿಯ ಹೂಡಿಕಾ ಉತ್ಪನ್ನ ಮಾತ್ರವಲ್ಲ, ಜೀವನದಲ್ಲಿ ಯಾವುದೇ ಅನಿರೀಕ್ಷಿತ ಅವಘಡ ಸಂಭವಿಸಿದರೆ ಕುಟುಂಬದ ಮೇಲೆ ಅದರ ದುಷ್ಪರಿಣಾಮ ಆಗದಂತೆ ರಕ್ಷಣೆ ನೀಡುವ ಉತ್ಪನ್ನವೂ ಆಗಿರುತ್ತದೆ. ಒಬ್ಬ ವ್ಯಕ್ತಿಗೆ ಯಾವ ಮೊತ್ತದ ಜೀವವಿಮೆ ಬೇಕಾಗುತ್ತದೆ ಎಂಬುದನ್ನು ನಿಖರವಾಗಿ ಹೇಳುವುದು ಕಷ್ಟವಾದರೂ, ಅದು ಆ ವ್ಯಕ್ತಿಯ ಆರ್ಥಿಕ ಹೊಣೆಗಾರಿಕೆಗಳನ್ನೆಲ್ಲ ಈಡೇರಿಸಲು ಸಾಧ್ಯವಾಗುವಷ್ಟು ಮತ್ತು ಕುಟುಂಬದ ಮುಂದಿನ ಜೀವನಕ್ಕೆ ಸಹಾಯ ಒದಗಿಸುವಷ್ಟು ಇರಬೇಕು ಎಂದು ಹೇಳಬಹುದು.

ನಿಮ್ಮ ಹಣಕಾಸಿನ ಪರಿಸ್ಥಿತಿ ಮತ್ತು ನಿಮ್ಮನ್ನು ಅವಲಂಬಿಸಿದವರ ಆರ್ಥಿಕ ಯೋಗಕ್ಷೇಮಕ್ಕೆ ಅಡ್ಡಿಯಾಗಬಲ್ಲಂತಹ ಸಂಭವನೀಯ ಅಪಾಯಗಳ ಬಗ್ಗೆ ಸ್ಪಷ್ಟ ಕಲ್ಪನೆ ನಿಮಗೆ ಇದ್ದರೆ, ನೀವು ಎಷ್ಟು ಮೊತ್ತದ ಜೀವವಿಮೆ ಮಾಡಿಸಬೇಕು ಎಂಬುದನ್ನು ಲೆಕ್ಕಹಾಕಲು ಕಷ್ಟವಾಗದು. ಹಣಕಾಸು ತಜ್ಞರು ಅನೇಕ ಬಾರಿ ನಿಮ್ಮ ವಾರ್ಷಿಕ ಆದಾಯವನ್ನು ಗುಣಿಸಿ, ಭಾಗಾಕಾರ ಮಾಡಿ ‘ನಿಮಗೆ ಇಷ್ಟೇ ಜೀವವಿಮೆ ಬೇಕಾಗುತ್ತದೆ’ ಎಂದು ಹೇಳುತ್ತಾರೆ. ಆದರೆ ಅದು ಅಷ್ಟು ಸರಳ ಲೆಕ್ಕಾಚಾರವಲ್ಲ. ಹಣದುಬ್ಬರ, ಸಾಲದ ಪ್ರಮಾಣ, ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲು ಬರುವ ವೆಚ್ಚ... ಮುಂತಾದ ಅನೇಕ ವಿಚಾರಗಳನ್ನು ಈ ಲೆಕ್ಕಾಚಾರವು ಕಡೆಗಣಿಸಿರುತ್ತದೆ. ವಿಮೆ ಮಾಡಿಸುವಾಗ ‘ಎಷ್ಟು ಮಾಡಿಸಬೇಕು’ ಎಂದು ಕೇಳುವ ಬದಲು ‘ಯಾಕೆ ಮಾಡಿಸಬೇಕು’ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಿ. ಹೀಗೆ ಪ್ರಶ್ನಿಸಿ, ವಿಮೆ ಮಾಡಿಸಿಕೊಳ್ಳುವ ಸಂದರ್ಭದಲ್ಲಿ ಗಮನದಲ್ಲಿಡಬೇಕಾದ ಒಂದಿಷ್ಟು ಅಂಶಗಳಿವೆ...

