ADVERTISEMENT

ಫೇರ್‌ ಆ್ಯಂಡ್‌ ಲವ್ಲಿಯಲ್ಲಿ ‘ಫೇರ್’ ಪದ ಕೈಬಿಡಲು ಎಚ್‌ಯುಎಲ್‌ ನಿರ್ಧಾರ

ಪಿಟಿಐ
Published 26 ಜೂನ್ 2020, 3:00 IST
Last Updated 26 ಜೂನ್ 2020, 3:00 IST
ಫೇರ್‌ ಆ್ಯಂಡ್‌ ಲವ್ಲಿ
ಫೇರ್‌ ಆ್ಯಂಡ್‌ ಲವ್ಲಿ   

ಬೆಂಗಳೂರು:ಕಪ್ಪು ಮೈಬಣ್ಣದವರ ವಿರುದ್ಧದ ಧೋರಣೆಯನ್ನು ಉತ್ತೇಜಿಸಲಾಗುತ್ತಿದೆ ಎಂದು ಬಹುದಿನಗಳಿಂದ ಟೀಕೆಗೆ ಗುರಿಯಾಗಿದ್ದ ಯುನಿಲಿವರ್‌ ಸೌಂದರ್ಯವರ್ಧಕ ಕಂಪೆನಿಯ ಭಾರತೀಯ ಘಟಕವು, ತನ್ನ ‘ಫೇರ್‌ ಆ್ಯಂಡ್ ಲೈವ್ಲಿ’ ಬ್ರಾಂಡ್‌ನಿಂದ ‘ಫೇರ್‌’ ಪದವನ್ನು ಕೈಬಿಡಲು ನಿರ್ಧರಿಸಿರುವುದಾಗಿ ತಿಳಿಸಿದೆ.

ಜನಾಂಗೀಯ ತಾರತಮ್ಯದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ‘ಬ್ಲ್ಯಾಕ್ ಲೈವ್ಸ್ ಮ್ಯಾಟರ್’ ಅಭಿಯಾನದಿಂದಾಗಿ ಹಿನ್ನಡೆ ಉಂಟಾದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಆದರೆ, ಈ ಅಭಿಯಾನಕ್ಕೂ ಕಂಪೆನಿ ನಿರ್ಧಾರಕ್ಕೂ ಸಂಬಂಧವಿಲ್ಲ ಎಂದಿರುವಹಿಂದೂಸ್ತಾನ್‌ ಯೂನಿಲಿವರ್‌ ಅಧ್ಯಕ್ಷ ಸಂಜೀವ್‌ ಮೆಹ್ತಾ,‘ಸೌಂದರ್ಯ ಕ್ಷೇತ್ರದಲ್ಲಿ ಸಮಗ್ರತೆ ಮತ್ತು ವೈವಿಧ್ಯತೆಯನ್ನು ಕಾಪಾಡಿಕೊಳ್ಳಲು ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದಿದ್ದಾರೆ.

‘ಫೇರ್‌ ಆ್ಯಂಡ್‌ ಲವ್ಲಿ ಬ್ರ್ಯಾಂಡ್‌ ಮಾತ್ರವಲ್ಲದೆ, ಕಂಪನಿಯ ಬೇರೆ ಉತ್ಪನ್ನಗಳಲ್ಲಿಯೂ ಸೌಂದರ್ಯದ ಸಕಾರಾತ್ಮಕ ದೃಷ್ಟಿಕೋನವು ಪ್ರತಿಫಲಿಸುವಂತೆ ಮಾಡಲಾಗುವುದು’ ಎಂದು ಮೆಹ್ತಾ ಹೇಳಿದ್ದಾರೆ.

ADVERTISEMENT

ಕಾಂತಿಯುತ ಮೈಬಣ್ಣ ಹೊಂದುವ ಸಾಮಾಜಿಕ ಗೀಳಿನಿಂದಾಗಿಚರ್ಮದ ಹೊಳಪು ಹೆಚ್ಚಿಸುವ ಉತ್ಪನ್ನಗಳಿಗೆದಕ್ಷಿಣ ಏಷ್ಯಾದಲ್ಲಿ ಉತ್ತಮವಾದ ಮಾರುಕಟ್ಟೆ ಇದೆ. ಆದರೆ, ಇದನ್ನೇ ಬಂಡವಾಳವಾಗಿಸಿಕೊಂಡಿರುವ ಸೌಂದರ್ಯವರ್ಧಕ ಕಂಪೆನಿಗಳ ಚಿಂತನೆಯನ್ನು ಎಲ್ಲೆಡೆ ಪ್ರಶ್ನಿಸಲಾಗುತ್ತಿದೆ.

