ಸಾಲ ನಿಧಿಗಳ ಬಗ್ಗೆ ಎಲ್ಲರೂ ಕೇಳಿರುತ್ತೀರಿ. ಆದರೆ, ಯಾವ ನಿಧಿಯಲ್ಲಿ ಹೂಡಿಕೆ ಮಾಡಬೇಕು, ಫಂಡ್ ಮ್ಯಾನೇಜರ್‌ಗಳು ಹೇಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ ಮತ್ತು ಈ ಹೂಡಿಕೆಯಿಂದ ಹೇಗೆ ಗಳಿಕೆ ಮಾಡುತ್ತಾರೆ ಎಂಬುದರ ಬಗ್ಗೆ ನಿಮಗೆ ತಿಳಿದಿದೆಯೇ? ಸಾಲ ನಿಧಿಗಳ ಬಗ್ಗೆ ಇನ್ನಷ್ಟು ಮಾಹಿತಿ ನೀಡುವುದು ಮತ್ತು ಸಂಪೂರ್ಣ ಮಾಹಿತಿ ಪಡೆದ ನಂತರವೇ ನೀವು ಹೂಡಿಕೆ ಆರಂಭಿಸಬೇಕು ಎಂಬುದು ಈ ಲೇಖನದ ಉದ್ದೇಶ.
ಚಿಲ್ಲರೆ ಹೂಡಿಕೆದಾರರು ಹೆಚ್ಚಾಗಿ ಬ್ಯಾಂಕ್ ನಿಶ್ಚಿತ ಠೇವಣಿಗಳ ಬಗ್ಗೆ ಮಾತ್ರ ಕೇಳಿರುತ್ತಾರೆ. ದೊಡ್ಡ ಹಣಕಾಸು ಸಂಸ್ಥೆಗಳು, ಬ್ಯಾಂಕ್ ಮತ್ತು ಮ್ಯೂಚುವಲ್ ಫಂಡ್‌ಗಳಿಗಾದರೆ ಹೂಡಿಕೆಗೆ ಸಾಕಷ್ಟು ಸಾಲ ನಿಧಿಗಳ ಆಯ್ಕೆ ಇರುತ್ತದೆ. ಕಂಪನಿಗಳ ಸಾಲ ನಿಧಿಗಳು, ಕಾರ್ಪೊರೇಟ್ ಸಂಸ್ಥೆಗಳು ಬಿಡುಗಡೆ ಮಾಡುವ ಡಿಬೆಂಚರುಗಳು (ಪರಿವರ್ತಿಸಬಹುದಾದ ಮತ್ತು ಪರಿವರ್ತಿಸಲಾಗದ), ಟ್ರೆಸರಿ ಬಿಲ್‌ಗಳು, ಸರ್ಕಾರದ ಸಾಲನಿಧಿಗಳು...ಹೀಗೆ ಹೂಡಿಕೆಗೆ ಅನೇಕ ಆಯ್ಕೆಗಳು ಇವೆ. ಸರ್ಕಾರಗಳು ನೀಡುವ ಹತ್ತು ವರ್ಷ ಅವಧಿಯ ಸಾಲನಿಧಿಗಳು ಇವುಗಳಲ್ಲಿ ಅತಿ ಹೆಚ್ಚು ಜನಪ್ರಿಯವಾಗಿವೆ. ಇವು ಹೆಚ್ಚು ಆದಾಯವನ್ನೂ ತಂದುಕೊಡುತ್ತವೆ. ತಮ್ಮ ಹಣಕಾಸಿನ ಅಗತ್ಯಗಳನ್ನು ಈಡೇರಿಸಿಕೊಳ್ಳಲು ಕಾರ್ಪೊರೇಟ್ ಸಂಸ್ಥೆಗಳು ಅಥವಾ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇಂಥ ಸಾಲ ನಿಧಿಗಳನ್ನು ಬಿಡುಗಡೆ ಮಾಡಿರುತ್ತವೆ.