ಜೀವನದ ಗುರಿ: ನಮ್ಮಲ್ಲಿ ಹೆಚ್ಚಿನವರು ತಮ್ಮ ಕುಟುಂಬದವರು, ಪ್ರೀತಿಪಾತ್ರರ ಕನಸುಗಳನ್ನು ಈಡೇರಿಸುವ ಗುರಿಯನ್ನಿಟ್ಟುಕೊಂಡು ಹೂಡಿಕೆ ಮಾಡುತ್ತೇವೆ. ಮಕ್ಕಳಿಗೆ ವಿದೇಶದ ಅತ್ಯುತ್ತಮ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಕೊಡಿಸುವುದು, ಮನೆ ಖರೀದಿಸುವುದು, ನಿವೃತ್ತಿಯ ನಂತರ ಒಳ್ಳೆಯ ಬದುಕು ನಡೆಸುವುದು... ಹೀಗೆ ಅನೇಕ ಗುರಿಗಳನ್ನು ನಾವು ನಿರ್ಧರಿಸಿರುತ್ತೇವೆ. ಇವುಗಳ ಈಡೇರಿಕೆಗೆ ಎಷ್ಟು ಹಣ ಬೇಕಾಗುತ್ತದೆ ಎಂಬುದನ್ನು ವಿಮೆ ಮಾಡುವ ಸಂದರ್ಭದಲ್ಲಿ ಗಮನದಲ್ಲಿಡುವುದು ಅಗತ್ಯ.

ADVERTISEMENT

ಆದಾಯಕ್ಕೆ ಪರ್ಯಾಯ: ವಿಮೆ ಮಾಡಿಸುವುದರ ಇನ್ನೊಂದು ಉದ್ದೇಶವೆಂದರೆ ಪರ್ಯಾಯ ಆದಾಯವನ್ನು ಕಂಡುಕೊಳ್ಳುವುದು. ಕುಟುಂಬದಲ್ಲಿ ದುಡಿಯುವ ಏಕೈಕ ವ್ಯಕ್ತಿ ನೀವಾಗಿದ್ದರೆ ನಿಮ್ಮ ಅನುಪಸ್ಥಿತಿಯಲ್ಲೂ ನಿಮ್ಮ ವೇತನಕ್ಕೆ ಸರಿಯಾದ ಮೊತ್ತವೊಂದನ್ನು ಕುಟುಂಬದವರಿಗೆ ನೀಡಬಹುದಾದ ವಿಮೆಯನ್ನು ಮಾಡಿಸುವುದು ಅಗತ್ಯ. ಹೀಗೆ ಲೆಕ್ಕ ಹಾಕುವಾಗ ಎಷ್ಟು ವರ್ಷಗಳ ಕಾಲ ನಿಮ್ಮ ಕುಟುಂಬಕ್ಕೆ ಆರ್ಥಿಕ ನೆರವಿನ ಅಗತ್ಯ ಇರುತ್ತದೆ ಎಂದು ಅರಿಯಬೇಕು. ಆ ಸಂಖ್ಯೆಯನ್ನು ನಿಮ್ಮ ವಾರ್ಷಿಕ ಆದಾಯದಿಂದ ಗುಣಿಸಿಕೊಳ್ಳಿ. ಈ ಸಂಖ್ಯೆಯು ನಿಮ್ಮ ಸಣ್ಣ ಮಗ ಅಥವಾ ಮಗಳು ಪದವಿ ಪೂರೈಸಲು ಬೇಕಾಗುವಷ್ಟು ವರ್ಷಗಳೂ ಆಗಿರಬಹುದು. ಹೀಗೆ ಬಂದ ಸಂಖ್ಯೆಗೆ (ಇನ್ನಷ್ಟು ಸುರಕ್ಷತೆಯ ದೃಷ್ಟಿಯಿಂದ) ಪುನಃ ನಿಮ್ಮ ಒಂದು ವರ್ಷದ ಆದಾಯವನ್ನು ಸೇರಿಸಿ. ಆಗ ಲಭಿಸುವ ಮೊತ್ತವು ಹಣದುಬ್ಬರವನ್ನು ಮೀರಿ ನಿಮ್ಮ ಕುಟುಂಬಕ್ಕೆ ಆರ್ಥಿಕ ಭದ್ರತೆ ಒದಗಿಸಲು ಸಾಕಾಗುವಷ್ಟು ಆಗಬಹುದು.

ಸಾಲದ ಹೊಣೆ: ನಿಮಗೇನಾದರೂ ಅವಘಡ ಸಂಭವಿಸಿದರೆ ನೀವು ಮಾಡಿದ ಎಲ್ಲಾ ಸಾಲಗಳ ಹೊರೆಯನ್ನು ನಿಮ್ಮ ಕುಟುಂಬದವರು ಅಥವಾ ವ್ಯಾಪಾರದ ಪಾಲುದಾರರು ಹೊರಬೇಕಾಗಿ ಬರಬಹುದು. ಆದ್ದರಿಂದ ಈ ಎಲ್ಲ ಸಾಲವನ್ನೂ ತೀರಿಸಲು ಸಾಧ್ಯವಾಗುವಷ್ಟು ಪ್ರಮಾಣದಲ್ಲಿ ವಿಮೆ ಮಾಡಿಸುವುದು ಅಗತ್ಯ.

