ನವದೆಹಲಿ: ಸರ್ಕಾರಿ ಸ್ವಾಮ್ಯದ ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ಪ್ರಸಕ್ತ ಹಣಕಾಸು ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹5,827 ಕೋಟಿ ನಿವ್ವಳ ಲಾಭ ಗಳಿಸಿದೆ.
ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹2,475 ಕೋಟಿಯಷ್ಟು ನಷ್ಟ ಆಗಿತ್ತು ಎಂದು ಕಂಪನಿಯು ಷೇರುಪೇಟೆಗೆ ತಿಳಿಸಿದೆ. ಕಚ್ಚಾ ತೈಲ ದರ ಇಳಿಕೆ ಆಗಿದ್ದರೂ ಪೆಟ್ರೋಲ್, ಡೀಸೆಲ್ ಮಾರಾಟ ದರ ಕಡಿಮೆ ಮಾಡದೇ ಇದ್ದಿದ್ದರಿಂದ ಲಾಭ ಆಗಿದೆ. ಆದರೆ, ಕಳೆದ ವರ್ಷ ಕಚ್ಚಾ ತೈಲ ದರ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದ್ದಾಗ ಇಂಧನ ಮಾರಾಟ ದರ ಹೆಚ್ಚಿಸಿರಲಿಲ್ಲ. ಅದರಿಂದ ಆಗಿದ್ದ ನಷ್ಟವನ್ನು ಈಗ ಸರಿಪಡಿಸಿಕೊಳ್ಳಲಾಗಿದೆ ಎಂದು ಕಂಪನಿ ತಿಳಿಸಿದೆ.
ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ವರಮಾನವು ₹1.13 ಲಕ್ಷ ಕೋಟಿಯಿಂದ ₹1.02 ಲಕ್ಷ ಕೋಟಿಗೆ ಇಳಿಕೆ ಕಂಡಿದೆ ಎಂದು ಹೇಳಿದೆ. 2022ರ ಏಪ್ರಿಲ್–ಸೆಪ್ಟೆಂಬರ್ ಅವಧಿಯಲ್ಲಿ ಕಂಪನಿಗೆ ₹15,118 ಕೋಟಿ ನಷ್ಟ ಆಗಿತ್ತು. 2023ರ ಏಪ್ರಿಲ್–ಸೆಪ್ಟೆಂಬರ್ ಅವಧಿಯಲ್ಲಿ ₹16,389 ಕೋಟಿ ಲಾಭ ಗಳಿಸಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.