ಸಾಲ ನಿಧಿಗಳ ಅಗತ್ಯಗಳನ್ನು ಅರ್ಥ ಮಾಡಿಕೊಂಡು ಫಂಡ್ ಮ್ಯಾನೇಜರ್‌ಗಳು ಇಂಥವುಗಳಲ್ಲಿ ಹೂಡಿಕೆ ಮಾಡುತ್ತಾರೆ. ಅಲ್ಪಾವಧಿಯ ಹೂಡಿಕೆಯಾಗಿದ್ದರೆ ಆರು ತಿಂಗಳಿಂದ ಒಂದು ಅಥವಾ ಎರಡು ವರ್ಷ ಅವಧಿಯ ಸಾಲ ನಿಧಿಯಲ್ಲಿ ಹಣ ಹೂಡಲಾಗುತ್ತದೆ. ದೀರ್ಘಾವಧಿಯ ಫಂಡ್‌ಗಳಾಗಿದ್ದರೆ ಐದು ವರ್ಷ ಅಥವಾ ಅದಕ್ಕೂ ಹೆಚ್ಚಿನ ಅವಧಿಯಲ್ಲಿ ಪಕ್ವಗೊಳ್ಳುವ ಸಾಲಪತ್ರಗಳಲ್ಲಿ ಹೂಡಿಕೆ ಮಾಡಲಾಗುತ್ತದೆ.
ಸಾಲ ನಿಧಿಗಳ ಗಳಿಕೆ ಹೇಗೆ?
ಸಾಲ ನಿಧಿಗಳು ಹೂಡಿಕೆದಾರರಿಗೆ ಎರಡು ರೀತಿಯಲ್ಲಿ ಆದಾಯ ತಂದು ಕೊಡುತ್ತವೆ. ಒಂದು ಬಡ್ಡಿಯ ರೂಪದಲ್ಲಿ, ಇನ್ನೊಂದು ಬಾಂಡ್ ಮೇಲಿನ ಬಂಡವಾಳ ಹೂಡಿಕೆ ಆದಾಯದ (ಬಾಂಡ್‌ನ ಮೌಲ್ಯ ಹೆಚ್ಚಿಸುವ ಮೂಲಕ) ರೂಪದಲ್ಲಿ. ಸಾಂಪ್ರದಾಯಿಕ ನಿಶ್ಚಿತ ಠೇವಣಿಗಳಂತೆ ಸಾಲ ನಿಧಿಗಳ ಹೂಡಿಕೆಗೂ ನಿಗದಿತ ಅವಧಿಯಲ್ಲಿ ಬಡ್ಡಿ ನೀಡಲಾಗುತ್ತದೆ. ಆರು ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆ ಇವುಗಳಿಗೆ ಬಡ್ಡಿ ನೀಡಲಾಗುತ್ತದೆ. ಹೀಗೆ ಪಡೆದ ಬಡ್ಡಿಯು ದೀರ್ಘಾವಧಿಯಲ್ಲಿ ನಿವ್ವಳ ಆಸ್ತಿ ಮೌಲ್ಯವಾಗಿ ಕಾಣಿಸುತ್ತದೆ.
ಅಪಾಯಗಳೇನು?
ಸಾಲ ನಿಧಿಗಳಲ್ಲಿ ಹೂಡಿಕೆ ಮಾಡುವುದಕ್ಕೂ ಮುನ್ನ ಇವುಗಳಲ್ಲಿ ಅಪಾಯವಿದೆಯೇ. ಇದ್ದರೆ ಎಲ್ಲಿದೆ ಎಂಬುದನ್ನು ತಿಳಿದುಕೊಳ್ಳಬೇಕು. ವಿಶೇಷವಾಗಿ ಈ ಹೂಡಿಕೆಯಲ್ಲಿ ಸಾಲ ಮತ್ತು ಬಡ್ಡಿ ದರ ಎಂಬ ಎರಡು ಅಪಾಯಗಳ ಬಗ್ಗೆ ತಿಳಿದಿರುವುದು ಅಗತ್ಯ.
