ಮುಂಬೈ: ಟಾಟಾ ಮೋಟರ್ಸ್ ಮಾಲೀಕತ್ವದ ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ ಸರಣಿಯ ಕಾರುಗಳ ವಿನ್ಯಾಸಕ್ಕೆ ಮನಸೋಲದವರು ವಿರಳ. ಆದರೆ, ರತನ್ ಟಾಟಾ ಅವರು, ಈ ಕಂಪನಿಗಳನ್ನು ಖರೀದಿಸಿದ ಹಿಂದೆ ಸ್ಫೂರ್ತಿದಾಯಕ ಕಥೆಯೊಂದಿದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ.
ಅದು 1998ರ ಸಮಯ. ರತನ್ ಟಾಟಾ ಅವರು ತನ್ನ ಕನಸಿನ ಯೋಜನೆಯಾದ ಟಾಟಾ ಇಂಡಿಕಾ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿದರು. ಇದು ಭಾರತದ ಮೊದಲ ಹ್ಯಾಚ್‌ಬ್ಯಾಕ್ ಡೀಸೆಲ್ ಕಾರು. ಆದರೆ, ಅವರು ನಿರೀಕ್ಷಿಸಿದಷ್ಟು ಮಾರಾಟವಾಗಲಿಲ್ಲ. ಹಾಗಾಗಿ, ಒಂದೇ ವರ್ಷದಲ್ಲಿ ಟಾಟಾ ಮೋಟರ್ಸ್‌ನ ಮಾರಾಟಕ್ಕೆ ನಿರ್ಧರಿಸಿದರು.
ಇದಕ್ಕಾಗಿ ಅಮೆರಿಕದ ಅತಿದೊಡ್ಡ ಕಾರು ತಯಾರಿಕಾ ಕಂಪನಿ ಫೋರ್ಡ್ ಮೋಟರ್ಸ್ ಅನ್ನು 1999ರಲ್ಲಿ ಸಂಪರ್ಕಿಸಿದರು. ಕಂಪನಿಯು ಅಧಿಕಾರಿಗಳು ಬಾಂಬೆ ಹೌಸ್‌ಗೂ ಬಂದರು. ಮಾತುಕತೆ ವೇಳೆ ಅವರು ಖರೀದಿಗೆ ನಿರಾಸಕ್ತಿವಹಿಸುತ್ತಿರುವುದು ರತನ್ ಅವರ ಅರಿವಿಗೆ ಬಂದಿತು.
ಕೊನೆಗೆ, ರತನ್ ಹಾಗೂ ಅವರ ತಂಡವು ಫೋರ್ಡ್ ಮುಖ್ಯಸ್ಥ ಬಿಲ್ ಫೋರ್ಡ್ ಅವರನ್ನು ಖುದ್ದಾಗಿ ಭೇಟಿ ಮಾಡಲು ಡೆಟ್ರಾಯಿಟ್‌ಗೆ ವಿಮಾನವೇರಿದರು. ಮೂರು ಗಂಟೆ ಮಾತುಕತೆ ನಡೆದರೂ ಫಲಶ್ರುತಿ ಕಾಣಲಿಲ್ಲ.
‘ನಿಮಗೆ ಏನೂ ಗೊತ್ತಿಲ್ಲ. ಹಾಗಿದ್ದರೂ ಪ್ರಯಾಣಿಕ ಕಾರು ಮಾರಾಟ ವಿಭಾಗ ಪ್ರವೇಶಿಸಿದ್ದು ಏಕೆ’ ಎಂದು ಬಿಲ್ ಫೋರ್ಡ್ ಅವಮಾನಿಸಿದರಂತೆ. ಈ ಸಂಗತಿಯನ್ನು ತಂಡದಲ್ಲಿದ್ದ ಪ್ರವೀಣ್ ಕಡ್ಲೆ ಅವರು, 2015ರಲ್ಲಿ ನಡೆದ ಸಮಾರಂಭವೊಂದರಲ್ಲಿ ಮೆಲುಕು ಹಾಕಿದ್ದರು.
ಮಾತುಕತೆ ವಿಫಲಗೊಂಡ ಬಳಿಕ ಭಾರತಕ್ಕೆ ಬಂದಿಳಿದ ಅವರು, ಟಾಟಾ ಮೋಟರ್ಸ್ ಅನ್ನು ಮಾರಾಟ ಮಾಡದಿರಲು ನಿರ್ಧರಿಸಿದರು. ಅಂದಿನಿಂದ ಟಾಟಾ ಬ್ರ್ಯಾಂಡ್ ಕಟ್ಟುವ ಶಪಥಗೈದರು. ಆ ನಂತರ ಒಂಬತ್ತು ವರ್ಷದಲ್ಲಿ ನಡೆದಿದ್ದು ರೋಚಕ ಕಥೆ.
2008ರಲ್ಲಿ ಆರ್ಥಿಕ ಹಿಂಜರಿಕೆಯಿಂದಾಗಿ ಫೋರ್ಡ್ ಕಂಪನಿಯು ಸಂಕಷ್ಟದ ಸುಳಿಗೆ ಸಿಲುಕಿತು. ಆಗ ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ ಕಂಪನಿ (ಜೆಎಲ್‌ಆರ್) ಖರೀದಿಸಲು ಫೋರ್ಡ್ ಮುಂದೆ ಟಾಟಾ ಮೋಟರ್ಸ್ ಪ್ರಸ್ತಾಪವಿಟ್ಟಿತು. ಅದೇ ವರ್ಷದ ಜೂನ್‌ನಲ್ಲಿ ₹19 ಸಾವಿರ ಕೋಟಿ ಮೌಲ್ಯದ ಒಪ್ಪಂದ ಪೂರ್ಣಗೊಂಡಿತು.
‘ನೀವು ಜೆಎಲ್ಆರ್ ಖರೀದಿಸುವ ಮೂಲಕ ನಮಗೆ ದೊಡ್ಡ ಉಪಕಾರ ಮಾಡಿದ್ದೀರಿ’ ಎಂದು ಬಿಲ್ ಫೋರ್ಡ್ ಅವರು, ರತನ್ ಟಾಟಾ ಅವರಿಗೆ ಧನ್ಯವಾದ ಅರ್ಪಿಸಿದರಂತೆ.
ಪ್ರಸ್ತುತ ಜಾಗತಿಕ ಮಟ್ಟದ ಆಟೊಮೊಬೈಲ್ ವಲಯದಲ್ಲಿ ಟಾಟಾ ಮೋಟರ್ಸ್ ಅದ್ವಿತೀಯ ಸಾಧನೆ ಮಾಡಿದೆ. ಜೆಎಲ್‌ಆರ್ ಟಾಟಾ ಮೋಟರ್ಸ್‌ನ ಆಧಾರ ಸ್ತಂಭವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.