ADVERTISEMENT

ಎಚ್‌ಪಿಸಿಎಲ್‌ ಲಾಭ ಶೇ 25ರಷ್ಟು ಕುಸಿತ

​ಪ್ರಜಾವಾಣಿ ವಾರ್ತೆ
Published 9 ಮೇ 2024, 15:12 IST
Last Updated 9 ಮೇ 2024, 15:12 IST
HPCL
HPCL   

ನವದೆಹಲಿ: 2023–24ನೇ ಹಣಕಾಸು ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ನ (ಎಚ್‌ಪಿಸಿಎಲ್‌) ನಿವ್ವಳ ಲಾಭದಲ್ಲಿ ಶೇ 25ರಷ್ಟು ಇಳಿಕೆಯಾಗಿದೆ.

2022–23ನೇ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ₹3,608 ಕೋಟಿ ಲಾಭ ಗಳಿಸಿತ್ತು. ಈಗ ₹2,709 ಕೋಟಿ ಗಳಿಸಿದೆ ಎಂದು ಕಂಪನಿಯು, ಷೇರುಪೇಟೆಗೆ ತಿಳಿಸಿದೆ.

ಲಾಭ ಇಳಿಕೆಗೆ ಕಾರಣವೇನು:

ಲೋಕಸಭಾ ಚುನಾವಣೆಯಿಂದಾಗಿ ಕೇಂದ್ರ ಸರ್ಕಾರವು ಮಾರ್ಚ್‌ನಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯನ್ನು ಪ್ರತಿ ಲೀಟರ್‌ಗೆ ₹2 ಕಡಿತಗೊಳಿಸಿತು. ಇದು ಎಚ್‌ಪಿಸಿಎಲ್‌ ಸೇರಿ ಉಳಿದ ಎರಡು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಮೇಲೆ ಪರಿಣಾಮ ಬೀರಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿದ್ದ ವೇಳೆ ದೇಶದಲ್ಲಿ ಇಂಧನದ ಬೆಲೆ ಕಡಿತಗೊಳಿಸಿದ್ದರಿಂದ ಲಾಭದ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದು ಕಂಪನಿ ತಿಳಿಸಿದೆ.

ADVERTISEMENT

ಕಂಪನಿ ವಹಿವಾಟಿನಲ್ಲಿ ಏರಿಕೆಯಾಗಿದ್ದು, ₹1.15 ಲಕ್ಷ ಕೋಟಿಯಿಂದ ₹1.22 ಲಕ್ಷ ಕೋಟಿಗೆ ಹೆಚ್ಚಳವಾಗಿದೆ ಎಂದು ತಿಳಿಸಿದೆ.

ಪ್ರತಿ ಎರಡು ಷೇರಿಗೆ ಲಾಭಾಂಶದ ರೂಪದಲ್ಲಿ ಉಚಿತವಾಗಿ ಒಂದು ಷೇರು ವಿತರಿಸಲು ಆಡಳಿತ ಮಂಡಳಿಯು ಅನುಮೋದನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.