ಸಾಲ ಪಡೆಯುವ ಸಂಸ್ಥೆಗಳ ಸಾಮರ್ಥ್ಯವನ್ನು ಅಳೆದು, ಅವುಗಳಿಗೆ ರೇಟಿಂಗ್ ನೀಡುವ ಒಂದು ವ್ಯವಸ್ಥೆ ಇದೆ. ಹೀಗೆ ಸಂಸ್ಥೆಗೆ ರೇಟಿಂಗ್ ಕೊಡುವ ಸಲುವಾಗಿಯೇ ಕೆಲವು ಸಂಸ್ಥೆಗಳಿದ್ದು, ಇವುಗಳು ಕೊಡುವ ರೇಟಿಂಗ್ ಆಧಾರದಲ್ಲಿ ಸಂಸ್ಥೆಯ ಸಾಲ ಪಡೆಯುವ ಸಾಮರ್ಥ್ಯ ನಿರ್ಧಾರವಾಗುತ್ತದೆ.
ಒಂದು ಸಂಸ್ಥೆಯ ರೇಟಿಂಗ್ ಇಳಿಕೆಯಾಯಿತೆಂದರೆ ಆ ಸಂಸ್ಥೆಯ ಬಾಂಡ್‌ಗಳ ಮೌಲ್ಯವೂ ಕುಸಿಯುತ್ತದೆ. ಹೆಚ್ಚು ರೇಟಿಂಗ್ ಹೊಂದಿರುವ ಬಾಂಡ್‌ಗಳ ಮೌಲ್ಯವೂ ಹೆಚ್ಚಾಗಿರುತ್ತದೆ. ಒಂದರ್ಥದಲ್ಲಿ ಇಂಥ ಬಾಂಡ್‌ಗಳಲ್ಲಿ ಮಾಡಿರುವ ಹೂಡಿಕೆ ಹೆಚ್ಚು ಸುರಕ್ಷಿತವಾಗಿರುತ್ತದೆ. ಸರ್ಕಾರಿ ಬಾಂಡ್‌ಗಳು ಸಾಮಾನ್ಯವಾಗಿ ಈ ಸಾಲಿನಲ್ಲಿ ಬರುತ್ತವೆ.
ಆದರೆ, ಒಂದು ಸಾಮಾನ್ಯ ತಿಳಿವಳಿಕೆ ಎಂದರೆ, ಬಾಂಡ್‌ನ ರೇಟಿಂಗ್ ಕಡಿಮೆಯಾಯಿತೆಂದರೆ ಬಾಂಡ್ ಇಳುವರಿ ಹೆಚ್ಚಾಗುತ್ತದೆ ಎಂಬುದು. ಮಾರುಕಟ್ಟೆಯಲ್ಲಿ ಜಾರಿಯಲ್ಲಿರುವ ಬಡ್ಡಿ ದರದ ಆಧಾರದಲ್ಲಿ ಸಾಲನಿಧಿಯ ಮೌಲ್ಯ ವರ್ಧನೆ ಅಥವಾ ಇಳಿಕೆಯಾಗುತ್ತದೆ.
ಗಮನಿಸಬೇಕಾದ್ದೇನು?
ಯಾವುದೇ ಸಾಲ ನಿಧಿಯಲ್ಲಿ ಹೂಡಿಕೆ ಮಾಡುವ ಮುನ್ನ ಅದರ ಗಳಿಕೆ ಹಾಗೂ ಅದನ್ನು ಕೊಡಮಾಡುವ ಸಂಸ್ಥೆಯ ಹಿನ್ನೆಲೆಯನ್ನು ಗಮನಿಸಬೇಕು. ಒಂದು ನಿಧಿಯು ಹೆಚ್ಚು ಗಳಿಕೆಯನ್ನು ತಂದುಕೊಡುತ್ತದೆ ಎಂದಾದರೆ ಆ ಸಂಸ್ಥೆ ಹೆಚ್ಚಿನ ಅಪಾಯಕ್ಕೆ ತನ್ನನ್ನು ಒಡ್ಡಿಕೊಂಡಿರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಹೆಚ್ಚಿನ ಗಳಿಕೆಯ ಆಸೆಗೆ ಬಿದ್ದರೆ ಕಾಡು ನಿರ್ಮಿಸಲು ಮರಗಳನ್ನು ಕಡಿದಂತಾಗಬಹುದು.