‘‘ಫೇರ್’(ಕಪ್ಪಲ್ಲದ ಸೌಂದರ್ಯ), ‘ಬಿಳಿ’ ಮತ್ತು ‘ಬೆಳಕು’ ಎಂಬ ಪದಗಳು ಸೌಂದರ್ಯದ ಬಗೆಗಿನ ಒಂದೇ ಅರ್ಥವನ್ನು ನೀಡುತ್ತವೆ ಎಂಬುದನ್ನು ನಾವು ಮನಗಂಡಿದ್ದೇವೆ. ಇದು ಸರಿ ಎಂದು ನಾವು ಭಾವಿಸುವುದಿಲ್ಲ ಮತ್ತು ಇದೀಗ ಅದನ್ನು ಪರಿಹರಿಸಲು ಬಯಸುತ್ತೇವೆ’ ಎಂದು ಯುನಿಲಿವರ್‌ನ ಸೌಂದರ್ಯ ಮತ್ತು ‌ವೈಯಕ್ತಿಕ ಆರೈಕೆ ವಿಭಾಗದ ಅಧ್ಯಕ್ಷಸನ್ನಿ ಜೈನ್ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಹೊಸದಾಗಿ‘ಗ್ಲೋ ಆ್ಯಂಡ್‌ ಲವ್ಲಿ’ಎಂದು ಬಳಸಲಾಗುವುದು. ಈ ಬದಲಾವಣೆಗೆ ಟ್ರೇಡ್‌ಮಾರ್ಕ್‌ ರೆಜಿಸ್ಟ್ರೇಷನ್‌ ಅನುಮತಿ ದೊರೆಯಬೇಕಾಗಿದೆ ಎನ್ನಲಾಗಿದೆ.

‘ಫೇರ್‌ ಆ್ಯಂಡ್ ಲವ್ಲಿ’ ದಕ್ಷಿಣ ಏಷ್ಯಾದ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಿದೆ. ಇದೇ ರೀತಿಯ ಉತ್ಪನ್ನಗಳನ್ನು ಲೋರಿಯಲ್‌ ಮತ್ತು ಪ್ರಾಕ್ಟರ್‌ ಆ್ಯಂಡ್ ಗಾಂಬೆಲ್‌ ಕಂಪೆನಿಗಳೂ ಮಾರಾಟ ಮಾಡುತ್ತಿವೆ.

‘...ಲವ್ಲಿ’ಗೆ ಉಂಟಾದ ಹಿನ್ನಡೆಯನ್ನು ಪರಿಗಣಿಸಿ ಚರ್ಚೆ ನಡೆಸುವುದಾಗಿ ಲೋರಿಯಲ್‌ ಕಂಪೆನಿ ಮೂಲಗಳು ತಿಳಿಸಿವೆ.‘ಚರ್ಮದ ಹೊಳವು, ಬಿಳುಪುಗೊಳಿಸುವುದು, ಕಾಂತಿ ಹೆಚ್ಚಿಸುವುದು –ಇಂತಹ ಪದಗಳನ್ನು ಎಲ್ಲ ಉತ್ಪನ್ನಗಳ ಲೇಬಲ್‌ಗಳಿಂದ ಹಿಂಪಡೆಯುವ ಸಾಧ್ಯತೆ ಇದೆ’ ಎಂದು ಹೇಳಲಾಗಿದೆ.ಆದಾಗ್ಯೂ, ಈ ಬಗ್ಗೆ ಪ್ರತಿಕ್ರಿಯಿಸಲು ಲೋರಿಯಲ್‌ ಇಂಡಿಯಾ ನಿರಾಕರಿಸಿದೆ.

ಚರ್ಮವನ್ನು ಬಿಳುಪುಗೊಳಿಸುವ ಕ್ರೀಮ್‌ಗಳ ಮಾರಾಟವನ್ನು ಈ ತಿಂಗಳು ನಿಲ್ಲಿಸುವುದಾಗಿ ಜಾನ್ಸನ್‌ ಆ್ಯಂಡ್ ಜಾನ್ಸನ್‌ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.