ವಿಮೆ ಮಾಡಿಸುವ ಮುನ್ನ ಈ ಮೇಲಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡರೆ ನಿಮ್ಮ ಪ್ರೀತಿಪಾತ್ರರು ನಿಮ್ಮ ಅನುಪಸ್ಥಿತಿಯಲ್ಲೂ ಆರ್ಥಿಕ ಸಂಕಷ್ಟದಿಂದ ಪಾರಾಗುತ್ತಾರೆ. ಇದರ ಜೊತೆಗೆ ಆರೋಗ್ಯ ವಿಮೆಗೂ ಗಮನ ನೀಡಬೇಕಾಗಿರುತ್ತದೆ.

ವಿಮೆಯ ಮೊತ್ತದ ಜೊತೆಗೆ ನೀವು ಯಾರ ಮೂಲಕ ವಿಮೆಯನ್ನು ಖರೀದಿಸುತ್ತೀರಿ ಎಂಬುದೂ ಮುಖ್ಯವಾಗುತ್ತದೆ. ಇಂದಿನ ಡಿಜಿಟಲ್‌ ಯುಗದಲ್ಲಿ ಎಲ್ಲಾ ಪಾಲಿಸಿಗಳ ವಿವರಗಳು, ಅವು ನೀಡುವ ಸೌಲಭ್ಯ, ಲಾಭ–ನಷ್ಟ ಮುಂತಾದವುಗಳನ್ನು ಆನ್‌ಲೈನ್‌ನಲ್ಲೇ ತಾಳೆಮಾಡಿ ನೋಡುವ ಸೌಲಭ್ಯ ಇದೆ. ನಿಮಗೆ ಅತಿ ಹೆಚ್ಚು ಸೌಲಭ್ಯಗಳನ್ನು ನೀಡುವ ಸಂಸ್ಥೆಯಿಂದ ಮತ್ತು ವಿಮೆಯ ಹಣವನ್ನು ಸಕಾಲದಲ್ಲಿ ನೀಡಿದ ಹಿನ್ನೆಲೆ ಹೊಂದಿರುವ ಸಂಸ್ಥೆಯಿಂದಲೇ ನೀವು ವಿಮೆ ಮಾಡಿಸುವುದು ಸೂಕ್ತ.

ಸಾಕಷ್ಟು ಮುಂಜಾಗ್ರತೆ ವಹಿಸಿ, ಯೋಜನಾಬದ್ಧವಾಗಿ ವಿಮೆ ಮಾಡಿಸಿದರೆ ಸಂಭವನೀಯ ತೊಂದರೆಗಳಿಂದ ಪಾರಾಗಬಹುದು. ನೀವು ಯೋಚನೆ ಮಾಡಿದ್ದಕ್ಕಿಂತ ಸ್ವಲ್ಪ ಹೆಚ್ಚಿನ ಮೊತ್ತಕ್ಕೆ ವಿಮೆ ಮಾಡಿಸುವುದರಿಂದ ನಷ್ಟವೇನೂ ಆಗುವುದಿಲ್ಲ. ‘ಮುಂದಿನ ದಿನಗಳಲ್ಲಿ ಆದಾಯ ಹೆಚ್ಚುವುದರಿಂದ ವಿಮೆ ಕಡಿಮೆ ಮಾಡಿಸಿದರೂ ಸಾಕು’ ಎಂಬ ಭಾವನೆ ಬರಬಹುದು. ಆದರೆ ಆದಾಯ ಹೆಚ್ಚುವುದರ ಜೊತೆಗೆ ಖರ್ಚುಗಳೂ ಹೆಚ್ಚುತ್ತವೆ ಎಂಬುದನ್ನು ಮರೆಯಬಾರದು. ಖರ್ಚು ಮತ್ತು ಆದಾಯಗಳಲ್ಲಿ ಭವಿಷ್ಯದಲ್ಲಿ ಯಾವುದು, ಯಾವಾಗ ಮತ್ತು ಎಷ್ಟು ಪ್ರಮಾಣದಲ್ಲಿ ಹೆಚ್ಚುತ್ತದೆ ಎಂಬುದನ್ನು ಯಾರೂ ಲೆಕ್ಕ ಹಾಕಲಾಗದು. ಸ್ವಲ್ಪ ಹೆಚ್ಚಿನ ವಿಮೆ ಮಾಡಿಸುವುದರಿಂದ ನಿಮ್ಮನ್ನು ಅವಲಂಬಿಸಿದವರಿಗೆ ಅನುಕೂಲವಾಗುವುದೇ ವಿನಾ ನಷ್ಟವಾಗುವುದಿಲ್ಲ.

(ಲೇಖಕ: ಬಜಾಜ್‌ ಅಲಯನ್ಸ್‌ ಲೈಫ್‌ ಇನ್ಶೂರೆನ್ಸ್‌ನ ಮುಖ್ಯ ವಿತರಣಾಧಿಕಾರಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.