ಸಾಲ ಪಡೆಯುವ ಸಂಸ್ಥೆಯ ಬಳಿ, ಪಡೆಯುವ ಸಾಲಕ್ಕೆ ಅನುಗುಣವಾದ ಸೊತ್ತು ಇಲ್ಲದಿದ್ದರೆ ಅಪಾಯದಪ್ರಮಾಣ ಹೆಚ್ಚು. ಆದ್ದರಿಂದ ಹೂಡಿಕೆಗೂ ಮುನ್ನ ಫಂಡ್ ಮ್ಯಾನೇಜರ್‌ಗಳು ತಾವು ಹೂಡಿಕೆ ಮಾಡಲಿರುವ ಸಂಸ್ಥೆಯ ಹಿನ್ನೆಲೆಯನ್ನು ಚೆನ್ನಾಗಿ ತಿಳಿದಿರುವುದು ಅಗತ್ಯ.
ಹೂಡಿಕೆದಾರರೂ ಕೂಡ ಹೆಚ್ಚಿನ ಲಾಭದ ನಿರೀಕ್ಷೆಯಲ್ಲಿ ಅಪಾಯಕಾರಿ ಸಾಲಪತ್ರಗಳಲ್ಲಿ ಹೂಡಿಕೆ ಮಾಡುವುದಕ್ಕಿಂತ ಸುರಕ್ಷಿತವಾದ ಮತ್ತು ದೀರ್ಘಾವಧಿಯ ನಿಧಿಗಳಲ್ಲಿ ಹೂಡಿಕೆ ಮಾಡಿ ಗಳಿಕೆ ಮಾಡಿಕೊಳ್ಳುವುದು ಉತ್ತಮ.
ಹೂಡಿಕೆದಾರರು ಮಾಡಬಹುದಾದ ಇನ್ನೊಂದು ಕೆಲಸವೆಂದರೆ, ಒಂದೇ ಕ್ಷೇತ್ರದಲ್ಲಿ ಹೂಡಿಕೆ ಮಾಡುವ ಬದಲು ಬೇರೆ ಬೇರೆ ಕ್ಷೇತ್ರಗಳಿಗೆ ಸಂಬಂಧಿಸಿದ ಬಾಂಡ್‌ಗಳನ್ನು ಆಯ್ಕೆ ಮಾಡಿಕೊಳ್ಳುವುದು. ಒಂದೇ ಕ್ಷೇತ್ರದ ಸಂಸ್ಥೆಗಲ್ಲಿ ಹೂಡಿಕೆ ಮಾಡುವುದು ಅಪಾಯಕಾರಿ. ಎಲ್ಲಾ ಮೊಟ್ಟೆಗಳನ್ನು ಒಂದೇ ಬಾಸ್ಕೆಟ್‌ನಲ್ಲಿಟ್ಟರೆ ಅಪಾಯ ಹೆಚ್ಚಲ್ಲವೇ?
ಇಂಥ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ಹೂಡಿಕೆ ಭದ್ರವಾಗುವುದರ ಜೊತೆಗೆ ಗಳಿಕೆಯೂ ಉತ್ತಮವಾಗಿರುತ್ತದೆ. ದೀರ್ಘಾವಧಿಯಲ್ಲಿ ಒಳ್ಳೆಯ ಗಳಿಕೆ ಮಾಡುವ ಉದ್ದೇಶವಿದ್ದರೆ ಸಮಗ್ರ ಮಾಹಿತಿ ಪಡೆದು ಜವಾಬ್ದಾರಿಯುತವಾಗಿ ಹೂಡಿಕೆ ಮಾಡುವುದು ಅಗತ್ಯ.
(ಲೇಖಕ: ಐಸಿಐಸಿಐ ಪ್ರುಡೆನ್ಶಿಯಲ್ ಎಎಂಸಿ ಸಿಇಒ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.